ಅಟಲ್ ಬಿಹಾರಿ ವಾಜಪೇಯಿ ಉತ್ತಮ ಆಡಳಿತಗಾರರು

| Published : Dec 26 2024, 01:03 AM IST

ಸಾರಾಂಶ

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಬದುಕು ಕಳೆದಿರುವ ಇವರು ಲೋಕಸಭೆಗೆ ಒಂಬತ್ತು ಬಾರಿ ಹಾಗೂ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿರುವುದು ಒಂದು ದಾಖಲೆ

ಶಿರಹಟ್ಟಿ: ಅಟಲ್ ಬಿಹಾರಿ ವಾಜಪೇಯಿ ದೇಶ ಕಂಡ ಉತ್ತಮ ಆಡಳಿತಗಾರರು. ಸರಳ ಸಜ್ಜನಿಕೆ ನಾಯಕರಾದ ವಾಜಪೇಯಿ ಅಜಾತಶತ್ರು. ತಮ್ಮ ರಾಜಕೀಯ ಚಿಂತನೆಗಳಿಗೆ ಕಟಿಬದ್ದರಾದವರು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.

ಬುಧವಾರ ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ವಾಜಪೇಯಿ ಅವರ ನೂರನೇ ವರ್ಷದ ಜನ್ಮದಿನ ಆಚರಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ನಂತರ ವಾರ್ಡ್‌ ನಂ.೩, ಭೂತ ನಂ. ೧೧ರಲ್ಲಿ ಭೂತ ಅಧ್ಯಕ್ಷರ ಮನೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಬದುಕು ಕಳೆದಿರುವ ಇವರು ಲೋಕಸಭೆಗೆ ಒಂಬತ್ತು ಬಾರಿ ಹಾಗೂ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿರುವುದು ಒಂದು ದಾಖಲೆಯೇ ಎಂದರು.

ಭಾರತದ ಸ್ವಾತಂತ್ರ್ಯ ನಂತರ ದೇಶಿಯ ಮತ್ತು ವಿದೇಶಿಯ ನೀತಿಗಳಿಗೆ ಸ್ಪಷ್ಟರೂಪ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇವರ ಅಧಿಕಾರವಧಿಯಲ್ಲಿ ಅನೇಕ ಮಹತ್ವದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಗೊಂಡವು. ಪಂಡಿತ್ ದೀನ ದಯಾಳ್ ಉಪಾಧ್ಯಾಯ, ಶಾಮ್ ಪ್ರಸಾದ ಮುಖರ್ಜಿ ಗರಡಿಯಲ್ಲಿ ಪಳಗಿದ ವಾಜಪೇಯಿ ಕವಿ ಹೃದಯಿ. ೨೬ ಪಕ್ಷಗಳ ಮೈತ್ರಿಕೂಟ ಎನ್‌ಡಿಎಯನ್ನು ಯಶಸ್ವಿಯಾಗಿ ಮುನ್ನಡೆಸಿದ ಅಜಾತಶತ್ರು. ವಿಪಕ್ಷದವರೂ ಗೌರವದಿಂದ ಕಾಣುತ್ತಿದ್ದ ಧೀಮಂತ ವ್ಯಕ್ತಿ. ಬರಗಾಲ, ಚಂಡಮಾರುತ, ಭೂಕಂಪ, ಕಾರ್ಗಿಲ್ ಯುದ್ದ, ಸಂಸತ್ ಭವನದ ಮೇಲಿನ ದಾಳಿ ಮುಂತಾದ ಹಲವು ದುರ್ಘಟನೆ, ಸವಾಲುಗಳ ನಡುವೆಯೂ ದೇಶದ ಆರ್ಥಿಕತೆಗೆ ಸ್ಥಿರತೆ ತಂದಿತ್ತರು. ಜತೆಗೆ ಫೋಖರಣ್ ಪರಮಾಣು ಶಸ್ತ್ರ ಪರೀಕ್ಷೆಯೊಂದಿಗೆ ಭಾರತದ ಬಲವರ್ಧನೆಗೆ ಮುಂದಾದರು ಎಂದು ತಿಳಿಸಿದರು.

ವಾಜಪೇಯಿ ಜನ್ಮದಿನವನ್ನು ಸುಶಾಸನ ದಿವಸ ಎಂದು ಆಚರಿಸಲಾಗುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಅಟಲ್ ಜೀ ಅವರಿಗೆ ಅವರೇ ಸಾಟಿ. ಭಾರತೀಯ ಜನಸಂಘದಲ್ಲಿ ಸಕ್ರೀಯರಾಗಿದ್ದು, ಅ ನಂತರ ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿ ಪಕ್ಷ ಮುನ್ನಡೆಸಿದ ಪರಿ ಅನನ್ಯವಾದುದು ಎಂದರು.

ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಪಪಂ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ, ಸಂದೀಪ ಕಪ್ಪತ್ತನವರ, ಗೂಳಪ್ಪ ಕರಿಗಾರ, ನಂದಾ ಪಲ್ಲೇದ, ಅಶೋಕ ವರವಿ, ಬಸವರಾಜ ತುಳಿ, ತುಕ್ಕಪ್ಪ ಪೂಜಾರ, ಬಸವರಾಜ ಚಿಕ್ಕತೋಟದ, ಚನಬಸಪ್ಪ ವರವಿ, ಮಹೇಶ ಕಲ್ಲಪ್ಪನವರ, ಶಿವಪ್ಪ ತುಳಿ, ಮೌನೇಶ ಗೌಳಿ, ಚಂದ್ರಶೇಖರ ಜಿಡಗಣ್ಣವರ, ಹನಮಂತ ಕುರಿ ಇತರರು ಇದ್ದರು.