ಮಾನವ ಕಲ್ಯಾಣದ ಸಂದೇಶ ಸಾರಿದ ಯೇಸುಕ್ರೀಸ್ತರು

| Published : Dec 26 2024, 01:03 AM IST

ಸಾರಾಂಶ

ಜಗತ್ತಿನಲ್ಲಿ ವಾಸ ಮಾಡುತ್ತಿರುವ ಸಕಲ ಜೀವರಾಶಿಗಳ ಲೇಸನ್ನು ಬಯಸುವುದೇ ನಿಜವಾದ ಧರ್ಮ

ಲಕ್ಷ್ಮೇಶ್ವರ: ಮಾನವರ ಕಲ್ಯಾಣವನ್ನು ತನ್ನ ಜೀವನದ ಗುರಿಯಾಗಿಸಿಕೊಂಡು ಜಗತ್ತಿನ ಎಲ್ಲ ಜೀವ ರಾಶಿಗಳು ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂಬ ಸಂದೇಶ ಸಾರಿದ ಮಹಾನ್‌ ಪುರುಷರು ಯೇಸುಕ್ರಿಸ್ತರು ಆಗಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.

ಅವರು ಬುಧವಾರ ಪಟ್ಟಣದ ಮುಕ್ತಿನಗರದಲ್ಲಿರುವ ಬ್ಲೆಸಿಂಗ್ ಗಾಸ್ಪೆಲ್ ಪ್ರೇಯರ್ ಚರ್ಚನಲ್ಲಿ ನಡೆದ ಕ್ರಿಸ್‌ಮಸ್ ಅಂಗವಾಗಿ ಏಸು ಕ್ರಿಸ್ತನ ಜನ್ಮ ಕ್ರಿಸ್‌ಮಸ್ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಜಗತ್ತಿನಲ್ಲಿ ವಾಸ ಮಾಡುತ್ತಿರುವ ಸಕಲ ಜೀವರಾಶಿಗಳ ಲೇಸನ್ನು ಬಯಸುವುದೇ ನಿಜವಾದ ಧರ್ಮ, ಯಾವ ಧರ್ಮವು ಕನಿಷ್ಟವಲ್ಲ ಯಾವ ಧರ್ಮವು ಶ್ರೇಷ್ಠವಲ್ಲ, ದೇವನೊಬ್ಬ ನಾಮ ಹಲವು ಎನ್ನುವಂತೆ ಏಸುಕ್ರಿಸ್ತನು ಕೂಡಾ ದೇವರ ಅವತಾರವಾಗಿದ್ದಾರೆ ಎಂದು ಹೇಳಿದರು.

ಚರ್ಚನ ಫಾದರ್ ರೆ.ಜಿ.ಎಂ. ನಾಯಕ್ ಮಾತನಾಡಿ, ಯೇಸುಕ್ರಿಸ್ತನ ಸಂದೇಶಗಳು ಸರ್ವರಿಗೂ ಏಳಿಗೆ ಬಯಸುವದಾಗಿವೆ. ಬಡವ, ಬಲ್ಲಿದ, ಜಾತಿ, ವಿಜಾತಿ ಯಾವುದನ್ನು ನೋಡದೆ ಮನುಷ್ಯನನ್ನಾಗಿ ನೋಡು ಎನ್ನುವ ತತ್ವ ಇಡಿ ಜಗತ್ತಿಗೆ ಯೇಸುಕ್ರಿಸ್ತರವರು ತೋರಿಸಿಕೊಟ್ಟಿದ್ದಾರೆ. ಎಲ್ಲ ಧರ್ಮಗಳು ಒಳ್ಳೆಯದನ್ನು ಬಯಸುವಂತೆ ಹೇಳುತ್ತವೆ, ನಮ್ಮ ನೆರಹೊರೆಯ ಪರಸ್ಪರರನ್ನು ಪ್ರೀತಿಸದ ಹೊರತು ಮನುಕುಲದ ಉದ್ಧಾರ ಸಾಧ್ಯವಿಲ್ಲ ಎಂದು ಏಸುಕ್ರಿಸ್ತನ ನುಡಿಯಾಗಿತ್ತು. ಇಂತಹ ಮಹಾತ್ಮನ ಸ್ಮರಣೆ ಮಾಡುವ ಕಾರ್ಯ ಮಾಡುವ ಮೂಲಕ ಜಗತ್ತಿಗೆ ಶಾಂತಿ ಸಂದೇಶ ನೀಡಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯಶೋಧಾ ನಾಯಕ್, ಪುರಸಭೆ ಸದಸ್ಯರಾದ ವಿಜಯ ಕರಡಿ, ರಾಮಪ್ಪ ಗಡದವರ, ನಾಗರಾಜ ಹಣಗಿ, ಡಿ.ಎಂ. ಪೂಜಾರ, ಶಿವಲಿಂಗ ಹೊತಗಿಮಠ, ಪ್ರೀತಂ ಮತ್ತು ಪ್ರವೀಣ ಸೇರಿದಂತೆ ಅನೇಕರು ಇದ್ದರು.

ಏಸು ಕ್ರಿಸ್ತನ ಜನ್ಮದಿನದ ಅಂಗವಾಗಿ ಕೇಕ್ ಕತ್ತರಿಸಿ ಯೇಸುವಿನ ಸ್ಮರಣೆ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು. ವಿವಿಧ ಭಾಗಗಳಿಂದ ನೂರಾರು ಭಕ್ತರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.