ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಸಂಘ-ಸಂಸ್ಥೆ ಉಳಿದು ಬೆಳೆಯಬೇಕಾದರೆ ಆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿರಬೇಕು ಎಂದು ಕೌಲಗುಡ್ಡ-ಹನಮಾಪುರ ಸಿದ್ಧಶ್ರೀ ಆಶ್ರಮದ ಅಮರೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಹುಲ್ಲೋಳಿ ಗ್ರಾಮದಲ್ಲಿ ಭಾನುವಾರ ನಡೆದ ಅರಿಹಂತ ಸೌಹಾರ್ದ ಸಹಕಾರಿ ಸಂಘ(ಬ್ಯಾಂಕ್)ದ 25ನೇ ವಾರ್ಷಿಕ ಮಹಾಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಸೇವಾನಿರತ ಈ ಬ್ಯಾಂಕ್ ಗ್ರಾಹಕ-ಸದಸ್ಯರ ವಿಶ್ವಾಸರ್ಹತೆಗೆ ಕಾರಣವಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಸುದೀರ್ಘ 25 ವರ್ಷ ಅವಧಿವರೆಗೆ ಬ್ಯಾಂಕ್ ಎಲ್ಲ ವರ್ಗದ ಜನರಿಗೂ ತನ್ನ ಸೇವೆ ನೀಡಿದೆ. ಸಮಾಜಮುಖಿಯಾಗಿ ಶ್ರಮಿಸುತ್ತಿರುವ ಈ ಸಂಘ ಶಿಕ್ಷಣ ಸಂಸ್ಥೆಯನ್ನು ಈ ಸಹಕಾರಿ ಮೂಲಕ ನಡೆಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಬ್ಯಾಂಕ್‌ನಲ್ಲಿರುವ ಹಣವನ್ನು ವೈಯಕ್ತಿಕವಾಗಿ ಬಳಸಿಕೊಳ್ಳದೇ ಅವಶ್ಯಕತೆ ಇರುವ ಗ್ರಾಹಕರಿಗೆ ನೀಡಿ ಅವರಿಂದ ಸರಿಯಾಗಿ ವಸೂಲಿ ಮಾಡಿ ಪ್ರಗತಿಪತದತ್ತ ಸಾಗಿದೆ ಎಂದು ಹೇಳಿದರು.ಬ್ಯಾಂಕ್ ಅಧ್ಯಕ್ಷ ಬಿ.ಬಿ.ಚೌಗಲಾ, ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಮಾತನಾಡಿ, ಪ್ರಧಾನ ಕಚೇರಿ ಸೇರಿ ಬ್ಯಾಂಕ್ ಒಟ್ಟು 10 ಶಾಖೆಗಳನ್ನು ಹೊಂದಿರುವ ಬ್ಯಾಂಕ್ ಒಟ್ಟು 16597 ಸದಸ್ಯರನ್ನು ಹೊಂದಿದ್ದು, 2023-24ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಒಟ್ಟು ₹1646 ಕೋಟಿ ವಹಿವಾಟು ನಡೆಸಿದೆ. ₹1 ಕೋಟಿ ಶೇರು ಬಂಡವಾಳವಿದೆ. ₹25 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿದ್ದು, ₹ 280 ಕೋಟಿ ದುಡಿಯುವ ಬಂಡವಾಳವಿದೆ. ₹193 ಕೋಟಿ ಸಾಲ ವಿತರಿಸಲಾಗಿದೆ. ₹254 ಕೋಟಿ ಠೇವುಗಳಿದ್ದು ₹85 ಕೋಟಿ ಗುಂತಾವಣೆಗಳಿವೆ. ₹6.66 ಕೋಟಿ ನಿವ್ಹಳ ಲಾಭ ಗಳಿಸಿದ್ದು, ಶೇ. 25ರಷ್ಟು ಲಾಭಾಂಶ ವಿತರಿಸಲಾಗಿದೆ. ಶೇ.99 ರಷ್ಟು ಸಾಲ ವಸೂಲಾಗಿದ್ದು, ಅಡಿಟ್‌ನಲ್ಲಿ ಎ ಕ್ಲಾಸ್ ಬಂದಿದೆ ಎಂದರು.
ಉಪಾಧ್ಯಕ್ಷ ಬಾಹುಬಲಿ ನಾಗನೂರಿ, ನಿರ್ದೇಶಕರಾದ ಪಿ.ಆರ್.ಚೌಗಲಾ, ಜಿನ್ನಪ್ಪಾ ಸಪ್ತಸಾಗರ, ರಾಮಣ್ಣಾ ಗೋಟೂರಿ, ರವೀಂದ್ರ ಚೌಗಲಾ, ಜಯಪಾಲ ಚೌಗಲಾ, ಜಿನ್ನಪ್ಪಾ ಸಪ್ತಸಾಗರ, ಬಾಬು ಅಕ್ಕಿವಾಟೆ. ಡಾ.ಶಿವಾಜಿ ಗೋಟೂರೆ. ಈರಣ್ಣಾ ಹೂಗಾರ, ಸಿದ್ದಪ್ಪಾ ಹುಲ್ಲೋಳಿ, ಮಹಾವೀರ ಬಾಳಿಗೇರಿ, ಶ್ರೇಣಿಕ ಹೊಸೂರೆ, ಸಚಿನ ಪಾಟೀಲ, ಸಿಎ ಎಸ್.ಬಿ.ಲಠ್ಠೆ, ಆಂತರಿಕ ಲೆಕ್ಕ ಪರಿಶೋಧಕ ಮಹಾವೀರ ಚೌಗಲಾ, ಗ್ರಾಪಂ ಅಧ್ಯಕ್ಷ ಕಲ್ಮೇಶ ಅಮ್ಮಣಗಿ ಮತ್ತಿತರರು ಉಪಸ್ಥಿತರಿದ್ದರು.ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಚೌಗಲಾ ಸ್ವಾಗತಿಸಿದರು. ಜಯಪಾಲ ಚೌಗಲಾ ನಿರೂಪಿಸಿದರು. ಶೀತಲ ಬಂಡಿ ವಂದಿಸಿದರು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.