ಹುಲಿಕೆರೆ ಕೆರೆ ತುಂಬಿ ಸಂಕಷ್ಟ, ನೊಂದ ಕುಟುಂಬಗಳಿಗೆ ಪರಿಹಾರ ಶೀಘ್ರ: ಶಾಸಕ ಶ್ರೀನಿವಾಸ

| Published : Nov 25 2024, 01:05 AM IST

ಸಾರಾಂಶ

ಸ್ಥಳೀಯ ಆಡಳಿತ ಶಾಸಕರು ನಿರಾಶ್ರಿತರಿಗೆ ಸೂಕ್ತ ನೆರವು ನೀಡಿಲ್ಲ ಎಂದು ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು.

ಕೂಡ್ಲಿಗಿ: ತಾಲೂಕಿನ ಹುಲಿಕೆರೆ ಗ್ರಾಮದ ಕೆರೆ ತುಂಬಿ ಹಿನ್ನೀರಿನಿಂದ 55ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಶೀಘ್ರವಾಗಿ ನಿರಾಶ್ರಿತರಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹೇಳಿದರು.

ಹುಲಿಕೆರೆ ಗ್ರಾಮದಲ್ಲಿ 55 ವರ್ಷಗಳ ನಂತರ ಕೆರೆ ತುಂಬಿ ಕೋಡಿ ಬಿದ್ದಿದ್ದರಿಂದ ಕೆರೆಯ ಹಿನ್ನೀರು ಗ್ರಾಮದ ಕೆಲವು ಭಾಗಗಳನ್ನು ಆವರಿಸಿದ್ದು ಮನೆಗಳು ಬೀಳುವ ಸ್ಥಿತಿಯಲ್ಲಿದೆ. ಸ್ಥಳೀಯ ಆಡಳಿತ ಶಾಸಕರು ನಿರಾಶ್ರಿತರಿಗೆ ಸೂಕ್ತ ನೆರವು ನೀಡಿಲ್ಲ ಎಂದು ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಇತ್ತೀಚೆಗೆ ತಹಶೀಲ್ದಾರ್ ಬಂದು ನೊಂದವರ ಸಮಸ್ಯೆ ಆಲಿಸಿದ್ದಾರೆ. ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೇಟಿ ನೀಡಿ ನೊಂದ ಕುಟುಂಬಗಳ ಜೊತೆಗೆ ಚರ್ಚಿಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಕೆರೆ ನೀರಿನಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ಕೊಟ್ಟು ನಂತರ ಗ್ರಾಮಸ್ಥರೊಂದಿಗೆ ಮಾತನಾಡಿ, ಐದು ದಶಕಗಳ ನಂತರ ಕೆರೆ ತುಂಬಿರುವುದು ಒಂದೆಡೆ ಸಂತಸ, ಆದರೆ ಹಿನ್ನೀರಿನಿಂದಾಗಿ ಹಿರೇಕುಂಬಳಗುಂಟೆ ರಸ್ತೆ ಹಾಗೂ ಹಲವು ಮನೆಗಳಿಗೆ ಹಾನಿಯಾಗಿದೆ. ಇದಕ್ಕೆ ಮುಂದಿನ ಕ್ರಮ ಏನು ಮಾಡಬೇಕು ಎಂಬುದರ ಬಗ್ಗೆ ಸಂಬಂಧಿಸಿದ ನೀರಾವರಿ ಇಲಾಖೆಯ ಇಂಜಿನಿಯರ್, ಇತರೆ ತಂತ್ರಜ್ಞರ ತಂಡ ಕರೆಸಿ ಅವರು ಕೊಡುವ ವರದಿ ಆಧಾರದ ಮೇಲೆ ಮುಂದಿನ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಗ್ರಾಮಸ್ಥರು ಯಾರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು.

ಕೂಡ್ಲಿಗಿ ತಾಲೂಕಿನ ಬಹುತೇಕ ಹಳ್ಳಿಯಲ್ಲಿ ಕಳೆದ ವರ್ಷ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಆದರೆ ಈ ವರ್ಷ ಉತ್ತಮ ಮಳೆಯಾಗಿದೆ. ಅತಿವೃಷ್ಠಿ ಆಗಿದೆ. ಪ್ರಕೃತಿ ಮುಂದೆ ಎಲ್ಲವೂ ನಗಣ್ಯ. ಹುಲಿಕೆರೆ ಕೆರೆಯ ನೀರಿನಿಂದ ಕೆಲವರಿಗೆ ಆದ ತೊಂದರೆಯ ಬಗ್ಗೆ ಖುದ್ದಾಗಿ ನಾನೇ ಮನೆ ಮನೆಗೆ ಹೋಗಿ ವೀಕ್ಷಿಸಿದ್ದೇನೆ. ಇದಕ್ಕೆ ಶೀಘ್ರವಾಗಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾಪಂ ಇಒ ನರಸಪ್ಪ, ವಕೀಲರಾದ ಡಾ. ಓಂಕಾರಪ್ಪ, ಕಂದಾಯ ನಿರೀಕ್ಷಕ ಸಿದ್ದಪ್ಪ, ಪಿಡಿಒ ನಿಂಗಪ್ಪ, ಚಿನ್ನಾಪ್ರಿ ಸೇರಿದಂತೆ ಗ್ರಾಮದ ಮುಖಂಡರಾದ ಮಾರಪ್ಪ, ಎಚ್.ಎಂ. ಶರಣಪ್ಪ, ಶಂಕರಪ್ಪ, ತಿಪ್ಪೇಸ್ವಾಮಿ, ಜಗದೀಶಯ್ಯ, ವೀರೇಶ್, ಸಕಲಾಪುರದಹಟ್ಟಿ ಹರೀಶ್ ಸೇರಿದಂತೆ ಇದ್ದರು. ಇದೇ ಸಂದರ್ಭದಲ್ಲಿ ಎತ್ತೊಂದು ಕೆರೆ ನೀರಿನಲ್ಲಿ ಮುಳುಗಿ ಸಾವಿಗೀಡಾದ ಎತ್ತಿನ ಮಾಲೀಕಾರಿಗೆ ಶಾಸಕರು ವೈಯಕ್ತಿಕವಾಗಿ ಪರಿಹಾರ ನೀಡಿ ಮಾನವೀಯತೆ ಮೆರೆದರು.

ಕೂಡ್ಲಿಗಿ ತಾಲೂಕು ಹುಲಿಕೆರೆ ಗ್ರಾಮದ ಕೆರೆಯ ಹಿನ್ನೀರಿನಿಂದ ಹಾನಿಯಾಗಿರುವ ಪ್ರದೇಶಕ್ಕೆ ಶಾಸಕ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು.