ಸಾರಾಂಶ
ಧಾರವಾಡ ಜಿಲ್ಲೆಗೆ 50 ಸಾವಿರ ಮೆಟ್ರಿಕ್ ಟನ್ ಹಸಿ ಮೇವು ಬೇಡಿಕೆ
45 ಸಾವಿರ ಮೇವು ಕಿಟ್ ಬೇಡಿಕೆ ಇಟ್ಟಿರುವ ಪಶು ಇಲಾಖೆ35 ಸಾವಿರ ಕಿಟ್ ಲಭ್ಯ, ಒಣ ಮೇವು ಸಂಗ್ರಹಕ್ಕೂ ಚಾಲನೆ
ಬಸವರಾಜ ಹಿರೇಮಠಕನ್ನಡಪ್ರಭ ವಾರ್ತೆ ಧಾರವಾಡ
ತೀವ್ರ ಮಳೆಯ ಕೊರತೆಯಿಂದ ಪೂರ್ತಿ ಧಾರವಾಡ ಜಿಲ್ಲೆಯು ಬರಗಾಲ ಪೀಡಿತ ಎಂದು ಘೋಷಣೆಯಾಗಿದೆ. ಬರಗಾಲದ ಈ ಸಮಯದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಪಶು ಸಂಗೋಪನೆ ಇಲಾಖೆಯು ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ಹಸಿ ಹಾಗೂ ಒಣ ಮೇವು ಸಂಗ್ರಹಕ್ಕೆ ಮುಂದಾಗಿದೆ.ಪ್ರಸ್ತುತ ಸುಮಾರು 10 ಸಾವಿರ ಟನ್ ಮೇವಿದ್ದರೂ ಬರುವ ಬೇಸಿಗೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಮೇವಿನ ಕೊರತೆ ಉಂಟಾಗದಂತೆ ಎಚ್ಚರ ವಹಿಸಲು ಸರ್ಕಾರದ ನಿರ್ದೇಶನದಂತೆ ಈಗಿನಿಂದಲೇ ಮೇವು ಸಂಗ್ರಹದಲ್ಲಿ ಇಲಾಖೆ ತೊಡಗಿಕೊಂಡಿದೆ.
50 ಸಾವಿರ ಟನ್ ಬೇಡಿಕೆಅಂಕಿ-ಅಂಶಗಳ ಪ್ರಕಾರ, ಧಾರವಾಡ ಜಿಲ್ಲೆಯಲ್ಲಿ 2.33 ಲಕ್ಷ ದನಕರುಗಳಿದ್ದು, 1.53 ಲಕ್ಷ ಕುರಿ-ಮೇಕೆಗಳಿವೆ. ಬರಗಾಲದ ಸಮಯದಲ್ಲಿ ಅಂದಾಜು 50 ಸಾವಿರ ಟನ್ ಮೇವಿನ ಕೊರತೆ ಆಗುವ ಹಿನ್ನೆಲೆಯಲ್ಲಿ ಅಷ್ಟು ಪ್ರಮಾಣ ಮೇವವನ್ನು ಬೇರೆ ಬೇರೆ ವಿಧಗಳಲ್ಲಿ ಸಂಗ್ರಹಿಸಲು ಇಲಾಖೆಯು ಕ್ರಮ ಕೈಗೊಂಡಿದೆ. ಅಲ್ಲದೇ, ಮೇವು ಕೊರತೆ ನೀಗಿಸಲು ಸರ್ಕಾರದಿಂದ ₹16.20 ಕೋಟಿ ಅನುದಾನ ಸಹ ಕೋರಿದೆ. ಜಿಲ್ಲೆಗೆ 45 ಸಾವಿರ ಮೇವಿನ ಬೀಜಗಳ ಕಿರುಪೊಟ್ಟಣಗಳ ಬೇಡಿಕೆ ಇದ್ದು ಈಗಾಗಲೇ 35 ಸಾವಿರ ಕಿಟ್‌ಗಳನ್ನು ರೈತರಿಗೆ ಹಂಚಲಾಗಿದೆ. ಜಿಲ್ಲೆಯ ವಿವಿಧೆಡೆ ಹಸಿ ಮೇವು ಸಹ ಬೆಳೆಯಲಾಗಿದೆ. ಬೇಡಿಕೆಗೆ ತಕ್ಕಂತೆ ಹಂತ ಹಂತವಾಗಿ ಇನ್ನೂ ಹತ್ತು ಸಾವಿರ ಮೇವಿನ ಬೀಜಗಳ ಕಿರುಪೊಟ್ಟಣಗಳನ್ನು ರೈತರಿಗೆ ನೀಡಲು ಇಲಾಖೆ ಚಿಂತಿಸಿದೆ.
