ವಿವಿಧ ಕಟ್ಟಡ ಕಾಮಗಾರಿಗಳಿಗೆ ಗೃಹಸಚಿವ ಚಾಲನೆ

| Published : Jul 12 2024, 01:40 AM IST

ಸಾರಾಂಶ

ತೀರ್ಥಹಳ್ಳಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ತಹಸಿಲ್ದಾರ್ ಜಕ್ಕನಗೌಡರ್, ಡಿವೈಎಸ್‍ಪಿ ಗಜಾನನ ವಾಮನ ಸುತಾರ್ ಇದ್ದರು.

48 ಕಾನ್ಸೆಟೇಬಲ್ ವಸತಿ ಗೃಹ ಸಮುಚ್ಚಯ ಉದ್ಘಾಟನೆ: ಅರಗ ಜ್ಞಾನೇಂದ್ರಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಗೃಹ ಸಚಿವ ಜಿ.ಪರಮೇಶ್ವರ್ ಜು.13ರಂದು 3ಗಂಟೆಗೆ ತಾಲೂಕಿಗೆ ಆಗಮಿಸಲಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಗೃಹ ಇಲಾಖೆಯ ವತಿಯಿಂದ ಮಂಜೂರಾದ 20.50 ಕೋಟಿ ರು. ವೆಚ್ಚದ ವಿವಿಧ ಕಟ್ಟಡ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲಾ 3 ಕೋಟಿ ವೆಚ್ಚದ ಪಟ್ಟಣದ ರಥಬೀದಿಯಲ್ಲಿ ನಿರ್ಮಾಣಗೊಂಡಿರುವ ಪೊಲೀಸ್ ಠಾಣೆ ಮತ್ತು ಶಿಬಿನಕೆರೆ ಬಡಾವಣೆಯಲ್ಲಿನ ಅಗ್ನಿಶಾಮಕದಳ ಘಟಕ, ಡಿವೈಎಸ್‍ಪಿ ಕ್ವಾರ್ಟ್‍ರ್ಸ್, ನಾಲ್ಕು ಪಿಎಸ್‍ಐ ಮತ್ತು ಕೋಣಂದೂರು ಸೇರಿದಂತೆ 48 ಕಾನ್ಸೆಟೇಬಲ್ ವಸತಿ ಗೃಹ ಸಮುಚ್ಚಯವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ದಿನದ 24 ತಾಸು ತಮ್ಮನ್ನು ತೊಡಗಿಸಿಕೊಂಡು ಕಾನೂನು ಸುವ್ಯವಸ್ಥೆ ನಿರ್ವಹಿಸುವ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕುಟುಂಬಗಳಿಗೆ ಸುವ್ಯವಸ್ಥೆ ಕಲ್ಪಿಸುವ ಸಲುವಾಗಿ ಗೃಹ ಸಚಿವನಾಗಿದ್ದ ಅವಧಿಯಲ್ಲಿ ಮಂಜೂರಾದ ಅತೀ ಹೆಚ್ಚಿನ ಅನುದಾನವಾಗಿದೆ ಎಂದರು.

ಪಟ್ಟಣದ ಸಂಚಾರ ವ್ಯವಸ್ಥೆ ಸಂಬಂಧ ಪಪಂ, ಪೋಲಿಸ್ ಮತ್ತು ಇತರೆ ಸಂಘಟನೆಗಳ ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುವುದು. ಹತ್ತಾರು ವರ್ಷಗಳಿಂದ ಕುಸಿದು ಬಿದ್ದಿರುವ ಆಗುಂಬೆಯಲ್ಲಿರುವ ಬ್ರಿಟೀಷರ ಕಾಲದ ಹಳೆಯ ಪೊಲೀಸ್ ಠಾಣೆ ಕಟ್ಟಡದಲ್ಲಿ ಲಕ್ಷಾಂತರ ರು. ಬೆಲೆ ಬಾಳುವ ನಾಟಾ ಮತ್ತು ಕಲ್ಲುಗಳಿವೆ. ಈ ಬಗ್ಗೆ ಜಿಲ್ಲಾ ರಕ್ಷಾಣಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಈ ಕಟ್ಟಡ ತೆರವುಗೊಳಿಸಿ ಪ್ರವಾಸಿ ಕೇಂದ್ರವಾದ ಆ ಜಾಗದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಡಿವೈಎಸ್‍ಪಿ ಗಜಾನನ ವಾಮನ ಸುತಾರ್ ಮಾತನಾಡಿ, ತಾಲೂಕಿನ ಪ್ರಮುಖ ಧಾರ್ಮಿಕ ಕೇಂದ್ರವಾದ ಹಣಗೆರೆಕಟ್ಟೆಯಲ್ಲಿರುವ ವಸತಿ ನಿಲಯಗಳಿಗೆ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ವಸತಿ ನಿಲಯಗಳ ಮಾಲೀಕರುಗಳಿಗೆ ಸೂಚಿಸಲಾಗಿದೆ ಎಂದರು.

ಈ ವೇಳೆ ತಹಸೀಲ್ದಾರ್ ಜಕ್ಕನಗೌಡರ್, ತಾಪಂ ಇಒ ಎಂ.ಶೈಲಾ, ಅಗ್ನಿಶಾಮಕದಳದ ಅಧಿಕಾರಿ ಮಹಾಲಿಂಗಪ್ಪ, ಪೋಲಿಸ್ ಇನ್ಸ್‍ಪೆಕ್ಟರ್ ಅಶ್ವಥ್ಥಗೌಡ, ಗ್ರಾಮೀಣ ಸಿಪಿಐ ಶ್ರೀಧರ್ ಇದ್ದರು.