ಸಾರಾಂಶ
ಚನ್ನಮ್ಮನ ಕಿತ್ತೂರು : ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ದೇವಗಾಂವ ಗ್ರಾಮದ ಯೋಧ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
ನರೇಶ ಯಲ್ಲಪ್ಪ ಅಗಸರ (28) ಆತ್ಮಹತ್ಯೆ ಮಾಡಿಕೊಂಡ ಯೋಧ. ಶನಿವಾರ ಸಂಜೆ ಕಿತ್ತೂರಿನ ಪರಸನಟ್ಟಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ನಾಲ್ಕು ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಈತ ಕಳೆದ 20 ದಿನಗಳ ಹಿಂದೆ ರಜೆಯ ಮೇಲೆ ಸ್ವಗ್ರಾಮ ದೇಗಾಂವಕ್ಕೆ ಆಗಮಿಸಿದ್ದ. ನ.24ರಂದು ಮರಳಿ ಸೇನೆಗೆ ಹೋಗಬೇಕಿತ್ತು. ಆದರೆ, ಕೆರೆಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹ ಪತ್ತೆಗಾಗಿ ಶನಿವಾರ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ, ಭಾನುವಾರ ಮತ್ತೆ ಕಾರ್ಯಾಚರಣೆ ಆರಂಭಿಸಿ ಮುಳುಗಿದ್ದ ಮೃತದೇಹ ಹೊರತೆಗೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ. ಘಟನಾ ಸ್ಥಳಕ್ಕೆ ಕಿತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲೀಸಿದ್ದಾರೆ.