ಮೇವು ಸಂಗ್ರಹ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ, ಭೂಮಿಯಲ್ಲಿ ತೇವಾಂಶ ಇರುವ ವರೆಗೂ ಹಸಿ ಮೇವು ಬೆಳೆಯಲೆಂದು ವಿವಿಧ ಮೇವು ಬೀಜಗಳ ಕಿರು ಪೊಟ್ಟಣಗಳನ್ನು ರೈತರಿಗೆ ನೀಡಲಾಗಿತ್ತು. ಅಂತೆಯೇ ರೈತರು ಸಹ ತಮ್ಮ ತಮ್ಮ ಹೊಲಗಳಲ್ಲಿ ಹಸಿ ಮೇವು ಬೆಳೆದು ತಮ್ಮ ಮೇವಿನ ಕೊರೆತ ನೀಗಿಸಿಕೊಳ್ಳಬಹುದು. ಜೊತೆಗೆ ಬೋರವೆಲ್ ಇರುವ ಆಸಕ್ತ ರೈತರು ಮೇವು ಬೆಳೆದು ಇಲಾಖೆಗೆ ಮಾರಾಟ ಸಹ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೆಜಿಗೆ ₹6ರಂತೆ ಖರೀದಿ ಮಾಡಿ ಇಲಾಖೆಯು ರೈತರಿಗೆ ಕೆಜಿಗೆ ₹2ರಂತೆ ಮಾರಾಟ ಮಾಡಲು ತೀರ್ಮಾನಿಸಲಾಗಿದೆ ಎಂದರು.ಜೊತೆಗೆ ಜಿಲ್ಲೆಯಲ್ಲಿ ಎಂಟು ಮೇವು ಬ್ಯಾಂಕ್ ತೆರೆಯಲಾಗುತ್ತಿದ್ದು, ಒಣ ಮೇವಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಟೆಂಡರ್ ಕರೆಯಲಾಗಿದ್ದು ರೈತರು ಒಣ ಮೇವನ್ನು ಇಲಾಖೆಗೆ ನೀಡಬಹುದು. ಕಲಘಟಗಿ, ಅಳ್ನಾವರ, ಧಾರವಾಡ ಭಾಗಶಃ ಅಷ್ಟೊಂದು ಮೇವಿನ ಸಮಸ್ಯೆ ಆಗುವುದಿಲ್ಲ. ಆದರೆ, ಹುಬ್ಬಳ್ಳಿ, ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳ ಭಾಗದ ಜಾನುವಾರುಗಳಿಗೆ ಸಾಮಾನ್ಯವಾಗಿ ಬರ ಸಮಯದಲ್ಲಿ ಮೇವಿನ ಕೊರತೆ ಉಂಟಾಗುತ್ತದೆ. ಆದ್ದರಿಂದ ಅಲ್ಲಿ ಒಣ ಮೇವಿನ ಸಂಗ್ರಹಣೆ ಶುರು ಮಾಡಲಾಗುತ್ತಿದೆ. ಯಾವುದೇ ರೈತರು ತಮ್ಮ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾದರೆ ಪಶು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ನೀಡಿದರೆ ದಿನಕ್ಕೆ ಆರು ಕೆಜಿಯಂತೆ ರೈತರಿಗೆ ಮೇವು ಒದಗಿಸುವ ಕಾರ್ಯವನ್ನು ಇಲಾಖೆ ಮಾಡಲಿದೆ ಎಂದು ಮಾಹಿತಿ ನೀಡಿದರು.
ತಮ್ಮ ಜಾನುವಾರುಗಳಿಗೆ ರೈತರು ಸಹ ಮೇವಿನ ಬಣವಿ ಒಟ್ಟುವ ಮೂಲಕ ಮೇವನ್ನು ಸಂಗ್ರಹಿಸುತ್ತಾರೆ. ಇಷ್ಟಾಗಿಯೂ ಮಳೆ ಕೊರತೆಯಿಂದ ಬರಗಾಲದಲ್ಲಿ ಮೇವು ಕೊರತೆ ಆಗುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಪಶುಸಂಗೋಪನೆ ಇಲಾಖೆ ಮೇವು ಬ್ಯಾಂಕ್ ಮೂಲಕ ರೈತರಿಗೆ ಮೇವು ನೀಡಲಾಗುತ್ತದೆ. ರೈತರು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಡಾ. ಸಾಲಿಗೌಡರ ತಿಳಿಸಿದರು.ತಾಲೂಕು ವಿತರಣೆ ಮಾಡಿರುವ ಮೇವಿನ ಬೀಜಗಳ ಕಿರುಪೊಟ್ಟಣಗಳ ಸಂಖ್ಯೆ
ಧಾರವಾಡ-ಅಳ್ನಾವರ 14474ಹುಬ್ಬಳ್ಳಿ 6469
ಕಲಘಟಗಿ 3408ಕುಂದಗೋಳ 5598
ನವಲಗುಂದ-ಅಣ್ಣಿಗೇರಿ 5632ಒಟ್ಟು 35581