ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಕಾಂಗ್ರೆಸ್‌ ಸರ್ಕಾರದ ಕನಸಾಗಿದ್ದು, ಇಂದಿರಾ ಕ್ಯಾಂಟೀನ್‌ ವ್ಯವಸ್ಥೆಯ ಮೂಲಕ ಜನಸಾಮಾನ್ಯರಿಗೆ ಅತಿ ಕಡಿಮೆ ದರದಲ್ಲಿ ಉತ್ತಮ ಊಟೋಪಹಾರ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಕಾಂಗ್ರೆಸ್‌ ಸರ್ಕಾರದ ಕನಸಾಗಿದ್ದು, ಇಂದಿರಾ ಕ್ಯಾಂಟೀನ್‌ ವ್ಯವಸ್ಥೆಯ ಮೂಲಕ ಜನಸಾಮಾನ್ಯರಿಗೆ ಅತಿ ಕಡಿಮೆ ದರದಲ್ಲಿ ಉತ್ತಮ ಊಟೋಪಹಾರ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಇಲ್ಲಿನ ವಿದ್ಯಾನಗರ ಮತ್ತು ಗುತ್ಯಪ್ಪ ಕಾಲೋನಿಗಳಲ್ಲಿ ನೂತನವಾಗಿ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಲೋಕಾರ್ಪಣೆಗೊಳಿಸಿದ ನಂತರ ಏರ್ಪಡಿಸಿದ್ದ ಸರಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಆಹಾರ ನೀಡುವುದು. ನಗರ ಪ್ರದೇಶದ ಬಡವರಿಗೆ ಸಮತೋಲಿತ ಆಹಾರವನ್ನು ಒದಗಿಸುವ ಸದುದ್ದೇಶದಿಂದ ಇಂದಿರಾ ಕ್ಯಾಂಟೀನ್‌ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಮಾದರಿಯಾಗಿದೆ. ಇತ್ತೀಚೆಗೆ ಮತ್ತಷ್ಟು ಹೊಸ ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಲು ಮಂಜೂರಾತಿ ನೀಡಿದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ 12 ಇಂದಿರಾ ಕ್ಯಾಂಟೀನ್‌ಗಳು ಸಾರ್ವಜನಿಕ ಸೇವೆಗೆ ಮುಕ್ತವಾಗಿವೆ. ಹೊಳೆಹೊನ್ನೂರು, ಶಿಕಾರಿಪುರ ಮತ್ತು ಆನವಟ್ಟಿ ಕೇಂದ್ರಗಳಲ್ಲಿಯೂ ಶೀಘ್ರದಲ್ಲಿ ಆರಂಭಿಸಲು ದಿನಾಂಕ ನಿಗಧಿಪಡಿಸಲಾಗುವುದು. ಅಲ್ಲದೇ ನಗರದ ಜನನಿಬಿಡ ಸ್ಥಳಗಳಿದ್ದಲ್ಲಿ ಅವುಗಳನ್ನು ಗುರುತಿಸಿ, ವಿಳಂಬಕ್ಕೆ ಅವಕಾಶವಿಲ್ಲದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಅವುಗಳನ್ನು ಹಂತಹಂತವಾಗಿ ಆರಂಭಿಸಲು ವಿಶೇಷ ಗಮನಹರಿಸಲಾಗುವುದು ಎಂದರು.

ಈ ಯೋಜನೆಯ ಸಮರ್ಪಕ ಅನುಷ್ಟಾನದಿಂದಾಗಿ ಹಸಿದ ಒಡಲಿಗೆ ಅನ್ನ ದೊರೆತು ಅನೇಕ ಜನರ ಹಸಿವು ನೀಗಲಿದೆ. ಅಲ್ಲದೇ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗಲಿದೆ. ಇಂದಿರಾ ಕ್ಯಾಂಟೀನ್ಗಳಲ್ಲಿ ಸಾರ್ವಜನಿಕರಿಗೆ ವಿತರಿಸಲಾಗುವ ಆಹಾರ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಬೇಕು. ನಗರದ ಮೆಗ್ಗಾನ್‌ ಆಸ್ಪತ್ರೆಗೆ ಪ್ರತಿದಿನ ಸಹಸ್ರಾರು ಸಂಖ್ಯೆಯ ಜನರು ಚಿಕಿತ್ಸೆಗಾಗಿ ಆಗಮಿಸುತ್ತಿದ್ದು, ಅವರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆಹಾರ ದೊರೆತಲ್ಲಿ ಅನುಕೂಲವಾಗಲಿದೆ. ಇದರಿಂದಾಗಿ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿದೆ ಎಂದರು.

