ಜಿಲ್ಲಾಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ

| Published : Jul 12 2024, 01:40 AM IST

ಜಿಲ್ಲಾಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಜಿಲ್ಲಾಸ್ಪತ್ರೆಗೆ ಗುರುವಾರ ಭೇಟಿ ನೀಡಿ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ದೊರೆಯುತ್ತಿರುವ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು.

ಕನ್ನಡಪ್ರಭವಾರ್ತೆ ಚಾಮರಾಜನಗರ

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಜಿಲ್ಲಾಸ್ಪತ್ರೆಗೆ ಗುರುವಾರ ಭೇಟಿ ನೀಡಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಅದರಲ್ಲೂ ಮಹಿಳೆಯರಿಗೆ ದೊರೆಯುತ್ತಿರುವ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು.

ಮೊದಲಿಗೆ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಭೇಟಿ ನೀಡಿ, ಅಲ್ಲಿನ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಸಂಬಂಧಪಟ್ಟ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳನ್ನು ಆತ್ಮೀಯತೆಯಿಂದ ಮಾತನಾಡಿಸಿದರು. ವೈದ್ಯಕೀಯ ಸೌಲಭ್ಯಗಳು ಸಕಾಲದಲ್ಲಿ ದೊರೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಂಡರು. ಬಳಿಕ ಐಸಿಯು ಘಟಕಕ್ಕೆ ಭೇಟಿ ನೀಡಿ ಅಲ್ಲಿಯೂ ಸಹ ದಾಖಲಾಗಿದ್ದ ರೋಗಿಗಳನ್ನು ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ವಿಚಾರಿಸಿದರು. ವೈದ್ಯರು, ಶುಶ್ರೂಷಕರು ಸರಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆಯೇ? ಆಸ್ಪತ್ರೆ ವ್ಯವಸ್ಥೆಗಳಲ್ಲಿ ಏನಾದರೂ ಕೊರತೆ ಕಂಡುಬಂದಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ಸ್ವತಃ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರಿಂದ ತಿಳಿದುಕೊಂಡರು.

ವಾರ್ಡ್ ಹೊರಭಾಗದಲ್ಲಿ ಕುಳಿತಿದ್ದ ಮಹಿಳೆಯರನ್ನು ಮಾತನಾಡಿಸಿ, ವೈದ್ಯಕೀಯ ಚಿಕಿತ್ಸೆ ಪಡೆಯಲು ವೈದ್ಯರು ಸ್ಪಂದಿಸುತ್ತಿರುವರೇ? ಸರ್ಕಾರದ ಸೌಲಭ್ಯಗಳು ದೊರೆಯುತ್ತಿವೆಯೇ?, ಗೃಹಲಕ್ಷ್ಮೀ ಸೌಲಭ್ಯಕ್ಕೆ ಒಳಪಟ್ಟಿದ್ದೀರಾ?, ಕಾಲಕಾಲಕ್ಕೆ ಪಿಂಚಣಿ ಸಿಗುತ್ತಿದೆಯೇ ಎಂಬ ಬಗ್ಗೆ ಮಹಿಳೆಯರಿಂದ ವಿವರ ಪಡೆದರು. ನಂತರ ಆಸ್ಪತ್ರೆಯ ಆವರಣವನ್ನು ವೀಕ್ಷಿಸಿ, ಅಲ್ಲಿನ ಸ್ವಚ್ಚತೆ ಬಗ್ಗೆ ಪರಿಶೀಲಿಸಿದರು. ಆಸ್ಪತ್ರೆಯ ಹೊರ ಆವರಣದಲ್ಲಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಗಿಡಗಂಟಿಗಳು ಬೆಳೆಯದಂತೆ ಆಗಾಗ್ಗೆ ವಿಲೇವಾರಿ ಮಾಡಿಸಬೇಕು. ಅಲ್ಲದೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕುಡಿಯಲು ಶುದ್ಧ ನೀರು, ಉತ್ತಮ ಶೌಚಾಲಯ ವ್ಯವಸ್ಥೆ ಮಾಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಆಸ್ಪತ್ರೆಯಲ್ಲಿ ಐಸಿಸಿ (ಇಂಟರ್‌ನಲ್ ಕಂಪ್ಲೈಟ್ ಕಮಿಟಿ) ಇರಬೇಕು. ಮಹಿಳೆಯರು ಫೋಕ್ಸೋದಂತಹ ಯಾವುದೇ ತೊಂದರೆ ಎದುರಾದರೂ ದೂರು ದಾಖಲಿಸಲು ಅನುಕೂಲವಾಗುವಂತೆ ಐಸಿಸಿ ನಿರ್ವಹಿಸುವ ವ್ಯವಸ್ಥೆಯಾಗಬೇಕು ಎಂದು ತಿಳಿಸಿದರು. ಕುಡಿಯುವ ನೀರಿನ ಶುದ್ಧತೆ ಖಚಿತಪಡಿಸಿಕೊಳ್ಳಲು ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿರುವ ಓವರ್ ಹೆಡ್ ಟ್ಯಾಂಕ್ ನೀರನ್ನು ಭಾವಚಿತ್ರದ ಮುಖೇನ ಪರಿಶೀಲಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ವೈದ್ಯಕೀಯ ವಿಜ್ಞಾನ ಸಂಸ್ಥೇಯ ಡೀನ್ ಡಾ. ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರ, ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಕೃಷ್ಣಪ್ರಸಾದ್, ಅರವಳಿಕೆ ತಜ್ಞ ಡಾ. ಮಹೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್, ಆರೋಗ್ಯ ಅಧಿಕಾರಿಗಳು, ಇತರರು ಇದೇ ವೇಳೆ ಇದ್ದರು.