ಸಿ.ಕೆ. ನಾಗರಾಜ
ಹೊಸಪೇಟೆ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲು ಏರಿಕೆಯಾಗುತ್ತಿದೆ. ಬಿಸಿಲಿಗೆ ಜನರು ತತ್ತರಿಸುವಂತಾಗಿದೆ. ಹೊಸಪೇಟೆಯಲ್ಲಿ ಅಂದಾಜು 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮಧ್ಯಾಹ್ನ ಮನೆಯಿಂದ ಹೊರಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.ಬೇಸಿಗೆ ಕಾಲದಲ್ಲಿ ನಮ್ಮ ದೇಹ ತಣಿಸಲು ನಿಸರ್ಗ ನಮಗೆ ಹಲವಾರು ಹಣ್ಣುಗಳನ್ನು ವರದಾನವಾಗಿ ನೀಡಿದೆ. ಅದರಲ್ಲಿ ತಾಳೆ ಹಣ್ಣು ಒಂದು. ತಾಳೆ ಹಣ್ಣು ಕೈಯಲ್ಲಿ ಜಾರುವ, ಬಾಯಲ್ಲಿ ಕರಗುವ ಹಣ್ಣು. ಇದು ಆರೋಗ್ಯಕ್ಕೆ ಉತ್ತಮ ಹಣ್ಣಾಗಿದೆ. ವರ್ಷಕ್ಕೆ ಒಮ್ಮೆಯಾದರೂ ತಿನ್ನಲೇಬೇಕು. ತಾಳೆ ಹಣ್ಣು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ನಗರದಲ್ಲಿ ತಾಳೆ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಬೆಲೆ ಲೆಕ್ಕಿಸದೇ ಜನರು ಖರೀದಿಗೆ ಮುಗಿ ಬಿದ್ದಿದ್ದಾರೆ.ಬೇಸಿಗೆಯಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ಜನರು ತಂಪು ಪಾನೀಯ, ಎಳನೀರು, ಕಬ್ಬಿನಹಾಲು, ಕಲ್ಲಂಗಡಿ, ಮಜ್ಜಿಗೆ ಸೇರಿದಂತೆ ವಿವಿಧ ಹಣ್ಣಿನ ಜ್ಯೂಸ್ ಮೊರೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ತಾಳೆ ಕೊಬ್ಬರಿ (ತಾಳೆಹಣ್ಣಿ)ನ ಬೇಡಿಕೆ ಹೆಚ್ಚಾಗಿದೆ.
ಜಿಲ್ಲೆಯ ತಾಳೆಬಸಾಪುರ, ತಾಳೆಬಸಾಪುರ ತಾಂಡಾ, ರಾರಾಳು ತಾಂಡಾ, ಆನೆಕಲ್ಲು, ಹೊಸಕೇರಿ, ದಶಮಾಪುರ, ಹಂಪಾಪಟಣ್ಣ, ಚಿಲಕನಹಟ್ಟಿ, ತಿಮ್ಮಲಾಪುರ, ಓಬಲಾಪುರ, ಮಾಗಿಮಾವಿನಹಳ್ಳಿ, ಗರಗ, ಶಿವಪುರ, ಮಾದೂರು, ಕಮಲಾಪುರ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ತಾಳೆ ಹಣ್ಣುಗಳ ಗಿಡಗಳು ಹೇರಳವಾಗಿ ಬೆಳೆದಿವೆ.
ಈ ಗ್ರಾಮಗಳ ಸುತ್ತಮುತ್ತಲಿನಿಂದ ತಾಳೆಹಣ್ಣುಗಳನ್ನು ಕೆಲವರು ಮರ ಏರಿ ಹರಿದು ತಂದರೆ, ಮತ್ತೆ ಕೆಲವರು ಹೊಲ-ಗದ್ದೆಗಳಲ್ಲಿರುವ ತಾಳೆ ಮರಗಳಿಂದ ಹಣ್ಣು ಖರೀದಿಸಿಕೊಂಡು ಹೊಸಪೇಟೆ ನಗರಕ್ಕೆ ತಂದು ಮಾರಾಟ ಮಾಡುತ್ತಾರೆ. ನಗರದ ಬಸ್ ನಿಲ್ದಾಣದ ಮುಂದೆ, ನಗರಸಭೆ ಮುಂದೆ, ರಾಜಮದಕರಿ ನಾಯಕ ವೃತ್ತ, ಸೋಗಿ ಮಾರುಕಟ್ಟೆ ಬಳಿ, ವಿಜಯನಗರ ಕಾಲೇಜು ಮುಂದೆ, ಬಳ್ಳಾರಿ ರಸ್ತೆ, ಹಂಪಿ ರಸ್ತೆ, ಮೇನ್ ಬಜಾರ್, ಎಪಿಎಂಸಿ ಸೇರಿದಂತೆ ನಗರದ ಎಲ್ಲ ರಸ್ತೆಯ ಬದಿ ಮತ್ತು ಬಂಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆ ವರೆಗೆ ವ್ಯಾಪಾರ ಮಾಡಿ ಒಂದಿಷ್ಟು ಹಣ ಸಂಪಾದಿಸಿಕೊಳ್ಳುತ್ತಿದ್ದಾರೆ.
ಎಳನೀರಿನಂತೆಯೇ ದೇಹದ ಉಷ್ಣತೆ ಕಡಿಮೆ ಮಾಡುತ್ತದೆ ಎಂದು ಜನರು ತಾಳೆ ಹಣ್ಣಿಗೆ ಮೊರೆ ಹೋಗುವುದು ಸಹಜವಾಗಿದೆ. ಪ್ರತಿ ವರ್ಷ ಈ ಹಣ್ಣುಗಳು ನವೆಂಬರ್ ತಿಂಗಳಿಂದಲೇ ಕಾಣಸಿಗುತ್ತವೆ. ಆದರೆ, ಮಾರ್ಚ್ ನಿಂದ ಮೇ ತಿಂಗಳವರೆಗೆ ಅತಿ ಬೇಡಿಕೆ ಇರುತ್ತದೆ.ಒಂದು ತಾಳೆ ಹಣ್ಣಿಗೆ ₹30, ಎರಡು ತಾಳೆ ಹಣ್ಣಿಗೆ ₹50ರಂತೆ ಕಾಯಿ ಸೈಜ್‌ನ ಮೇಲೆ ಮಾರಾಟ ಮಾಡಲಾಗುತ್ತಿದೆ. ಒಂದು ಕಾಯಿಯಲ್ಲಿ ಮೂರು ಹಣ್ಣುಗಳು ಇರುತ್ತವೆ. ಇದು ಬಲು ರುಚಿಯಾದ ಹಣ್ಣಾಗಿದೆ. ರುಚಿಯಷ್ಟೇ ಅಲ್ಲ, ಔಷಧೀಯ ಗುಣವೂ ಇದೆ ಎನ್ನುತ್ತಾರೆ ತಾಳೆ ಹಣ್ಣು ಮಾರುವವರಾದ ವಿಜಯ ನಾಯ್ಕ್.