ಸಾರಾಂಶ
ಜಿದ್ದಿನ ರಾಜಕಾರಣದ ಭರದಲ್ಲಿ ಪ್ರವಾಸೋದ್ಯಮ ಕಡೆಗಣನೆ । ಅವಳಿ ತಾಲೂಕಿಗೆ ಐತಿಹಾಸಿಕ ಪುಣ್ಯಸ್ಥಳವಿದ್ರೂ ಇಲ್ಲದ ಸ್ಥಿತಿರಾಜು ಜಿ.ಎಚ್.ಹೊನ್ನಾಳಿ
ಕನ್ನಡಪ್ರಭ ವಾರ್ತೆ, ಹೊನ್ನಾಳಿರಾಜಕೀಯ ಜಿದ್ದಿಗೆ ಪರಸ್ಪರರಿಗೆ ತೊಡೆ ತಟ್ಟುವ ಬದಲಿಗೆ, ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರವಾಸೋದ್ಯಮಕ್ಕೆ ರಾಜಕಾರಣಿಗಳು ತೊಡೆ ತಟ್ಟಿದ್ದರೆ ಇಷ್ಟೊತ್ತಿಗೆ ಕ್ಷೇತ್ರಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುವ ಜೊತೆಗೆ ಸ್ಥಳೀಯವಾಗಿಯೇ ಸಾವಿರಾರು ಉದ್ಯೋಗಗಳೂ ಸೃಷ್ಟಿಯಾಗಿ, ಸಾವಿರಾರು ಜನರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿತ್ತೇನೋ?!
ಪ್ರಸಿದ್ಧ ಪುಣ್ಯಸ್ಥಳಗಳು, ಐತಿಹಾಸಿಕ ಸುಕ್ಷೇತ್ರ, ಪ್ರವಾಸಿ ತಾಣಗಳಿದ್ದರೂ ಜನ ಪ್ರತಿನಿಧಿಗಳು, ಅಧಿಕಾರಿಗಳ ಅಸಡ್ಡೆಯಿಂದಾಗಿ ತುಂಗಭದ್ರಾ ತಟದ ಹೊನ್ನಾಳಿ ತಾಲೂಕು ಪ್ರವಾಸಿ ತಾಣವಾಗುವಲ್ಲಿ ವಿಫಲವಾಗಿದೆ. ಮಲೆನಾಡಿನ ಸೆರಗು ಅಂತಲೇ ಗುರುತಿಸಲ್ಪಡುವ ಹೊನ್ನಾಳಿ ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕೆಲಸಗಳು ನಿರೀಕ್ಷಿತಮಟ್ಟದಲ್ಲಿ ಆಗಿಲ್ಲವೆಂಬುದೂ ಅಷ್ಟೇ ಸ್ಪಷ್ಟವಾಗಿದೆ.ದಕ್ಷಿಣ ಕಾಶಿ, ತ್ರಿಮೂರ್ತಿಗಳ ಸಂಗಮ ಕ್ಷೇತ್ರ, ವಿಸ್ಮಯಗಳ ಆಗರ, ಇತಿಹಾಸ ಪ್ರಸಿದ್ಧ ಪುಣ್ಯಸ್ಥಳ ತೀರ್ಥಗಿರಿಯ ತೀರ್ಥರಾಮೇಶ್ವರ ಇಲ್ಲಿದೆ. ಮಲೆನಾಡಿನಂಚಿನ ಇಲ್ಲಿ ಶ್ರೀರಾಮಚಂದ್ರನು ವನವಾಸದ ವೇಳೆ ಸ್ಥಾಪಿಸಿದ ಲಿಂಗವೇ ತೀರ್ಥರಾಮೇಶ್ವರ. ಇದು ದಕ್ಷಿಣ ಕಾಶಿ ಅಂತಲೇ ಕರೆಯಲ್ಪಡುತ್ತದೆ. ಅವಿಭಜಿತ ಹೊನ್ನಾಳಿ ಕ್ಷೇತ್ರವಾಗಿದ್ದ ಈ ಪುಣ್ಯಸ್ಥಳ ಈಗ ನ್ಯಾಮತಿ ತಾಲೂಕಿಗೆ ಒಳಪಡುತ್ತದೆ. ರಾಜ್ಯ, ರಾಷ್ಟ್ರದ ವಿವಿಧೆಡೆಯಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ವರ್ಷದ 365 ದಿನವೂ ಸಿಂಹದ ಮುಖಭಾವದ ಶಿಲಾ ಮೂರ್ತಿ ಬಾಯಿಯಿಂದ ಜುಳು ಜುಳು ಸದ್ದು ಮಾಡುತ್ತಾ ನೀರು ಹರಿಯುತ್ತದೆ. ಇದು ಕಾಶಿಯಿಂದ ಹರಿದು ಬರುವ ಪವಿತ್ರ ಗಂಗೆ ಎಂಬ ನಂಬಿಕೆ ಭಕ್ತರದ್ದು.
