ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದೊಂದಿಗೆ ಹೊಂದಾಣಿಕೆ ಮತ್ತು ಸೌಹಾರ್ದೆತೆಯಿಂದ ಕೆಲಸ ಮಾಡಬೇಕು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಸಾಮರ್ಥ್ಯ ಏನೂ ಎನ್ನುವುದು ಎನ್.ಚಲುವರಾಯಸ್ವಾಮಿ ಅವರಿಗೆ ಗೊತ್ತಿದೆ. ಜಿಲ್ಲೆಗೆ ಕೈಗಾರಿಕೆ ಮತ್ತು ಆಸ್ಪತ್ರೆ ತರಲು ನಮ್ಮ ನಾಯಕರು ಸಿದ್ಧರಿದ್ದಾರೆ. ಮೊದಲು ಜಾಗ ನೀಡಲಿ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೈಗಾರಿಕೆ ಸ್ಥಾಪನೆಗೆ ಮೊದಲು ಜಾಗವನ್ನು ಸಂಬಂಧಪಟ್ಟ ಇಲಾಖೆಗೆ ನೀಡುವ ಕೆಲಸ ಮಾಡದೇ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರೇ ಹಿಟ್ ಆಂಡ್ ರನ್ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿರುಗೇಟು ನೀಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದೊಂದಿಗೆ ಹೊಂದಾಣಿಕೆ ಮತ್ತು ಸೌಹಾರ್ದೆತೆಯಿಂದ ಕೆಲಸ ಮಾಡಬೇಕು. ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಸಾಮರ್ಥ್ಯ ಏನೂ ಎನ್ನುವುದು ಎನ್.ಚಲುವರಾಯಸ್ವಾಮಿ ಅವರಿಗೆ ಗೊತ್ತಿದೆ. ಜಿಲ್ಲೆಗೆ ಕೈಗಾರಿಕೆ ಮತ್ತು ಆಸ್ಪತ್ರೆ ತರಲು ನಮ್ಮ ನಾಯಕರು ಸಿದ್ಧರಿದ್ದಾರೆ. ಮೊದಲು ಜಾಗ ನೀಡಲಿ ಎಂದು ಆಗ್ರಹಿಸಿದರು.ಜಿಲ್ಲಾ ಸಚಿವರು, ಶಾಸಕರು ಮೊದಲು ಜಾಗ ಯಾವುದು ಎನ್ನುವುದನ್ನು ಸ್ಪಷ್ಟಪಡಿಸಿ ಕಾಯ್ದಿರಿಸಿರುವ ಬಗ್ಗೆ ಖಾತರಿ ಪಡಿಸಿದಾಗ ಮಾತ್ರ ಕೈಗಾರಿಕೆ ಸ್ಥಾಪನೆಗೆ ಸಂಬಂಧಪಟ್ಟ ಇಲಾಖೆ ಮುಂದಾಗುವುದು. ಸುಮ್ಮನೆ ನಮ್ಮನ್ನು ಟೀಕಿಸುವುದನ್ನು ಬಿಟ್ಟು ಕೇಂದ್ರ ಸಚಿವರೊಂದಿಗೆ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಿ ಎಂದರು.
ಮೇಕೆದಾಟು ಯೋಜನೆ ವಿಚಾರದಲ್ಲಿ ಸಹಕಾರ ನೀಡುವುದಾಗಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಕೋರ್ಟ್ ನಲ್ಲಿ ಅರ್ಜಿ ವಜಾ ಆದ ಮೇಲೆ ಕೇಂದ್ರ ಸಚಿವರೊಂದಿಗೆ ಚರ್ಚಿಸಬೇಕು. ಆದರೆ, ಈ ಬಗ್ಗೆ ಏಕೆ ಚರ್ಚೆ ಮಾಡುತ್ತಿಲ್ಲ ಎಂದು ಸಚಿವರನ್ನು ಕುಟುಕಿದರು.ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಸಮರ್ಥಿಸಿಕೊಂಡು ಅವರು, ಈ ಹಿಂದೆ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಅನೇಕ ಮಂದಿಗೆ ಎಚ್.ಡಿ.ಕುಮಾರಸ್ವಾಮಿ ಅವರು ವೈಯಕ್ತಿಕ ಪರಿಹಾರ ನೀಡಿದ್ದಾರೆ. ಈ ಬಗ್ಗೆ ಸದನದಲ್ಲಿ ನಮ್ಮ ಪಕ್ಷದ ಶಾಸಕರು ಚರ್ಚಿಸಲು ಸಿದ್ಧರಿದ್ದಾರೆ. ಆದರೆ, ರಾಜ್ಯ ಸರ್ಕಾರದ ಅವಕಾಶ ನೀಡದೇ ಬೇರೆ ವಿಚಾರಕ್ಕೆ ಪ್ರತಿಭಟನೆ ನಡೆಸುತ್ತಾ ಕಾಲಹರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ತಾಲೂಕಿನ ಅಭಿವೃದ್ಧಿ ಹಾಗೂ ಯುವಕ-ಯುವತಿಯರಿಗೆ ಎಚ್.ಡಿ. ಕುಮಾರಸ್ವಾಮಿ ಅವರು ಉದ್ಯೋಗ ಸೃಷ್ಟಿಸಲು ಕೈಗಾರಿಕೆ ತರಲು ಮುಂದಾಗಿದ್ದಾರೆ. ಇಲ್ಲಿನ ಶಾಸಕರು ಮೊದಲು ಜಾಗವನ್ನು ಕೈಗಾರಿಕಾ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಿ. ಅದನ್ನು ಬಿಟ್ಟು ಸುಮ್ಮನೆ ಟೀಕೆ ಮಾಡುವುದು ಸರಿಯಲ್ಲ. ಕೇಂದ್ರ ಸಚಿವರಿಗೆ ಅವರದ್ದೇ ಆದ ಜವಾಬ್ದಾರಿ ಇದೆ ಎನ್ನುವುದು ಅರಿತುಕೊಳ್ಳಲಿ ಎಂದು ಸಲಹೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಲ್ಲೇಶ್, ಗಿರೀಶ್, ರಮೇಶ್, ರಾಜು, ಚಂದ್ರಶೇಖರ್, ರಾಮಣ್ಣ, ಧನ್ಯಕುಮಾರ್, ಟಿ.ನಂದಕುಮಾರ್, ಸಿದ್ದರಾಜು ಭಾಗವಹಿಸಿದ್ದರು.