ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ಜಿಲ್ಲಾ ಹಾಪ್‌ಕಾಮ್ಸ್ ವತಿಯಿಂದ ನಗರದ ಹಾಪ್ ಕಾಮ್ಸ್ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುವ 6 ನೇ ವರ್ಷದ ಮಾವು ಮತ್ತು ಹಲಸು ಮೇಳಕ್ಕೆ ಶಾಸಕರಾದ ಡಾ.ಮಂತರ್ ಗೌಡ ಅವರು ಮಾವು ಸವಿಯುವ ಮೂಲಕ ಶುಕ್ರವಾರ ಚಾಲನೆ ನೀಡಿದರು. ಮಾವು ಮೇಳಕ್ಕೆ ಚಾಲನೆ ನೀಡುವ ಸಂದರ್ಭ ವಿವಿಧ ಮಾವಿನ ಹಣ್ಣು ಮಹತ್ವ ಕುರಿತು ಮಾಹಿತಿ ಪಡೆದ ಶಾಸಕರು ಬಾದಾಮಿ, ಇಮಾಮ್ ಪಸಂದ್, ಆಲ್ಫೊನ್ಸೋ, ಕೇಸರ್, ದಶೇರಿ, ಮಲ್ಲಿಕಾ, ಮಾಲ್ಗೋವಾ, ಸಿಂಧೂರ, ರಸಪುರಿ, ತೋತಪುರಿ, ಕಾಲಾಪಾಡಿ, ಸಕ್ಕರೆಗುತ್ತಿ, ರುಮಾನಿ, ಮಿಠಾಯಿ ಮಾವು, ಉಪ್ಪಿನಕಾಯಿ ಮಾವು ಹೀಗೆ ಹಲವು ರೀತಿಯ ಮಾವುಗಳ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ವಿವಿಧ ರೀತಿಯ ಹಲಸು, ಮಾವು, ಮಂಗೋಸ್ಟಿನ್, ರಂಬುಟಾನ್, ಮತ್ತಿತರ ಹಣ್ಣಿನ ಗಿಡಗಳ ಬಗ್ಗೆಯೂ ಮಾಹಿತಿ ಪಡೆದರು. ಹಣ್ಣು ಮತ್ತು ಹೂವಿನ ಗಿಡಗಳ ಬೀಜಗಳನ್ನು ವೀಕ್ಷಿಸಿದರು.ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು ಸುಮಾರು 20 ಮಾವಿನ ಮಳಿಗೆ ಹಾಗೂ ಎರಡು ಹಲಸು ಮಳಿಗೆ ಹಾಗೆಯೇ ವಿವಿಧ ರೀತಿಯ ಹಣ್ಣಿನ, ತರಕಾರಿ ಮತ್ತು ಹೂವಿನ ಗಿಡಗಳ ಬೀಜ ಮಳಿಗೆಗಳು ಮಾವು ಮತ್ತು ಹಲಸು ಮೇಳದಲ್ಲಿ ಆಕರ್ಷಣೀಯವಾಗಿದ್ದವು. ನೈಸರ್ಗಿಕವಾಗಿ ಕೃಷಿಕರೇ ತಮ್ಮ ತೋಟದಲ್ಲಿ ಬೆಳೆದು ಗ್ರಾಹಕರಿಗೆ ಮಾರಾಟ ಮಾಡುವುದು ವಿಶೇಷವೇ ಸರಿ ಎಂದರು.

ಮಾದಾಪುರದಲ್ಲಿ ತೋಟಗಾರಿಕೆ ಇಲಾಖೆ ವ್ಯಾಪ್ತಿಯ 100 ಎಕರೆ ಜಾಗವಿದ್ದು, ಗುತ್ತಿಗೆ ಆಧಾರದಲ್ಲಿ ಕೃಷಿಕರಿಗೆ ಜಮೀನು ನೀಡಿದರೆ ಹೆಚ್ಚಿನ ಆದಾಯ ಬರಲಿದೆ ಎಂದು ಸಲಹೆ ಮಾಡಿದರು.

ಮಾವು ಮತ್ತು ಹಲಸು ಬೆಳೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾವು ಬೆಳೆಗಾರರಿಂದ ತರಬೇತಿ ಕಾರ್ಯಕ್ರಮ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಇದೇ ಸಂದರ್ಭ ಡಾ.ಮಂತರ್ ಗೌಡ ತಿಳಿಸಿದರು.

ಮಾವಿನ ದರ ಇಂತಿದೆ ಬಾದಾಮಿ 100 ರು., ಇಮಾಮಿ ಪಸಂದ್ 200 ರು., ಆಲ್ಫೊನ್ಸೋ 150 ರು., ಕೇಸರ್ 200 ರು., ದಶೇರಿ180 ರು., ಮಲ್ಲಿಕಾ 100 ರು, ಮಾಲ್ಗೋವಾ 200 ರು., ಸಿಂಧೂರ 60 ರು., ರಸಪುರಿ 100 ರು., ತೋತಪುರಿ 40ರು, ಕಾಲಾಪಾಡಿ 150ರು, ಸಕ್ಕರೆ ಗುತ್ತಿ 200 ರು, ರುಮಾನಿ 100 ರು. ದರದಲ್ಲಿ ದೊರೆಯಲಿದೆ.

ನಗರಸಭೆ ಅಧ್ಯಕ್ಷ ಪಿ.ಕಲಾವತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮಡಿಕೇರಿ ಹಾಪ್ ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ, ನಿರ್ದೇಶಕ ನಾಗೇಶ್ ಕುಂದಲ್ಪಾಡಿ ಮತ್ತಿತರರು ಹಾಜರಿದ್ದರು.