ಬಂಜಾರ ಸಮುದಾಯದ ಪುಣ್ಯಕ್ಷೇತ್ರವಾದ ಸೂರಗೊಂಡನಕೊಪ್ಪ ಈ ಅವಳಿ ತಾಲೂಕು, ಜಿಲ್ಲೆಯ ಹೆಮ್ಮೆಯಾಗಿದೆ. ಬಂಜಾರರ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲ್‌ರ ಜನ್ಮಸ್ಥಳ ಇದು. ಸೇವಾಲಾಲ್, ಮರಿಯಮ್ಮ ದೇವಿ ದೇವಸ್ಥಾನಗಳ ಜೊತೆಗೆ ಭೂಗ್‌ಕುಂಡ, ಆಕರ್ಷಕ ಬೊಂಬೆಗಳು, ಉದ್ಯಾನವನ ಇಲ್ಲಿನ ಪ್ರಮುಖ ಆಕರ್ಷಣೆ. ನೂರಾರು ಕೋಟಿ ರು. ವೆಚ್ಚದಲ್ಲಿ ಸೂರಗೊಂಡನಕೊಪ್ಪ ಅಭಿವೃದ್ಧಿ ಕಂಡಿದೆ. ಸಾಕಷ್ಟು ಮೂಲ ಸೌಕರ್ಯ ಕಲ್ಪಿಸಿದೆಯಾದರೂ, ಸಾರಿಗೆ ವ್ಯವಸ್ಥೆ ಅಷ್ಟಕ್ಕಷ್ಟೇ ಎಂಬಂತಿದೆ. ಬಂಜಾರರ ಪ್ರಮುಖ ಪುಣ್ಯಕ್ಷೇತ್ರವಾದ ಕಾರಣಕ್ಕೆ ಭಕ್ತರು ಸನ್ನಿಧಿಗೆ ನಡೆದಾದರೂ ಬಂದು, ಹೋಗುತ್ತಾರೆ.ಹೊನ್ನಾಳಿ ಹಿರೇಕಲ್ಮಠದಲ್ಲಿ ಪ್ರಸಿದ್ಧ ಶ್ರೀ ಚನ್ನಪ್ಪ ಸ್ವಾಮಿ ಮಠವಿದ್ದು, ಅನ್ನ, ಅಕ್ಷರ ಎಂಬ ತ್ರಿವಿಧ ದಾಸೋಹದ ಜೊತೆಗೆ ನ್ಯಾಯದಾನಕ್ಕೂ ಹೆಸರಾಗಿದೆ. ಶ್ರೀಮಠವು ಸ್ವಾಮೀಜಿ ಉಸ್ತುವಾರಿಯಲ್ಲಿದ್ದು, ಬಂದ ಭಕ್ತರಿಗೆ ಮಠವೇ ಸ್ಪಂದಿಸುತ್ತದೆ. ಸಮೀಪದಲ್ಲೇ ದ್ವಿತೀಯ ಮಂತ್ರಾಲಯದ ಖ್ಯಾತಿಯ ಶ್ರೀರಾಘವೇಂದ್ರ ಸ್ವಾಮಿಗಳ ಮಠ ಇದೆ. ಅಲ್ಲಿಯೂ ಯಾತ್ರಾರ್ಥಿಗಳಿಗೆ ತಂಗುವ ವ್ಯವಸ್ಥೆ ಇದೆ. ಸುಂಕದಕಟ್ಟೆ ದೇವಸ್ಥಾನ, ಮಾರಿಕೊಪ್ಪದ ಶ್ರೀ ಹಳದಮ್ಮ, ಶ್ರೀ ಬಳ್ಳೇಶ್ವರದ ದೇವಾಲಯ ಹೀಗೆ ಸಾಲು ಸಾಲು ಪುಣ್ಯಸ್ಥಳ, ಧಾರ್ಮಿಕ ಸ್ಥಳ, ಪ್ರವಾಸಿ ತಾಣಗಳು ಇಲ್ಲಿವೆ.
ಹುಡುಕಿದರೂ ತಾಲೂಕಿನ ಪುಣ್ಯಸ್ಥಳ, ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಫಲಕಗಳಿಲ್ಲ. ರಾಜ್ಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳಲ್ಲಿ ಮಾಹಿತಿ ನೀಡುವ ಫಲಕಗಳಿಲ್ಲ. ರಾಜಕೀಯ ಮೇಲಾಟದಲ್ಲಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳನ್ನು ಪ್ರವಾಸಿ ತಾಣಗಳಾಗಿ ಮಾರ್ಪಡಿಸಿ, ಪ್ರವಾಸಿಗರನ್ನು ಸೆಳೆಯುವ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವಂತಹ ಪ್ರಯತ್ನವನ್ನೂ ಜನ ಪ್ರತಿನಿಧಿಗಳು ಮಾಡಿಲ್ಲ. ಪ್ರಯತ್ನಿಸುವುದು ಹೋಗಲಿ, ಜನ ಪ್ರತಿನಿಧಿಗಳಿಗೆ ಇದ್ಯಾವುದರ ಬಗ್ಗೆ ಆಸಕ್ತಿ ಇದ್ದಂತಿಲ್ಲವೆಂಬ ಮಾತು ಕೇಳಿ ಬರುತ್ತಿದೆ.- - -
11ಎಚ್.ಎಲ್.ಐ1ಃ-ತೀರ್ಥರಾಮೇಶ್ವರದ ಸುಂದರ ದೇವಾಲಯ.- - -
11ಎಚ್.ಎಲ್.ಐ1 ಎಃಃ ಪವಿತ್ರ ಸೋರಗೊಂಡ ಕೊಪ್ಪದ ಸಂತ ಸೇವಾಲಾಲ್ ಜನ್ಮಸ್ಥಳದಪ್ರವೇಶ ದ್ವಾರ.- - -
11ಎಚ್.ಎಲ್.ಐ 11ಬಿ: ಹೊನ್ನಾಳಿ ,ನ್ಯಾಮತಿ ಅವಳಿ ತಾಲೂಕಿಗಳಲ್ಲಿ ಚತುರ್ವಿಧ ದಾಸೋಹಕ್ಕೆ ಹೆಸರಾದ ಹೊನ್ನಾಳಿಯ ಹಿರೇಕಲ್ಮಠ.