ನಿಮ್ಮ ಸೇವೆ ಮೂಲಕ ಅಭಿನಂದನೆ ಸಲ್ಲಿಸುವೆ

| Published : Jul 29 2024, 12:56 AM IST

ಸಾರಾಂಶ

ಒಕ್ಕಲುತನವೇ ಪ್ರಧಾನವಾಗಿರುವ ರೋಣ ಮತಕೇತ್ರದಲ್ಲಿ ಪ್ರಧಾನಮಂತ್ರಿ ಗ್ರಾಮ್ ಸಡಕ್ ಮೂಲಕ ರಸ್ತೆಗಳ ನಿರ್ಮಾಣ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುವೆ

ಗಜೇಂದ್ರಗಡ: ಮತದಾರರಿಗೆ ಅಭಿನಂದನೆ ಸಲ್ಲಿಸಲು ಒಂದು ದಿನ ಅಭಿನಂದನಾ ಸಮಾರಂಭ ನಡೆಸಿದರೆ ಸಾಲಲ್ಲ ಎಂದು ಭಾವಿಸಿದ್ದು, ೫ ವರ್ಷಗಳ ಕಾಲ ನಿಮ್ಮ ಸೇವೆ ಮಾಡುವ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಮಾಜಿ ಸಚಿವ ಕಳಕಪ್ಪ ಬಂಡಿ ಗೃಹ ಕಚೇರಿಯಲ್ಲಿ ಭಾನುವಾರ ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರಿಂದ ಬಿಜೆಪಿ ರೋಣ, ಗಜೇಂದ್ರಗಡ ಮಂಡಲ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಒಕ್ಕಲುತನವೇ ಪ್ರಧಾನವಾಗಿರುವ ರೋಣ ಮತಕೇತ್ರದಲ್ಲಿ ಪ್ರಧಾನಮಂತ್ರಿ ಗ್ರಾಮ್ ಸಡಕ್ ಮೂಲಕ ರಸ್ತೆಗಳ ನಿರ್ಮಾಣ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುವೆ. ಕಾರವಾರ-ಇಲಕಲ್ ರಾಷ್ಟ್ರೀಯ ಹೆದ್ದಾರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದು ಮತಕೇತ್ರವು ಭಾಗಶಃ ರಾಷ್ಟ್ರೀಯ ಹೆದ್ದಾರಿಗೆ ಒಳಪಡಲಿದೆ. ಧಾರವಾಡ-ಕಲ್ಬುರ್ಗಿ ಡಿಪಿಆರ್ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣದ ಪಟ್ಟಿಗೆ ಸೇರಿಸುವ ಕೆಲಸ ಮಾಡುತ್ತೇನೆ. ನಿಮ್ಮ ಆರ್ಶಿವಾದದಿಂದ ಮುಖ್ಯಮಂತ್ರಿಯಾಗಿದ್ದ ಅನುಭವ ಬಳಸಿಕೊಂಡು ರೋಣ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಸಂವಿಧಾನಕ್ಕೆ ಅಪಚಾರ ಮಾಡಿದ್ದೇ ಕಾಂಗ್ರೆಸ್.ಎಮರ್ಜನ್ಸಿಯಲ್ಲಿ ಸಂವಿಧಾನ ತಿರುಚಿ ಎಲ್ಲರನ್ನು ಜೈಲಿಗೆ ಹಾಕಿದ ಖ್ಯಾತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಮುಸ್ಲಿಂ ಹೆಣ್ಣು ಮಕ್ಕಳಿಗೆ ಡೈವೋರ್ಸ್ ಆದರೆ ಮಹಿಳೆಯರಿಗೆ ಹಣಕಾಸಿನ ನೆರವು ಮಾಡಬೇಕು ಎಂದು ಸುಪ್ರೀಂ ಕೋರ್ಟನ್‌ ಆದೇಶ ಬಂದರೆ, ಅದನ್ನು ಮಾಡಬೇಕಾಗುತ್ತದೆ ಎಂದು ಸಂವಿಧಾನಕ್ಕೆ ತಿದ್ದುಪಡಿ ತಂದು ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್.ಸಂವಿಧಾನದಲ್ಲಿದೆ ಎಸ್‌ಸಿ, ಎಸ್‌ಟಿ ಅವರಿಗೆ ಮೀಸಲಿಡಬೇಕು ಅಂತಿದ್ದರು ₹೧೮೭ ಸಾವಿರ ಕೋಟಿ ಗುಳುಂ ಮಾಡಿದಂಗೆ, ೨ ವರ್ಷಗಳಲ್ಲಿ ₹ ೨೫ ಸಾವಿರ ಕೋಟಿ ಹಣ ಡೈವರ್ಟ್ ಮಾಡಿದೆ. ಸಂವಿಧಾನಕ್ಕೆ ಅಪಚಾರ ಮಾಡಿದ್ದು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ. ರಾಜ್ಯ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಸಿದ್ಧವಿದ್ದೇವೆ. ಉತ್ತರ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದ್ದು ಅದು ರೋಣ ತಾಲೂಕಿನಿಂದ ಪ್ರಾರಂಭವಾಗುತ್ತದೆ ಎಂದರು.

ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ನಮ್ಮ ಸಂಸದರು ಮಾದರಿಯಾಗಬೇಕು ಎಂದು ಬಯಸುತ್ತೇವೆ. ಆದರೆ ಗುಡಿಗೆ, ಸಮುದಾಯ ಭವನಕ್ಕೆ ಅನುದಾನ ಕೇಳಲು ಬಂದರೆ ಹೇಗೆ ಸಂಸದರು ಮಾದರಿಯಾಗುತ್ತಾರೆ. ಸಂಸದರು ೫೦ ಪ್ರತಿಶತ ಅನುದಾನವನ್ನು ಸರ್ಕಾರಿ ಶಾಲಾ ಅಭಿವೃದ್ಧಿಗಳಿಗೆ, ಇನ್ನುಳಿದ ಅನುದಾನವನ್ನು ಜನತೆಯ ಬೇಡಿಕೆಗಳಿಗೆ ಬಳಸಲು ಮುಂದಾಗಿ ಎಂದರು.ಇಂದಿರಾ ತೇಲಿ, ಬಿ.ಎಂ. ಸಜ್ಜನರ, ನಿಂಗಪ್ಪ ಕೆಂಗಾರ ಕ್ಷೇತ್ರದಲ್ಲಿನ ರಸ್ತೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರೆ ಬಿಜೆಪಿ ಕಾರ್ಯಕರ್ತರು ಕಾರವಾರ-ಇಲಕಲ್, ಧಾರವಾಡ- ಕಲ್ಬುರ್ಗಿ ಹೈವೈ ಕಾಮಗಾರಿ ಆರಂಭಿಸಲು ಮನವಿ ಪತ್ರ ನೀಡಿದರು.

ರಾಜು ಕುರಡಗಿ, ಎಂ.ಎಸ್.ಕರಿಗೌಡ್ರ, ವೀರಪ್ಪ ಪಟ್ಟಣಶೆಟ್ಟಿ, ಉಮೇಶ ಮಲ್ಲಾಪೂರ, ಬಸವರಾಜ ಬಂಕದ, ಸಿದ್ದಣ್ಣ ಬಳಿಗೇರ, ಸುಭಾಸ ಮ್ಯಾಗೇರಿ, ರೂಪೇಶ ರಾಠೋಡ, ಮುದಿಯಪ್ಪ ಮುಧೋಳ, ಲಕ್ಷ್ಮೀ ಮುಧೋಳ, ರಾಜೇಂದ್ರ ಘೋರ್ಪಡೆ, ಉಮೇಶ ಚನ್ನುಪಾಟೀಲ, ಶಂಕರ ಸವಣೂರ, ಸಿದ್ದಪ್ಪ ಚೋಳಿನ, ಶಿವು ಅರಳಿ, ಶಂಕರ ಇಂಜನಿ, ಶ್ರೀನಿವಾಸ ಸವದಿ ಸೇರಿ ಇತರರು ಇದ್ದರು.

ರಾಜ್ಯದಲ್ಲಿ ಬರಗಾಲ ಬಂದರೆ ಪರಿಹಾರ ಕೊಡಲಿಲ್ಲ, ರೈತರಿಗೆ ಏನೂ ಕೊಡಲಿಲ್ಲ, ರಸ್ತೆ ದುರಸ್ತಿ ಮಾಡಲು ಸಹ ಹಣ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ರಾಜ್ಯ ರೈಲ್ವೆಗೆ ₹೭೩೨೯ ಸಾವಿರ ಕೋಟಿ, ರಾಜ್ಯ ತೆರಿಗೆ ಪಾಲಿನಲ್ಲಿ ₹ ೪೪,೪೮೫ ಸಾವಿರ ಕೋಟಿ, ಬಂಡವಾಳ ಹೂಡಿಕೆಗೆ ₹ ೬೨೮೦ ಸಾವಿರ ಕೋಟಿ ಸೇರಿ ಹಲವಾರು ವಿಭಾಗಗಳಲ್ಲಿ ಬಜೆಟ್‌ನಲ್ಲಿ ಆದ್ಯತೆ ನೀಡಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.