ಮಕ್ಕಳಿಗೆ ಶಿಕ್ಷಣ ನೀಡುವುದು ಇಂದಿನ ತುರ್ತು ಅಗತ್ಯ ಕಾರ್ಯಕ್ರಮಗಳಲ್ಲಿ ಪ್ರಧಾನವಾದುದ್ದಾಗಿದೆ. ಶಿಕ್ಷಣ ನೀಡುವುದರಿಂದಾಗಿ ದೇಶದ ಪ್ರಗತಿ ಹಾಗೂ ಮುಂಚೂಣಿ ದೇಶಗಳಲ್ಲಿ ಗುರುತಿಸಲು ಸಾಧ್ಯವಾಗಲಿದೆ. ಎಲ್ಲರಿಗೂ ಸಮಾನತೆಯ ಶಿಕ್ಷಣ ನೀಡುವುದು ಸರ್ಕಾರದ ಪ್ರಮುಖ ಆಶಯವಾಗಿದೆ. ಪ್ರಸಕ್ತ ಸಾಲಿನಲ್ಲಿ ನೂತನವಾಗಿ 50 ಪದವಿಪೂರ್ವ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಈಗಾಗಲೇ ಮಂಜೂರಾತಿ ನೀಡಿದೆ. ಕಳೆದ ಸಾಲಿನಲ್ಲಿ 173 ಪ್ರೌಢಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿತ್ತು ಎಂದು ಹೇಳಿದರು.

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕೊಳಚೆ ಪ್ರದೇಶಗಳಲ್ಲಿನ ಅರ್ಹ ಬಡ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ. ಶೀಘ್ರದಲ್ಲಿ ನಗರದ 2000 ಜನರಿಗೆ ಹಕ್ಕುಪತ್ರ ವಿತರಿಸಲು ಕಾರ್ಯಕ್ರಮ ರೂಪಿಸಲಾಗುವುದು. ಇದನ್ನು ಒಳಗೊಂಡಂತೆ ಸುಮಾರು 12,000 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದಂತಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ ಬಾನು ಅವರು ಮಾತನಾಡಿ, ಈ ಸಾಮಾಜಿಕ ವ್ಯವಸ್ಥೆಯಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲುವಂತಾಗಬಾರದು ಎಂಬ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿಗಳು ಕಾರ್ಮಿಕರು, ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ರೂಪಿಸಿ ಅನುಷ್ಟಾನಗೊಳಿಸಲಾಗಿದೆ ಎಂದರು.

ಜಿಪಂ ಸಿಇಒ ಎನ್.ಹೇಮಂತ್, ಎಸ್ಪಿ ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್‌, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ, ಮುಖಂಡರಾದ ಪ್ರಸನ್ನಕುಮಾರ್, ಕಲಗೋಡು ರತ್ನಾಕರ ಮತ್ತಿತರರು ಉಪಸ್ಥಿತರಿದ್ದರು.

----

ಮುಂದಿನ 15 ದಿನಗಳೊಳಗಾಗಿ ಉಳಿದ ಇಂದಿರಾ ಕ್ಯಾಂಟೀನ್‌ಗಳನ್ನು ಲೋಕಾರ್ಪಣೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜನಸಾಮಾನ್ಯರು ಈ ಕ್ಯಾಂಟೀನಿನ ಸೌಲಭ್ಯ ಪಡೆದುಕೊಳ್ಳಬೇಕು.

-ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ.