ಸಾರಾಂಶ
ಹುಬ್ಬಳ್ಳಿ: ರಾಜ್ಯದಲ್ಲಿ ಸೆ.22ರಿಂದ ಅಕ್ಟೋಬರ್ 7ರ ವರೆಗೆ ನಡೆಯಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆಯಲ್ಲಿ "ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ " ವತಿಯಿಂದ ಹುಬ್ಬಳ್ಳಿಯಲ್ಲಿ ಸೆ. 19ರಂದು ಮಧ್ಯಾಹ್ನ 3ಗಂಟೆಗೆ ನಡೆಯಲಿರುವ‘ವೀರಶೈವ ಲಿಂಗಾಯತ ಏಕತಾ ಸಮಾವೇಶ’ಕ್ಕೆ ಇಲ್ಲಿಯ ನೆಹರೂ ಮೈದಾನ ಸಜ್ಜುಗೊಂಡಿದೆ.
ವೀರಶೈವ- ಲಿಂಗಾಯತ ಬೇರೆ ಅಲ್ಲ ಒಂದೇ ಎಂಬ ಪ್ರತಿಪಾದನೆಯ ಜತೆ ಜತೆಗೆ ಸಮೀಕ್ಷೆಯಲ್ಲಿ ಏನೆಂದು ನಮೂದಿಸಬೇಕು ಎಂಬುದರ ಕುರಿತು ಲಿಂಗಾಯತ ವಿವಿಧ ಪಂಗಡದವರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಸಮಾವೇಶ ನಡೆಯಲಿದೆ.ಈ ಸಮಾವೇಶದಲ್ಲಿ 1 ಸಾವಿರಕ್ಕೂ ಹೆಚ್ಚು ಮಠಾಧೀಶರು, ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ವಿವಿಧ ಪಕ್ಷಗಳ ಮಾಜಿ ಮಂತ್ರಿಗಳು, ಶಾಸಕರು, ಸಂಸದರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಮಹರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳನಾಡಿನ ಅನೇಕ ಮಠಾಧೀಶರು ಮತ್ತು ಧಾರವಾಡ, ಬಾಗಲಕೋಟೆ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ, ದಾವಣಗೆರೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದ್ದು, 25 ಸಾವಿರ ಆಸನಗಳ ವ್ಯವಸ್ಥೆ ಮಾಡಿದ್ದು, ಜನದಟ್ಟಣೆ ನೋಡಿಕೊಂಡು ಆಸನಗಳನ್ನು ಹೆಚ್ಚಿಸಲು ಯೋಜಿಸಲಾಗಿದೆ.ಆಯೋಜಕರೊಂದಿಗೆ ಸಭೆ ನಡೆಸಿರುವ ಹು-ಧಾ ಪೊಲೀಸ್ ಕಮಿಷನರೇಟ್‌ನ ಡಿಸಿಪಿ ಮಹಾನಿಂಗ ನಂದಗಾವಿ, ರವೀಶ ಸಿ.ಆರ್., ಮುಂಜಾಗ್ರತಾ ಕ್ರಮ, ವಾಹನಗಳ ಸಂಚಾರ, ಪಾರ್ಕಿಂಗ್ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಕೆಲವೊಂದಿಷ್ಟು ಪರಿಹಾರೋಪಾಯಗಳನ್ನು ತಿಳಿಸಿದ್ದಾರೆ.
ನಿಲುಗಡೆಗೆ ಅವಕಾಶ: ವಿವಿಧ ಜಿಲ್ಲೆಗಳಿಂದ ಜನರನ್ನು ಹೊತ್ತು ಸಮಾವೇಶಕ್ಕೆ ಬರುವ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ರೂಪಿಸಲಾಗಿದೆ. ನೆಹರೂ ಮೈದಾನದ ಬಳಿ ಜನರನ್ನು ಇಳಿಸಿ ಕಾರವಾರ ರಸ್ತೆಯ ಗಿರಣಿಚಾಳ ಮೈದಾನ, ರೈಲ್ವೆ ಮೈದಾನ ಹಾಗೂ ಗದಗ ರಸ್ತೆಯ ಮೈದಾನದಲ್ಲಿ ವಾಹನಗಳ ನಿಲುಗಡೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಅದರಂತೆ ಮಠಾಧೀಶರ ಮತ್ತು ಗಣ್ಯರ ವಾಹನಗಳಿಗೆ ಲ್ಯಾಮಿಂಗ್ಟನ್ ಮೈದಾನ ಹಾಗೂ ಮೂರುಸಾವಿರಮಠದ ಆವರಣದಲ್ಲಿ ಸ್ಥಳಾವಕಾಶ ನೀಡಲಾಗಿದೆ. ಸ್ವಾಮೀಜಿಗಳು ಮೂರುಸಾವಿರ ಮಠದಿಂದ ಪಾದಯಾತ್ರೆ ಮೂಲಕ ಮೈದಾನಕ್ಕೆ ಬರುವ ಹಿನ್ನೆಲೆಯಲ್ಲಿ ಮೂರುಸಾವಿರ ಮಠದ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.200ಕ್ಕೂ ಹೆಚ್ಚು ಸ್ವಯಂ ಸೇವಕರು: ಏಕಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಮೈದಾನದಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಮುಂಜಾಗ್ರತಾ ಕ್ರಮವಹಿಸಲು ಮತ್ತು ವೇದಿಕೆ ನಿರ್ಹವಣೆ, ಊಟ, ಮೇಲ್ವಿಚಾರಣೆ ಹಿತದೃಷ್ಟಿಯಿಂದ 200 ಸ್ವಯಂ ಸೇವಕರನ್ನು ನೇಮಿಸಲಾಗಿದೆ.
ಸಮಾವೇಶದ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳಾವಕಾಶ ಗುರುತಿಲಾಗಿದೆ. ಮಾರ್ಗ ಬದಲಾವಣೆ ಮಾಡಿಲ್ಲ. ಹು-ಧಾ ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿಗಳು- ಸಿಬ್ಬಂದಿ ಭದ್ರತೆ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಡಿಸಿಪಿ ಮಹಾನಿಂಗ ನಂದಗಾವಿ ಹೇಳಿದರು.ಸಮಾವೇಶದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಿದ್ದು, ಊಟ, ಪಾರ್ಕಿಂಗ್‌ಗೆ ಪೂರಕ ವ್ಯವಸ್ಥೆಯನ್ನು ಮಾಡಲಾಗಿದೆ. ಸಮಾವೇಶದಲ್ಲಿ ಪಾಲ್ಗೊಳ್ಳುವ ಜನರ ಹಿತದೃಷ್ಟಿಯಿಂದ 200ಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಸಹ ನೇಮಿಸಲಾಗಿದೆ ಎಂದು ಆಯೋಜಕರಾದ ಮಲ್ಲಿಕಾರ್ಜುನ ಸಾವಕಾರ ಹೇಳಿದರು.