ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ರೈತರು ಆರ್ಥಿಕ ಸಬಲ

| Published : Sep 19 2025, 01:01 AM IST

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ರೈತರು ಆರ್ಥಿಕ ಸಬಲ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ದೇಶದ ಬೆನ್ನೆಲುಬು ಎಂದು ಹೇಳಿದರೂ ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ. ಇಂಥ ಯೋಜನೆ ಮೂಲಕ ರೈತರು ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ, ಮಾರಾಟ ಮಾಡಿ ನಿಶ್ಚಿತ ಆದಾಯ ಗಳಿಸಬೇಕು.

ಕೊಪ್ಪಳ:

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ (ಪಿಎಂಎಫ್‌ಎಂಇ) ಯೋಜನೆಯಡಿ ಸೌಲಭ್ಯ ಪಡೆದು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ರೈತರು ಆದಾಯ ವೃದ್ಧಿಸಿಕೊಳ್ಳಬೇಕೆಂದು ಸಂಸದ ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.

ಗುರುವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕೆಪೆಕ್ ಲಿಮಿಟೆಡ್, ಆತ್ಮ ಯೋಜನೆ, ಕೃಷಿ ಇಲಾಖೆ ಮತ್ತು ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯ ಜಿಲ್ಲಾಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರು ದೇಶದ ಬೆನ್ನೆಲುಬು ಎಂದು ಹೇಳಿದರೂ ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ. ಇಂಥ ಯೋಜನೆ ಮೂಲಕ ರೈತರು ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ, ಮಾರಾಟ ಮಾಡಿ ನಿಶ್ಚಿತ ಆದಾಯ ಗಳಿಸಬೇಕು. ಅದರಲ್ಲೂ ಬ್ರ್ಯಾಂಡಿಂಗ್ ಮೂಲಕ ಮಾರುಕಟ್ಟೆಯಲ್ಲಿ ತಮ್ಮತನ ಗುರುತಿಸಿಕೊಂಡು ಆದಾಯ ಗಳಿಸುವಂತಾಗಬೇಕು ಎಂದರು.

ರೈತರು ಬೆಳೆದ ಬೆಳೆಯನ್ನು ಬ್ರ್ಯಾಡಿಂಗ್ ಮಾಡಿ ಮಾರಾಟ ಮಾಡಿದರೆ ನೇರವಾಗಿ ಲಾಭ ಪಡೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರ ಪಿಎಂಎಫ್‌ಎಂಇ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತರಿಗೆ ₹ 30 ಲಕ್ಷ ವರೆಗೆ ಸಾಲ ಸೌಲಭ್ಯದೊಂದಿಗೆ ₹ 15 ಲಕ್ಷ ವರೆಗೆ ಸಹಾಯಧನ ಸಿಗಲಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಪಿಎಂಎಫ್‌ಎಂಇ ಯೋಜನೆಯಡಿ ಅರ್ಹ ರೈತರಿಗೆ ಸಾಲ ಮಂಜೂರು ಮಾಡಲು ಲೀಡ್ ಬ್ಯಾಂಕ್ ಅಧಿಕಾರಿಗಳು ತ್ವರಿತವಾಗಿ ಕ್ರಮ ವಹಿಸಬೇಕು. ಯೋಜನೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಕೃಷಿ ಮತ್ತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮುಂದಾಗಬೇಕು. ಪಿಎಂಎಫ್‌ಎಂಇ ಯೋಜನೆಯಡಿ ರೈತರು ಕಿರು ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಿ, ಇತರರಿಗೆ ಉದ್ಯೋಗ ನೀಡಬೇಕು ಎಂದು ಸಂಸದರು ಹೇಳಿದರು.

ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಮಾತನಾಡಿ, ರೈತರ ಬೆಳೆಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆ ಸೌಲಭ್ಯ ಸಿಗುತ್ತಿಲ್ಲ. ಹಾಗಾಗಿ ರೈತರು ಕಿರು ಆಹಾರ ಸಂಸ್ಕರಣೆ ಮಾಡಿ, ಅದಕ್ಕೆ ಮೌಲ್ಯವರ್ಧನೆ ಬರುವಂತೆ ಮಾರಾಟ ಮಾಡಿದರೆ ಬೆಲೆ ಹೆಚ್ಚು ಸಿಗುತ್ತದೆ. ಮಾರುಕಟ್ಟೆ ಸೌಲಭ್ಯ, ಬ್ರಾಂಡಿಂಗ್‌ ಮಾಡಿದ ಉತ್ಪನ್ನಗಳ ಬೆಲೆ ನೈಸರ್ಗಿಕವಾಗಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಪಿಎಂಎಫ್‌ಎಂಇ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ. 35 ಮತ್ತು ರಾಜ್ಯ ಸರ್ಕಾರದಿಂದ ಶೇ. 15ರಷ್ಟು ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 178 ಫಲಾನುಭವಿಗಳು ಬೇರೆ ಬೇರೆ ಯೂನಿಟ್‌ ಮಾಡಿ, ಯಶಸ್ವಿ ಉದ್ದಿಮೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರವು ವಿಶೇಷವಾಗಿ ಆಹಾರ ಸಂಸ್ಕರಣೆಗೆ ಹೆಚ್ಚು ಒತ್ತು ನೀಡುತ್ತಿದೆ. ರೈತರು ಬೆಳೆಯುವುದು ಮಾತ್ರವಲ್ಲದೆ ಕಟಾವು ತಂತ್ರಜ್ಞಾನ ಮತ್ತು ಕಟಾವಿನ ನಂತರದ ತಂತ್ರಜ್ಞಾನ ಒದಗಿಸಬೇಕು ಎಂದರು.

ಕೆಪೆಕ್ ಸಂಸ್ಥೆಯ ಎಂಎಫ್‌ಎಂಇ ಯೋಜನೆಯ ತಂಡದ ನಾಯಕ ಅರವಿಂದ ಕೆ., ಯೋಜನೆಯ ಸೌಲಭ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪಿಎಂಎಫ್‌ಎಂಇ ಯೋಜನೆಯಡಿ ಸಾಲ ಮಂಜೂರಾತಿ ಪ್ರಮಾಣ ಪತ್ರ ವಿತರಣೆಯನ್ನು ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು. ಎಂಎಫ್‌ಎಂಇ ಯೋಜನೆಯಡಿ ಯಶಸ್ವಿ ಉದ್ದಿಮೆದಾರರನ್ನು ಸನ್ಮಾನಿಸಲಾಯಿತು ಮತ್ತು ಎಂಎಫ್‌ಎಂಇ ಯೋಜನೆಯ ಮಾಹಿತಿ ಒಳಗೊಂಡ ಕರಪತ್ರ ಹಾಗೂ ಕಿರು ಆಹಾರ ಉತ್ಪನ್ನಗಳ ಬ್ರ್ಯಾಡಿಂಗ್ ಮಾದರಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಶ್ರೀನಿವಾಸ ಗುಪ್ತಾ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರೆಡ್ಡಿ ಶ್ರೀನಿವಾಸ, ಜಿಪಂ ಸಿಇಒ ವರ್ಣಿತ್ ನೇಗಿ, ಕೃಷಿ ಇಲಾಖೆ ಎಲ್. ಸಿದ್ದೇಶ್ವರ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮತ್ತು ಹಿರಿಯ ವಿಜ್ಞಾನಿ ರಾಘವೇಂದ್ರ ಎಲಿಗಾರ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣದ ಕೇಂದ್ರದ ಮುಖ್ಯಸ್ಥ ಮತ್ತು ವಿಜ್ಞಾನಿ ಎಂ.ವಿ. ರವಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಮಾರುತಿ, ಕೃಷಿಕ ಸಮಾಜದ ವಿರೂಪಣ್ಣ ನವೋದಯ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ರೈತರು ಉಪಸ್ಥಿತರಿದ್ದರು.ಬಳಿಕ ಜಿಲ್ಲಾಮಟ್ಟದ ಕೃಷಿ ಉತ್ಪನ್ನ ಪ್ರದರ್ಶನ ಮಾರಾಟ ಮಳಿಗೆಗಳಿಗೆ ಗಣ್ಯರು, ಅಧಿಕಾರಿಗಳು ಭೇಟಿ ಮಾಡಿ, ವಿವಿಧ ಸ್ಥಳೀಯ ಉತ್ಪನ್ನಗಳ ಬ್ರ್ಯಾಡಿಂಗ್ ಮಾದರಿ ವೀಕ್ಷಿಸಿದರು.