ಗೀತೆ ಅಧ್ಯಯನದಿಂದ ತ್ರಿಕರಣ ಶುದ್ಧ ತೀರ್ಪು ಸಾಧ್ಯ: ನ್ಯಾ.ಶ್ರೀಶಾನಂದ

| Published : Dec 26 2024, 01:03 AM IST

ಗೀತೆ ಅಧ್ಯಯನದಿಂದ ತ್ರಿಕರಣ ಶುದ್ಧ ತೀರ್ಪು ಸಾಧ್ಯ: ನ್ಯಾ.ಶ್ರೀಶಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ರಚನಾ ಪೂರ್ವಾ ಸಭೆಯಲ್ಲಿ ಅಂಬೇಡ್ಕರ್ ಅವರೇ ಸರ್ಕಾರದಿಂದ ಅನುದಾನ ಪಡೆಯದೆ ಶಾಲೆಗಳಲ್ಲಿ ಭಗವದ್ಗೀತೆಯನ್ನು ಪಾಠವನ್ನು ಅಭ್ಯಸಿಸಲು ಆಕ್ಷೇಪವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು ಎಂದವರು ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತದ ಮೂಲ ಸಂವಿಧಾನದಲ್ಲಿ ಪ್ರಾರಂಭದ ಪುಟದಲ್ಲಿ ಭಗವದ್ಗೀತೆ, ರಾಮಾಯಣಕ್ಕೆ ಸಂಬಂಧಿಸಿ ಚಿತ್ರಗಳನ್ನು ಚಿತ್ರಿಸಲಾಗಿದೆ. ಸಂವಿಧಾನ ರಚನ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಪಂಡಿತರಿದ್ದು, ಭಗವದ್ಗೀತೆಯ ಬಗ್ಗೆಯೂ ಚರ್ಚೆಯಾಗಿತ್ತು ಎಂಬುದಕ್ಕೆ ಪಂಡಿತ್ ಬಾಲಕೃಷ್ಣ ಶಾಸ್ತ್ರಿ ಭಾಷಣ ಪುಷ್ಟಿ ನೀಡುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಉಚ್ಚ ನ್ಯಾಯಾಲಯದ ನ್ಯಾಯಧೀಶ ನ್ಯಾ.ವಿ. ಶ್ರೀಶಾನಂದ ಅಭಿಪ್ರಾಯಪಟ್ಟರು.

ಬುಧವಾರ ಶ್ರೀಕೃಷ್ಣ ಮಠದ ಗೀತೋತ್ಸವದಲ್ಲಿ ಭಾಗವಹಿಸಿ ‘ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆ’ ವಿಷಯದ ಕುರಿತಾಗಿ ಮಾತನಾಡಿದರು. ಸಂವಿಧಾನ ರಚನಾ ಪೂರ್ವಾ ಸಭೆಯಲ್ಲಿ ಅಂಬೇಡ್ಕರ್ ಅವರೇ ಸರ್ಕಾರದಿಂದ ಅನುದಾನ ಪಡೆಯದೆ ಶಾಲೆಗಳಲ್ಲಿ ಭಗವದ್ಗೀತೆಯನ್ನು ಪಾಠವನ್ನು ಅಭ್ಯಸಿಸಲು ಆಕ್ಷೇಪವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು ಎಂದವರು ಹೇಳಿದರು.

ಸಂವಿಧಾನ ಹಾಗು ಧರ್ಮವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದವರಿಗೆ ಇವೆರಡನ್ನೂ ಒಟ್ಟಿಗೆ ಕೊಂಡೊಯ್ಯಲು ಯಾವುದೇ ತಾಕಲಾಟ ಎಂದೂ ಬರುವುದಿಲ್ಲ. 2018 ರ ಸುಪ್ರೀಂ ಕೋರ್ಟಿನ ಅಂಗಾಂಗ ದಾನ ಪ್ರಕರಣದ ತೀರ್ಪೊಂದರಲ್ಲಿ ಸಾಂವಿಧಾನಿಕ ಪೀಠವು ಭಗವದ್ಗೀತೆಯ ನಿದರ್ಶನ ಪಡೆದು ತೀರ್ಪು ನೀಡಿದ ಬಗ್ಗೆ ಉಲ್ಲೇಖವಿದೆ. ಇಂತಹ ಅನೇಕ ಪ್ರಕರಣಗಳು ಅಧ್ಯಯನ ನಮಗೆ ಸಿಗುತ್ತದೆ ಎಂದರು.

ಕುಕೃತ್ಯ ಮಾಡಿದವರಿಗೆ, ಅವರೊಂದಿಗಿನ ಯಾವುದೇ ಬಾಂಧವ್ಯವನ್ನು ಲೆಕ್ಕಿಸದೇ, ಶಿಕ್ಷೆಯಾಗಲೇಬೇಕು ಎಂದು ಕುರುಕ್ಷೇತ್ರಯುದ್ಧದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಭೋದಿಸಿದ್ದ. ಅಂತೆಯೇ ಭಗವದ್ಗೀತೆಯನ್ನು ಅಧ್ಯಯನ ಮಾಡಿದ ನ್ಯಾಯಧೀಶರು ಆರೋಪಿಯೂ ಅಪರಾಧ ಮಾಡಿದ್ದಾನೆ ಎಂದು ಸಂಶಯಾತೀತವಾಗಿ ಸಾಭೀತಾದರೇ ತ್ರಿಕರಣ ಶುದ್ದಿಯಿಂದ ತೀರ್ಪನ್ನು ಬರೆಯುತ್ತಾನೆ ಎಂದರು.

ಅನೇಕ ಸಿನಿಮಾ, ನಾಟಕಗಳಲ್ಲಿ ನ್ಯಾಯಾಲಯ ಮತ್ತು ಪೋಲಿಸ್ ಇಲಾಖೆಯನ್ನು ತಪ್ಪಾಗಿ ಚಿತ್ರಿಸಲಾಗಿದೆ. ನ್ಯಾಯಾಲಯದ ಕಟಕಟೆಯಲ್ಲಿ ಸಾಕ್ಷಿ ಹೇಳುವವರು ಭಗವದ್ಗೀತೆಯನ್ನು ಮುಟ್ಟಿ ಸಾಕ್ಷಿ ಹೇಳುವ ಪದ್ಧತಿ ಇಲ್ಲ. ಆದರೆ ಅಂತಃಪ್ರಜ್ಞೆಯಿಂದ ಸುಳ್ಳನ್ನೇ ಹೇಳುವುದಿಲ್ಲ ಎಂದು ದೃಢ ಸಂಕಲ್ಪ ಮಾಡಿದವರಿಗೆ ಯಾವ ಪ್ರಮಾಣವು ಬೇಕಿಲ್ಲ‌. ಗೀತೆಯಲ್ಲಿ ಶ್ರೀಕೃಷ್ಣನು ಇದನ್ನೇ ಸಾರಿದ್ದಾನೆ ಎಂದವರು ನುಡಿದರು.

ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು, ಕಿರಿಯ ಶ್ರೀ ಸುಶೀಂಧ್ರತೀರ್ಥರು, ಪತ್ರಕರ್ತೆ ಶೋಭಾ ಮಳವಳ್ಳಿ, ನ್ಯಾಯವಾದಿ ಚಿರಂಜೀವಿ ಭಟ್ ಇದ್ದರು.