ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ ಪೊರಕೆ ತಯಾರಿಕೆ!

| Published : Sep 28 2025, 02:00 AM IST

ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ ಪೊರಕೆ ತಯಾರಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ-ಧಾರವಾಡ ಅವಳಿ‌ ನಗರದ ಹಲವು ಪ್ರದೇಶಗಳಲ್ಲಿ ತೆಂಗಿನ ಮರಗಳು ಯಥೇಚ್ಚವಾಗಿ ಬೆಳೆದು ನಿಂತಿದ್ದು, ತೆಂಗಿನ ಗರಿಗಳು ಅಲಲ್ಲಿ ಬಿದ್ದು ಕಸ ನಿರ್ಮಾಣವಾಗುತ್ತಿದೆ. ಇವುಗಳನ್ನು ಬೇರೆಡೆ ಸ್ಥಳಾಂತರಿಸಿ ಕಾಂಪೋಸ್ಟ್ ಗೊಬ್ಬರ ಮಾಡಲು ಸಾಕಷ್ಟು ಸಮಯ ತಗೆದುಕೊಳ್ಳುತ್ತದೆ. ಹೀಗಾಗಿ ಕಾಂಪೋಸ್ಟ್ ಗೊಬ್ಬರಕ್ಕೆ ಸಾಗಿಸುವ ಬದಲು ಪೊರಕೆ ತಯಾರಿಸುವ ಕಾರ್ಯಕ್ಕೆ ಕೈಹಾಕಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಪ್ಲಾಸ್ಟಿಕ್‌ ತ್ಯಾಜ್ಯದಿಂದ ರಸ್ತೆ‌ ನಿರ್ಮಿಸುವ ಮೂಲಕ ಸೈ ಎನಿಸಿಕೊಂಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇದೀಗ, ರಸ್ತೆ‌ ಬದಿ ಬಿದ್ದಿರುವ ತೆಂಗಿನ ಗಿಡದ ಗರಿಗಳಿಂದ ಪೊರಕೆ ತಯಾರಿಸುತ್ತಿದೆ.

ಸದ್ಯ ಪ್ರಾಯೋಗಿಕವಾಗಿ ಒಂದು ಕಡೆ ತಯಾರಿಸುತ್ತಿರುವ ಪಾಲಿಕೆ, ಶೀಘ್ರದಲ್ಲೇ ಪಾಲಿಕೆಗೆ ಬೇಕಾಗುವ ಪೊರಕೆಗಳನ್ನು ತಾನೇ ಸಿದ್ಧಪಡಿಸಲು ಯೋಜನೆ ರೂಪಿಸಿದೆ. ಈ ಮೂಲಕ ತೆಂಗಿನ ತ್ಯಾಜ್ಯಕ್ಕೆ ಮುಕ್ತಿ ಹಾಡುವ ಜತೆಗೆ ಪಾಲಿಕೆಗೂ ತಕ್ಕಮಟ್ಟಿಗೆ ಉಳಿತಾಯವಾಗುತ್ತದೆ. ಕಸದಿಂದ ರಸ ತೆಗೆಯುವ ಪಾಲಿಕೆಯ ಈ ಕ್ರಮಕ್ಕೆ ಪ್ರಜ್ಞಾವಂತರಿಂದ‌ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹುಬ್ಬಳ್ಳಿ-ಧಾರವಾಡ ಅವಳಿ‌ ನಗರದ ಹಲವು ಪ್ರದೇಶಗಳಲ್ಲಿ ತೆಂಗಿನ ಮರಗಳು ಯಥೇಚ್ಚವಾಗಿ ಬೆಳೆದು ನಿಂತಿದ್ದು, ತೆಂಗಿನ ಗರಿಗಳು ಅಲಲ್ಲಿ ಬಿದ್ದು ಕಸ ನಿರ್ಮಾಣವಾಗುತ್ತಿದೆ. ಇವುಗಳನ್ನು ಬೇರೆಡೆ ಸ್ಥಳಾಂತರಿಸಿ ಕಾಂಪೋಸ್ಟ್ ಗೊಬ್ಬರ ಮಾಡಲು ಸಾಕಷ್ಟು ಸಮಯ ತಗೆದುಕೊಳ್ಳುತ್ತದೆ. ಹೀಗಾಗಿ ಕಾಂಪೋಸ್ಟ್ ಗೊಬ್ಬರಕ್ಕೆ ಸಾಗಿಸುವ ಬದಲು ಪೊರಕೆ ತಯಾರಿಸುವ ಕಾರ್ಯಕ್ಕೆ ಕೈಹಾಕಿದೆ. ಈ ಮೂಲಕ ಪೌರಕಾರ್ಮಿಕರು ಬಳಸಲು ತೆಂಗಿನ ಗರಿಯ ಪೊರಕೆ ಫೂರೈಸುತ್ತಿದೆ

ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗ ಮತ್ತು ಸಮುದಾಯ ಸಂಘಟನೆ ವಿಭಾಗದ ಸಹಯೋಗದಲ್ಲಿ ಈ ಯೋಜನೆ ಧಾರವಾಡದ 17ನೇ ವಾರ್ಡ್‌ನ ಮಂಜುನಾಥ ನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಇದು ಯಶಸ್ವಿಯಾದರೆ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಪೊರಕೆ ತಯಾರಿಕೆ ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿ ವರ್ಗ ತಿಳಿಸುತ್ತದೆ.

ಪೊರಕೆ ತಯಾರಿಕೆಗೆಂದೇ ಪರಿಸರ ಪ್ರೇಮಿ ಡಾ. ಸಂಜು ಕುಲಕರ್ಣಿ ಅವರು ತಮ್ಮ ನಿವೇಶನದಲ್ಲಿನ ಶೆಡ್ ಅನ್ನು ತಾತ್ಕಾಲಿಕವಾಗಿ ನೀಡಿದ್ದಾರೆ. ಪೌರ ಕಾರ್ಮಿಕರಾದ ಕಲಾವತಿ ಕಟ್ಟಿಮನಿ ಮತ್ತು ವಿಜಯಲಕ್ಷ್ಮಿ ಸಾಕೆನ್ನವರ ಮೂರು ದಿನದಲ್ಲಿ ಬಿಡುವಿನ ವೇಳೆಯಲ್ಲಿ 17 ಪೊರಕೆ ಸಿದ್ಧಪಡಿಸಿದ್ದಾರೆ. ಕಡ್ಡಿ ಹೊರತುಪಡಿಸಿ, ಉಳಿದ ಗರಿ ಮತ್ತು ಪಿಂಟೆಗಳನ್ನು ಗೊಬ್ಬರ ತಯಾರಿಸಲು ಡಾ. ಕುಲಕರ್ಣಿ ಅವರು ನಿರ್ಮಿಸಿರುವ ಕಾಂಪೋಸ್ಟ್ ಘಟಕಕ್ಕೆ ನೀಡುತ್ತಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತೆಂಗಿನ ಗರಿಗಳು ಸಿಗುತ್ತಿವೆ. ಅವುಗಳನ್ನು ಸಾಗಿಸಲು ಮತ್ತು ತ್ಯಾಜ್ಯ ಘಟಕಗಳಲ್ಲಿ ಶೇಖರಿಸಿಡಲು (ಡಿ-ಕಾಂಪೋಸ್ಟ್) ಕಷ್ಟವಾಗುತ್ತಿತ್ತು. ಉತ್ತಮ ಗರಿಗಳನ್ನು ಬಳಸಿ ಪೊರಕೆ ಸಿದ್ಧಪಡಿಸುವ ಬಗ್ಗೆ ಪರಿಸರ ಸಮುದಾಯ ಪಾಲಿಕೆಯ ಮತ್ತು ಸಂಘಟನೆ ವಿಭಾಗದ ಜತೆ ಚರ್ಚಿಸಿ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ ಎಂದು ಪಾಲಿಕೆ ಅಧಿಕಾರಿ ವರ್ಗ ತಿಳಿಸುತ್ತದೆ.

ಜನರು ತೆಂಗಿನ ಗರಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗದೇ ರಸ್ತೆ ಬದಿ ಬಿಸಾಡುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಅವುಗಳನ್ನು ಕಸ ಸಂಗ್ರಹ ವಾಹನಗಳು ಒಯ್ಯುವುದಿಲ್ಲ. ಅದಕ್ಕೆ ವಾರ್ಡ್‌ಗೆ ನೇಮಕವಾಗಿರುವ ಜಮಾದಾರರು ಅಥವಾ ಪೌರಕಾರ್ಮಿಕರಿಗೆ ತೆಂಗಿನ ಗರಿಗಳು ಕಂಡರೆ ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡುತ್ತಾರೆ. ಪಾಲಿಕೆ ವಾಹನದಲ್ಲಿ ಅವುಗಳನ್ನು ಸಂಗ್ರಹಿಸಿ ತರುತ್ತಾರೆ.

