ಕನ್ನಡಪ್ರಭ ವಾರ್ತೆ ಸಕಲೇಶಪುರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವುದು ಸಮಾಜಕ್ಕೆ ಪ್ರೇರಣೆಯಾಗುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಪಟ್ಟಣದ ಎಚ್.ಡಿ.ಪಿ.ಎ ಭವನದಲ್ಲಿ ತಾಲೂಕು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡುವ ಸನ್ಮಾನದಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನೂ ಪರಿಗಣಿಸಬೇಕು ಎಂದು ಆಗ್ರಹಿಸಿದ ಅವರು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳಷ್ಟೇ ಅಲ್ಲದೆ ಪೋಷಕರು ಹಾಗೂ ಶಿಕ್ಷಕರೂ ಉತ್ತಮ ಫಲಿತಾಂಶಕ್ಕಾಗಿ ಅಪಾರ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ ಎಂದರು.ವಿದ್ಯಾರ್ಥಿಗಳು ಅಧಿಕ ಅಂಕಗಳನ್ನು ಪಡೆದರೆ ಶಾಲೆಗೆ ಕೀರ್ತಿ ಬರುತ್ತದೆ ಎಂಬ ಕಾರಣಕ್ಕೆ ಶಿಕ್ಷಕರು ಸಾಕಷ್ಟು ಶ್ರಮವಹಿಸುತ್ತಾರೆ. ಈ ನಿಟ್ಟಿನಲ್ಲಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರನ್ನೂ ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು. ಭಾರತ ವಿಭಿನ್ನತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದ್ದು, ವಿವಿಧ ಧರ್ಮ, ಜಾತಿ, ಭಾಷೆ ಹಾಗೂ ಜೀವನ ಪದ್ಧತಿಗಳಿದ್ದರೂ ನಾವೆಲ್ಲರೂ ಸಹಬಾಳ್ವೆಯಿಂದ ಬದುಕುತ್ತಿರುವುದು ದೇಶದ ಶಕ್ತಿಯಾಗಿದೆ. ಅನೇಕ ದೇಶಗಳಲ್ಲಿ ಶಾಂತಿ ಮರೀಚಿಕೆಯಾಗಿದ್ದರೂ ಭಾರತದಲ್ಲಿ ನೆಮ್ಮದಿಯ ಬದುಕು ಸಾಧ್ಯವಾಗಿದೆ. ಇದಕ್ಕೆ ದೇಶದ ಯೋಧರ ತ್ಯಾಗ ಹಾಗೂ ಪರಿಶ್ರಮ ಪ್ರಮುಖ ಕಾರಣವಾಗಿದ್ದು, ಪ್ರತಿಯೊಬ್ಬರೂ ಯೋಧರ ಸೇವೆಯನ್ನು ಸದಾ ಸ್ಮರಿಸಬೇಕು ಎಂದರು.

ರೈತ ಮತ್ತು ಯೋಧರಿಲ್ಲದೆ ದೇಶದ ಅಸ್ತಿತ್ವ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಹಾಗೂ ಪೋಷಕರು ರಾಷ್ಟ್ರೀಯತೆಯ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. “ದೇಶ ಮೊದಲು, ನಂತರ ಬೇರೆಲ್ಲ” ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬೆಳೆದರೆ ಭಾರತ ಮುಂದಿನ ದಿನಗಳಲ್ಲಿ ಜಗತ್ತಿನ ಅಗ್ರ ಆರ್ಥಿಕ ಶಕ್ತಿಗಳಲ್ಲೊಂದು ಆಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.ತಾಲೂಕು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಮಲ್ನಾಡ್ ಜಾಕೀರ್‌ ಮಾತನಾಡಿ, ಪ್ರತಿವರ್ಷ ಒಕ್ಕೂಟದ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ತಾಲೂಕಿನ ಪ್ರತಿಯೊಂದು ಖಾಸಗಿ ಶಾಲೆಯ ಒಬ್ಬ ವಿದ್ಯಾರ್ಥಿಯನ್ನು ಸನ್ಮಾನಿಸಲಾಗುತ್ತದೆ. ಅದೇ ರೀತಿ, ಪ್ರತಿ ವಿಷಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸಿ “ದ್ರೋಣಾಚಾರ್ಯ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತದೆ ಎಂದರು.ದ್ರೋಣಾಚಾರ್ಯ ಪ್ರಶಸ್ತಿಯೊಂದಿಗೆ ನಗದು ಬಹುಮಾನವನ್ನೂ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಒಕ್ಕೂಟದ ವತಿಯಿಂದ ಇನ್ನಷ್ಟು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಕಾರ್ಯದರ್ಶಿ ಗಿರೀಶ್, ಬಾಳ್ಳುಪೇಟೆ ಬ್ಲಾಸಂ ಶಾಲೆಯ ಸಿದ್ದಣ್ಣ, ಹಾಸನ ಜಿಲ್ಲಾ ಬಲಕರ ಸಂಘದ ಪ್ರಧಾನ ಕಾರ್ಯದರ್ಶಿ ಲೋಹಿತ್ ಕೌಡಳ್ಳಿ, ಕಚೇರಿ ವ್ಯವಸ್ಥಾಪಕ ಜಯಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.