ಪ್ರತಿಬಿಂಬ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಸಿದ್ದಾಪುರಅಖಿಲ ಹವ್ಯಕ ಮಹಾಸಭಾ ಸಂಘಟಿಸುತ್ತಿರುವ ಪ್ರತಿಬಿಂಬ ಕಾರ್ಯಕ್ರಮವು ಹವ್ಯಕರ ಮನಸ್ಸು, ಆತ್ಮ ಹಾಗೂ ಜೀವನದ ಪ್ರತಿಬಿಂಬವೇ ಆಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮಲ್ಲಿ ಕಾಣುವ ದೋಷ ತಿದ್ದಿಕೊಂಡು ನಡೆಯುವಂತಾಗಬೇಕು. ಅಂದಾಗ ಜೀವನ ಸರಿಹೋಗುತ್ತದೆ ಎಂದು ಶ್ರೀಮನ್ನೆಲೆಮಾವುಮಠದ ಮಾಧವಾನಂದಭಾರತೀ ಸ್ವಾಮಿಗಳು ಹೇಳಿದರು.ಶ್ರೀಮಠದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಸಂಘಟಿಸಿದ್ದ ಪ್ರತಿಬಿಂಬ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸಾಧಕರನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು.

ಹವ್ಯಕರು ತಮ್ಮದೇ ಆದ ಆಚಾರ, ವಿಚಾರ, ಸಂಪ್ರದಾಯ, ಹಬ್ಬ-ಹರಿದಿನ ಕೈಬಿಡುತ್ತಿದ್ದೇವೆ. ಅತಿಥಿ ಸತ್ಕಾರ ಕಡೆಗಣಿಸುತ್ತಿದ್ದೇವೆ. ಪ್ರತಿಬಿಂಬ ನಮ್ಮಲ್ಲಿ ಹಾಸುಹೊಕ್ಕಾಗಿರುವ ಹೆಚ್ಚುಗಾರಿಕೆಯನ್ನು ನೆನಪಿಸುವ ಕಾರ್ಯಕ್ರಮವಾಗಿದೆ. ಸಾಧಕರಿಗೆ ಸನ್ಮಾನ ಮಾಡಿದ್ದರಿಂದ ಅವರ ಸಾಧನೆಯ ಕ್ಷೇತ್ರದಲ್ಲಿ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದರು.ಅಭ್ಯಾಗತರಾಗಿದ್ದ ವಕೀಲ ರವಿ ಹೆಗಡೆ ಹೂವಿನಮನೆ ಮಾತನಾಡಿ, ಹವ್ಯಕ ಸಮುದಾಯ ಪ್ರತಿಭೆಯ ಕಣಜವಾಗಿದೆ. ಯೋಗ್ಯತೆ, ಅರ್ಹತೆಯ ದೃಷ್ಟಿಯಿಂದ ಪ್ರಥಮ ಸ್ಥಾನದಲ್ಲಿದ್ದೇವೆ, ಮೀಸಲಾತಿ ಬೇಡುತ್ತಿಲ್ಲ. ನಮ್ಮ ಅರ್ಹತೆಯನ್ನು ಕಡೆಗಣಿಸಿದಾಗ ಖೇದವಾಗುತ್ತದೆ. ಹವ್ಯಕರು ಜಾಗತಿಕ ಮಟ್ಟದಲ್ಲಿ ಕೌಟುಂಬಿಕ ಪದ್ಧತಿ, ಬಾಂಧವ್ಯವನ್ನು ಅಳವಡಿಸಿಕೊಂಡವರು. ಹವ್ಯಕ ಸಮಾಜವನ್ನು ಮತ್ತಷ್ಟು ಬಲಿಷ್ಠವಾಗಿ ಮಾಡಬೇಕಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಹೆಗ್ಗರಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್. ಭಟ್ಟ ಉಂಚಳ್ಳಿ, ಬಾಳೇಸರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಿ.ಎನ್. ಹೆಗಡೆ ಮಾತನಾಡಿದರು. ನೆಲೆಮಾವುಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಉಪಸ್ಥಿತರಿದ್ದರು. ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರಾದ ಚಂದ್ರಶೇಖರ ಭಟ್ಟ ಗಾಳಿಮನೆ (ವೈದಿಕ ಕ್ಷೇತ್ರ), ಸುಲೋಚನಾ ಶಾಸ್ತ್ರಿ ಬಿಳಗಿ(ಸಹಕಾರಿ ಕ್ಷೇತ್ರ), ವಿನಾಯಕ ತಿಮ್ಮಪ್ಪ ಹೆಗಡೆ ಹೂಡ್ಲಮನೆ (ಶೈಕ್ಷಣಿಕ), ಸುಬ್ರಾಯ ಗಣಪತಿ ಹೆಗಡೆ ಬಾಳೇಕೊಪ್ಪ (ಕೃಷಿ), ಗಣಪತಿ ಹೆಗಡೆ ಓಡ್ಲಕೋಣೆ (ಹೈನುಗಾರಿಕೆ), ಬಾಲಚಂದ್ರ ಪ್ರಭಾಕರ ಹೆಗಡೆ ಕೊಡಮೂಡ (ಕೃಷಿ), ಎಂ.ಜಿ. ಹೆಗಡೆ ಗೆಜ್ಜೆ (ಸಾಮಾಜಿಕ), ಮಹಾಬಲೇಶ್ವರ ಇಟಗಿ (ಯಕ್ಷಗಾನ ಸಾಹಿತ್ಯ), ನಾಗಪತಿ ಭಟ್ಟ ವಡ್ಡಿನಗದ್ದೆ (ರಂಗಭೂಮಿ) ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಹಿರಿಯ ವೈದಿಕ ವಿದ್ವಾಂಸ ಚಂದ್ರಶೇಖರ ಭಟ್ಟ ಗಾಳಿಮನೆ ಮಾತನಾಡಿದರು. ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸಿದ್ದರು. ವೇ. ರಾಮಚಂದ್ರ ಭಟ್ಟ, ಪ್ರಶಾಂತ ಭಟ್ಟ ಮಳವಳ್ಳಿ, ಪ್ರತಿಬಿಂಬದ ಸಂಚಾಲಕರಾದ ಜಿ.ಜಿ. ಹೆಗಡೆ ಬಾಳಗೋಡು, ಗಣಪತಿ ಹೆಗಡೆ ಹೇರೂರು, ದೀಪಕ ಹೆಗಡೆ ಗೋಳಿಕೈ, ಶಶಾಂಕ ಹೆಗಡೆ ಶೀಗೇಹಳ್ಳಿ, ನಿರ್ದೇಶಕ ಜಿ.ಎಂ. ಭಟ್ಟ ಕಾಜಿನಮನೆ ಸೇರಿದಂತೆ ಪದಾಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು. ವಿ.ಜಿ. ಹೆಗಡೆ ಕೆರೆಗದ್ದೆ ನಿರ್ವಹಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.