ನಲ್ಮ ಯೋಜನೆಯಡಿ ಸ್ವ-ಸಹಾಯ ಸಂಘದ ಸದಸ್ಯರಿಗೆ ತೆಂಗಿನ ಗರಿಗಳನ್ನು ನೀಡಿ ಅವರಿಂದಲೇ ಪೊರಕೆ ಖರೀದಿಸುವ ಯೋಜನೆ ಪಾಲಿಕೆಯದ್ದು. ಸ್ವ-ಸಹಾಯ ಸಂಘಗಳಿಗೂ ಆಹ್ವಾನ ನೀಡುತ್ತೇವೆ. ಮಹಾನಗರ ಪಾಲಿಕೆ ವಿಧಿಸುವ ದರಕ್ಕೆ ಪೊರಕೆ ಪೂರೈಕೆ ಮಾಡಿದರೆ ಖರೀದಿಸಲು ಮಹಾನಗರ ಪಾಲಿಕೆ ಸಿದ್ಧವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಾಲಿಕೆಯಲ್ಲಿ ಸ್ವಚ್ಛತಾ ‌ಕಾರ್ಯನಿರ್ವಹಿಸುವ 2000 ಪೌರಕಾರ್ಮಿಕರಿದ್ದು ಇದರಲ್ಲಿ ಮಹಿಳಾ ಪೌರಕಾರ್ಮಿಕರು ಮಾತ್ರ ಪೊರಕೆ ಉಪಯೋಗಿಸುತ್ತಾರೆ. ಪುರುಷರು ಅತೀ ಕಡಿಮೆ ಪ್ರಮಾಣದಲ್ಲಿ ಪೊರಕೆ ಉಪಯೋಗಿಸುತ್ತಾರೆ. ಪ್ರತಿ ವರ್ಷ 12000ರಿಂದ 15000 ಪೊರಕೆಗಳ ಅವಶ್ಯಕತೆ ‌ಇದ್ದು ಪ್ರತಿ ವರ್ಷ ಪೊರಕೆ ಖರೀದಿಗಾಗಿ ಪಾಲಿಕೆ ಅಂದಾಜು ₹ 12ರಿಂದ ₹ 15 ಲಕ್ಷ ‌ಖರ್ಚು ಮಾಡುತ್ತಿದೆ. ತೆಂಗಿನ ಗರಿಗಳನ್ನು ಪಾಲಿಕೆಯೆ ಸ್ವ-ಸಹಾಯ ಸಂಘಗಳಿಗೆ ಪೂರೈಕೆ ಮಾಡಿ ಅವರಿಂದ ಪೊರಕೆ ಮಾಡಿಸಿ‌ ಖರೀದಿಸುವುದರಿಂದ ಸ್ವ-ಸಹಾಯ ಸಂಘಗಳ ಮಹಿಳೆಯರಿಗೂ ಸ್ವ ಉದ್ಯೋಗ ಸಿಕ್ಕಂತಾಗುತ್ತದೆ. ತಕ್ಕಮಟ್ಟಿಗೆ ಪಾಲಿಕೆಗೂ ಉಳಿತಾಯವಾಗಲಿದೆ.‌ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತೆಂಗಿನ ‌ಗರಿಗಳಿಂದ ಉತ್ಪತ್ತಿಯಾಗುವ ಕಸಕ್ಕೂ ಮುಕ್ತಿ ಕಾಣಿಸಲು ಈ ವಿನೂತನ ಯೋಜನೆ ಸಹಕಾರಿಯಾಗಲಿದೆ.

ಮಾರುಕಟ್ಟೆಯಲ್ಲಿ ಒಂದು‌ ಪೊರಕೆಗೆ ₹ 80ರಿಂದ ₹ 90 ಬೆಲೆ ಇದ್ದು ಪಾಲಿಕೆ ಇದಕ್ಕಾಗಿ ₹ 12ರಿಂದ ₹ 15 ಲಕ್ಷ ‌ಖರ್ಚು ಮಾಡುತ್ತಿದೆ. ಇದೀಗ ಪಾಲಿಕೆ ವ್ಯಾಪ್ತಿಯಲ್ಲಿ ಸಿಗುವ ತೆಂಗಿನ ಗರಿಗಳನ್ನು ಬಳಸಿ ಪೊರಕೆ ಸಿದ್ಧಪಡಿಸುವ ಕಾರ್ಯವನ್ನು ಸದ್ಯಕ್ಕೆ ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ‌ ತೆಂಗಿನ ತ್ಯಾಜ್ಯಕ್ಕೂ ಮುಕ್ತಿ‌ ನೀಡಿದಂತಾಗುತ್ತಿದೆ. ಪಾಲಿಕೆಗೂ ಉಳಿತಾಯವಾಗಲಿದೆ.

ಸಂತೋಷ ಯರಂಗಳಿ, ಪರಿಸರ ಅಭಿಯಂತರರು, ಪಾಲಿಕೆ