ಸಾರಾಂಶ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಪ್ರಿಯಾಂಕ ಗಾಂಧಿ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ 6ನೇ ಗ್ಯಾರಂಟಿಯನ್ನು ರಾಜ್ಯ ಸರ್ಕಾರ ತಕ್ಷಣ ಜಾರಿಗೊಳಿಸಬೇಕೆಂದು ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಕೊಪ್ಪಳ ಜಿಲ್ಲಾಡಳಿತದ ಮೂಲಕ ಬಿಸಿಯೂಟ ನೌಕರರು ಮನವಿ ಸಲ್ಲಿಸಿದರು.
ಕೊಪ್ಪಳ:
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಬಿಸಿಯೂಟ ಯೋಜನೆಯಡಿ ದುಡಿಯುವ ನೌಕರರ ವೇತನ ₹ 6000ಕ್ಕೆ ಹೆಚ್ಚಿಸಬೇಕೆಂದು ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯೂನಿಯನ್ ಜಿಲ್ಲಾ ಸಮಿತಿ ಕರೆ ನೀಡಿದ ಹಿನ್ನೆಲೆ ಬಿಸಿಯೂಟ ನೌಕರರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಪ್ರಿಯಾಂಕ ಗಾಂಧಿ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ 6ನೇ ಗ್ಯಾರಂಟಿಯನ್ನು ರಾಜ್ಯ ಸರ್ಕಾರ ತಕ್ಷಣ ಜಾರಿಗೊಳಿಸಬೇಕೆಂದು ಘೋಷಣೆ ಕೂಗಿ ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.
ನಿವೃತ್ತಿಯಾಗುವ ನೌಕರರಿಗೆ ₹ 40 ಸಾವಿರ ಇಡಿಗಂಟು ನೀಡುತ್ತಿದ್ದು ಅದನ್ನು ₹ 2 ಲಕ್ಷಕ್ಕೆ ಹೆಚ್ಚಿಸಬೇಕು. ಅಪಘಾತದಲ್ಲಿ ಮೃತರಾದರೆ ಅವಲಂಬಿತರಿಗೆ ₹ 10 ಪರಿಹಾರ, ಗಾಯಗೊಂಡರೆ ಚಿಕಿತ್ಸೆ ವೆಚ್ಚ ಹಾಗೂ ಸೂಕ್ತ ಪರಿಹಾರ, ಎಸ್‌ಡಿಎಂಸಿ ಮತ್ತು ಶಾಲಾ ಮುಖ್ಯೋಪಾಧ್ಯಾಯರ ಹೆಸರಿನಲ್ಲಿರುವ ಜಂಟಿ ಖಾತೆ ರದ್ದುಗೊಳಿಸಿ ಮೊದಲಿನಂತೆ ಮುಖ್ಯ ಅಡುಗೆದಾರರು ಮತ್ತು ಶಾಲಾ ಮುಖ್ಯೋಪಾಧ್ಯಾಯರ ಹೆಸರಿನಲ್ಲಿ ಖಾತೆ ತೆರೆಯುವುದು, ಪಿಂಚಣಿ ಜಾರಿ, ಬಿಸಿಯೂಟ ಮಹಿಳೆಯರಿಗ ಆಗುತ್ತಿರುವ ಕಿರುಕುಳ ತಪ್ಪಿಸುವುದು, ಪ್ರತಿ ತಿಂಗಳು 5ರೊಳಗಾಗಿ ವೇತನ ಪಾವತಿ, ದುರಸ್ತಿಯಲ್ಲಿರುವ ಒಲೆ, ಅಡುಗೆ ಸಾಮಾಗ್ರಿ ಸೇರಿ ಇನ್ನಿತರ ವಸ್ತುಗಳ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.ಈ ವೇಳೆ ಬಸವರಾಜ ಶೀಲವಂತರ, ಗಾಳೆಪ್ಪ ಮುಂಗೋಲಿ, ಮಕ್ಬೂಲ್ ರಾಯಚೂರು, ಪುಷ್ಪಾ ಮೇಸ್ತ್ರಿ, ಸುಮಂಗಲಾ ಕೊತಬಾಳ, ಶರಣಮ್ಮ ಬಂಡಿಹರ್ಲಾಪುರ, ರಾಜೇಶ್ವರಿ ಗಿಣಿಗೇರಿ, ಪದ್ಮಾ ಹುಲಗಿ, ಕಮಲಾದೇವಿ ದೊಡ್ಡಮನಿ, ಅನ್ನಪೂರ್ಣ, ರೆಹಮತಬಿ ಸೇರಿದಂತೆ ಇತರರು ಇದ್ದರು.