ಸಾರಾಂಶ
ಪಟ್ಟಣ ಠಾಣೆಯ ಪಿಐ ಲಖನ್ ಆರ್.ಮಸಗುಪ್ಪಿ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಹೊಸಪೇಟೆ: ಹೊಸಪೇಟೆಯಲ್ಲಿ ಬಂಗಾರದ ಒಡವೆಗಳಿದ್ದ ಬ್ಯಾಗ್‌ನ್ನು ಕಳೆದುಕೊಂಡಿದ್ದ ಹೂವಿನಹಡಗಲಿಯ ನಿವಾಸಿ ಮುದುಕಪ್ಪ ಶೇಗಡಿ ಅವರಿಗೆ ಬುಧವಾರ ಮರಳಿಸಿ ತಾಲೂಕಿನ ಮಲಪನಗುಡಿ ನಿವಾಸಿ ರಾಘವೇಂದ್ರ ಪ್ರಾಮಾಣಿಕತೆ ಮೆರೆದಿದ್ದಾರೆ.
ಲಕ್ಷಾಂತರ ರು. ಮೌಲ್ಯದ 45 ಗ್ರಾಂನ ಚಿನ್ನದ ಸರ, ಕಿವಿಯೋಲೆ, ಮೂರು ಉಂಗುರ ಮತ್ತು 80 ಗ್ರಾಂನ ಬೆಳ್ಳಿಯ ಕಡಗ, ದೇವಿಯ ಮೂರ್ತಿಯ ಆಭರಣಗಳಿದ್ದವು. ಈ ಬ್ಯಾಗ್ ಸಿಕ್ಕಿದ್ದ ರಾಘವೇಂದ್ರ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣಗಳನ್ನು ಪರಿಶೀಲಿಸಿ ಎಎಸ್ಪಿ ಸಲೀಂ ಪಾಷಾ ಮತ್ತು ಪಟ್ಟಣ ಠಾಣೆಯ ಪಿಐ ಲಖನ್ ಆರ್.ಮಸಗುಪ್ಪಿ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ರಾಘವೇಂದ್ರ ಅವರ ಪ್ರಾಮಾಣಿಕತೆ ಮೆಚ್ಚಿದ ಪೊಲೀಸರು ಸನ್ಮಾನಿಸಿ, ಸಿಹಿ ತಿನಿಸಿ ಅಭಿನಂದಿಸಿದರು. ಜೊತೆಗೆ ₹10 ಸಾವಿರ ನಗದು ಬಹುಮಾನ ನೀಡಿದರು. ಒಡವೆಗಳ ಮಾಲೀಕರು ಮತ್ತು ಕುಟುಂಬದವರು ರಾಘವೇಂದ್ರ ಅವರಿಗೆ ಧನ್ಯವಾದ ತಿಳಿಸಿದರು.
ಬ್ಯಾಗ್ ಹೇಗೆ ಸಿಕ್ಕಿತು?: ಹಡಗಲಿಯ ಮುದುಕಪ್ಪ ಶೇಗಡಿ ಎಂಬವರು ತಮ್ಮೂರಿನಿಂದ ಬಸ್ ನಲ್ಲಿ ನಗರದಲ್ಲಿನ ತನ್ನ ಪುತ್ರನ ಮನೆಗೆ ಬರುವಾಗ ನಗರದ ಎಪಿಎಂಸಿ ವೃತ್ತದಲ್ಲಿ ಇಳಿದಿದ್ದಾರೆ. ಆದರೆ, ತನ್ನ ಎರಡು ಬ್ಯಾಗ್‌ಗಳ ಪೈಕಿ ಒಂದನ್ನು ಬಿಟ್ಟಿದ್ದರು. ಈ ಬ್ಯಾಗ್ ಅದೃಷ್ಟವಶಾತ್ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಅದೇ ವೇಳೆ ಅಲ್ಲಿಯೇ ಕೋರಿಯರ್ ಪಡೆಯಲು ಕಾಯುತ್ತಿದ್ದ ರಾಘವೇಂದ್ರ ಅವರಿಗೆ ನೀಡಿದ್ದಾರೆ. ಈ ವೇಳೆ ಅರ್ಧ ಗಂಟೆಗೂ ಅಧಿಕ ಕಾಲ ಅಲ್ಲೇ ಯಾರಾದರೂ ಬಂದರೆ ಹಿಂದಿರುಗಿಸಲು ಕಾದಿದ್ದಾರೆ. ಬಳಿಕ ಕೇಂದ್ರ ಬಸ್ ನಿಲ್ದಾಣದ ಬಳಿಗೂ ಬಂದಿದ್ದಾರೆ. ಆದರೆ, ಇವರು ತೆರಳಿದ ಬಳಿಕವಷ್ಟೇ ಮುದುಕಪ್ಪ ಶೇಗಡಿ ಅಲ್ಲಿಗೆ ಬಂದಿದ್ದಾರೆ. ರಾತ್ರಿ ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿ ಬಂಗಾರ ನೋಡಿದ ರಾಘವೇಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬುಧವಾರ ಪಟ್ಟಣ ಪೊಲೀಸ್ ಠಾಣೆಗೆ ಬಂದು ಬ್ಯಾಗ್ ಹಿಂದಿರುಗಿಸಿದ ಬಳಿಕ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.