ಮಡಿಕೇರಿ: ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಮಾನವ ಅಭಿವೃದ್ದಿ ವರದಿ-2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ದಿ ಯೋಜನೆ-2031ರ ವರದಿಗಳನ್ನು ಸಿದ್ಧಪಡಿಸುವ ಸಂಬಂಧ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಸೋಮವಾರ ಸುದೀರ್ಘ ಚರ್ಚೆ ನಡೆಯಿತು.
ಮೊದಲಿಗೆ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕೊಡಗು ಜಿಪಂ ಮಡಿಕೇರಿ ಅವರಿಗೆ, ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ತಾಂತ್ರಿಕ ಬೆಂಬಲ ಸಂಸ್ಥೆಯ ಸಂಯೋಜಕರು, ಸಹ ಸಂಯೋಜಕರಿಗೆ ನವೀನ್ ಎ.ಬಿ. ಯೋಜನಾ ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿ ಸ್ವಾಗತ ಕೋರಿದರು.ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಯೋಜನಾ ಇಲಾಖೆ ನಿರ್ದೇಶನದಂತೆ ಈ ಬಾರಿ ಜಿಲ್ಲಾ ಯೋಜನಾ ಸಮಿತಿ ವತಿಯಿಂದ ಪ್ರಮುಖವಾಗಿ ಡಿಎಚ್‌ಡಿಆರ್-2025 ಹಾಗೂ ಐಎಸ್‌ಡಿಡಿಪಿ-2031ರ ವರದಿಗಳನ್ನು ಸಿದ್ದಪಡಿಸಲು ಕ್ರಮ ವಹಿಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಂಡು ನಿಖರ ಹಾಗೂ ನಿರ್ದಿಷ್ಟವಾದ ದತ್ತಾಂಶಗಳನ್ನು ಒದಗಿಸುವ ಕುರಿತು ತರಬೇತಿ ನೀಡಲಾಗಿದೆ ಎಂದರು.
ಈ ವರದಿಗಳ ತಯಾರಿಕೆಗೆ ಸರ್ಕಾರದ ಆದೇಶದಂತೆ ಮೈಸೂರು ವಿವಿಯ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರಾದ ನವೀತ್ ತಿಮ್ಮಯ್ಯ ಅವರ ತಂಡ ಹಾಗೂ ಮೈಸೂರಿನ ಗ್ರಾಮ್ ಸಂಸ್ಥೆಗಳನ್ನು ತಾಂತ್ರಿಕ ಬೆಂಬಲ ಸಂಸ್ಥೆಗಳಾಗಿ ಆಯ್ಕೆ ಮಾಡಲಾಗಿದೆ. ಈ ಸಂಸ್ಥೆಯವರು ಸಹ ಈಗಾಗಲೇ ತಾಲೂಕು ಮಟ್ಟದಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡಿದ್ದಾರೆ. ದತ್ತಾಂಶಗಳನ್ನು ಸಮರ್ಪಕವಾಗಿ ಒದಗಿಸುವ ಕುರಿತು ಈಗಾಗಲೇ ಹಲವಾರು ಬಾರಿ ಜಿಲ್ಲಾ ಮಟ್ಟದ ವಲಯವಾರು ಉಪ ಸಮಿತಿ ಸಭೆ ನಡೆಸಿ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.ಕೊಡಗು ಜಿಲ್ಲಾ ಮಾನವ ಅಭಿವೃದ್ದಿ ವರದಿ-2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ದಿ ಯೋಜನೆ–2031 ವರದಿಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ 232 ಸೂಚಕಗಳನ್ನು ನಿಗದಿಪಡಿಸಲಾಗಿದ್ದು, ನಿಗದಿಪಡಿಸಲಾದ ಸೂಚಕಗಳಿಗೆ ಸಂಬಂಧಿಸಿದ ದತ್ತಾಂಶವನ್ನು ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಒದಗಿಸಿರುತ್ತಾರೆ. ಈ ಮಾಹಿತಿಯನ್ನು ದತ್ತಾಂಶವಾರು ಪರಿಶೀಲಿಸಲಾಗಿದೆ ಎಂದು ತಾಂತ್ರಿಕ ಬೆಂಬಲ ಸಂಸ್ಥೆಗಳ ಸಹ ಸಂಯೋಜಕರಾದ ಮಲ್ಲಿಕಾರ್ಜುನ ಸ್ವಾಮಿ, ಗ್ರಾಮ್ ಸಂಸ್ಥೆ ಹಾಗೂ ಮೈಸೂರು ವಿವಿಯ ನವೀತ ತಿಮ್ಮಯ್ಯ ಸಭೆಯಲ್ಲಿ ವಿವರಿಸಿ ಈ ದತ್ತಾಂಶಗಳಿಗೆ ಸಭೆಯ ಅನುಮೋದನೆ ಕೋರಿದರು. ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ದಿ ಯೋಜನೆ 2031ರ ವರದಿಗೆ ಸಂಬಂಧಿಸಿದಂತೆ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಸಮಸ್ಯೆಗಳು ಮತ್ತು ಸವಾಲುಗಳು, ಮಕ್ಕಳ ಪ್ರಾರಂಭಿಕ ಬಾಲ್ಯದ ಆರೈಕೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣ, ಮಾನವ ವನ್ಯ ಜೀವಿ ಸಂಘರ್ಷ, ಮಡಿಕೇರಿ ನಗರ ಸಭೆ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ, ಕೊಡಗು ಜಿಲ್ಲೆಯ ನೈಸರ್ಗಿಕ ವಿಕೋಪ ಪೀಡಿತ ಗ್ರಾಪಂಗಳಲ್ಲಿ ವಿಪತ್ತು ನಿರ್ವಹಣೆ, ಸುಸ್ಥಿರ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ದಿ, ಕುರಿತಂತೆ 6 ವಿಷಯಗಳಿಗೆ ಸಂಬಂಧಿಸಿದಂತೆ ಕೇಸ್ ಸ್ಟಡಿ ವರದಿಗಳನ್ನು ಅಳವಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಹಾಗೂ ಸರ್ಕಾರದ ನಿರ್ದೇಶನದಂತೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಅಭಿವೃದ್ದಿ ಮೇಲಿನ ಪರಿಣಾಮಗಳ ಕುರಿತು ವರದಿಯನ್ನು ಮಾನವ ಅಭಿವೃದ್ದಿ ವರದಿಯಲ್ಲಿ ಅಳವಡಿಸಲು ತೀರ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಮಾತನಾಡಿ, ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮರ್ಪಕ ದತ್ತಾಂಶಗಳನ್ನು ಒದಗಿಸಬೇಕು. ಜಿಲ್ಲೆಯ ನೈಜ ಚಿತ್ರಣವನ್ನು ಒಳಗೊಂಡಂತೆ ವರದಿಗಳನ್ನು ಸಿದ್ದಪಡಿಸಬೇಕು. ಕೊಡಗು ಜಿಲ್ಲೆಯಲ್ಲಿ ಕಂಡುಬರುವ ವಿವಿಧ ಸಮಸ್ಯೆಗಳು ಹಾಗೂ ಸವಾಲುಗಳು ಹಾಗೂ ಪರಿಹಾರೋಪಾಯಗಳನ್ನೊಳಗೊಂಡಂತೆ ವಾಸ್ತವಿಕ ವರದಿಯನ್ನು ಸಿದ್ದಪಡಿಸುವಂತೆ ತಾಂತ್ರಿಕ ಬೆಂಬಲ ಸಂಸ್ಥೆಗಳ ಸಂಯೋಜಕರಿಗೆ ಸೂಚಿಸಿದರು. ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಅಬ್ದುಲ್ ನಭಿ, ಟಿ.ಎನ್. ಯೋಜನಾ ನಿರ್ದೇಶಕರಾದ ಜೀವನ್ ಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶಾಂತ ಗೌಡ ಗುಣಕಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಗಂಗಾಧರ ನಾಯ್ಕ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ಪೌರಾಯುಕ್ತರು, ನಗರ ಸಭೆ ಅವರು ಸಭೆಯಲ್ಲಿ ಭಾಗವಹಿಸಿದ್ದರು.