ಕೊಪ್ಪಳ: ಬಿಎಸ್ ಪಿಎಲ್ ಕಾರ್ಖಾನೆ ತೊಲಗಿಸಿ ಎಂದು ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿ ನಡೆಸಿದ ಹೋರಾಟಕ್ಕೆ ಫೆ. 24 ರಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಅಂದು ಕೊಪ್ಪಳ ಬಂದ್ ಮಾಡಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕೆ ಶಾಸಕರು, ಸಂಸದರು, ಸ್ವಾಮೀಜಿಗಳ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಇಲ್ಲಿನ ನಗರಸಭೆ ಸಂಕೀರ್ಣದ ಮುಂದುಗಡೆ ನಡೆದಿರುವ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹದ ೧೧೪ನೇ ದಿನ ಸಂಪನ್ನಗೊಂಡಿದ್ದು, ಫೆ. ೨೪ರಂದು ಕರೆದಿರುವ ಕೊಪ್ಪಳ ಭಾಗ್ಯನಗರ ಬಂದ್ ಕುರಿತು ಮನವರಿಕೆ ಮಾಡಿಕೊಡಲು ಮತ್ತು ಹೋರಾಟಕ್ಕೆ ಆಹ್ವಾನ ಮಾಡಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಸದಸ್ಯರು ವಿವಿಧ ಮುಖಂಡರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದು, ಅನೇಕರು ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.

ಸರ್ವಪಕ್ಷಗಳ ಮುಖಂಡರನ್ನು ಕೊಪ್ಪಳ ಭಾಗ್ಯನಗರ ಬಂದ್ ಹೋರಾಟದ ಬೆಂಬಲಕ್ಕೆ ಬರಬೇಕೆಂದು ಕರಪತ್ರ ಕೊಟ್ಟು ಆಹ್ವಾನ ಕೊಡಲಾಯಿತು. ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸದರಿ ಹೋರಾಟ ಬೆಂಬಲಿಸಿ ಸರ್ಕಾರದ ಹಂತದಲ್ಲಿ ಬೇಗ ಬಲ್ಡೋಟ ವಿಸ್ತರಣೆ ನಿಲುಗಡೆ ಆದೇಶ ಮಾಡಿಸಬೇಕು. ಶೀಘ್ರವೇ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಆರೋಗ್ಯ ಮಂತ್ರಿಗಳನ್ನು ಬಾಧಿತ ಹಳ್ಳಿಗಳಿಗೆ ಕರೆದುಕೊಂಡು ಬರಬೇಕು, ಬಸಾಪುರ ಕೆರೆ ಸಾರ್ವಜನಿಕರು, ಜಾನುವಾರುಗಳಿಗೆ ನೀರು ಕುಡಿಯಲು ಬಲ್ಡೋಟ ಅತಿಕ್ರಮಣ ತೆರವುಗೊಳಿಸಬೇಕು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸಿ ಕೇಂದ್ರ ಸರ್ಕಾರ ಇರಲಿ, ರಾಜ್ಯ ಸರ್ಕಾರ ಇರಲಿ ಎರಡೂ ಸರ್ಕಾರ ಸೇರಿಸಿ ತಾವೆಲ್ಲ ಸೇರಿ ಬಾಧಿತ ಜನರ ಜೀವ ಉಳಿಸಿ ಎಂದು ಜಂಟಿ ಕ್ರಿಯಾ ವೇದಿಕೆ ಮೂಲಕ ಆಗ್ರಹಿಸಿದರು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ವಿಪ ಸದಸ್ಯೆ ಹೇಮಲತಾ ನಾಯಕ, ಜೆಡಿಎಸ್ ಮುಖಂಡ ಸಿ.ವಿ. ಚಂದ್ರಶೇಖರ, ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರಗೆ ಹೋರಾಟಕ್ಕೆ ಬೆಂಬಲಿಸಿ ಬರುವಂತೆ ಆಹ್ವಾನ ಕೊಡಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ತಂಡದಲ್ಲಿ ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಮಂಜುನಾಥ ಜಿ. ಗೊಂಡಬಾಳ, ವಕೀಲ ರಾಜು ಬಾಕಳೆ, ಜ್ಯೋತಿ ಎಂ. ಗೊಂಡಬಾಳ, ಕಾವ್ಯ ಪ್ರಸನ್ನ ಗಡಾದ, ಪ್ರಕಾಶಕಿ ಮಾಲಾ ಬಡಿಗೇರ, ಸೌಮ್ಯ ನಾಲ್ವಾಡ, ಸರೋಜಾ ಬಾಕಳೆ, ವಿದ್ಯಾ ನಾಲ್ವಾಡ, ಈಶ್ವರ ಕೊರ್ಲಹಳ್ಳಿ, ನಿವೃತ್ತ ಪ್ರಾಚಾರ್ಯ ಎಸ್.ಬಿ.ರಾಜೂರು, ಪ್ರಕಾಶಕ ಡಿ.ಎಂ. ಬಡಿಗೇರ, ರಂಗ ನಿರ್ದೇಶಕ ಶರಣು ಶೆಟ್ಟರ್, ಕಾಶಪ್ಪ ಚಲುವಾದಿ, ನಿವೃತ್ತ ನ್ಯಾಯಾಂಗ ಅಧಿಕಾರಿ ಜಿ.ಬಿ. ಪಾಟೀಲ ಮುಂತಾದ ಪ್ರಮುಖರು ಇದ್ದರು. ೧೧೪ನೇ ದಿನದ ಧರಣಿಯನ್ನು ಮಹಾದೇವಪ್ಪ ಮಾವಿನಮಾಡು, ಶಿವಪ್ಪ ಜಲ್ಲಿ, ಗಂಗಮ್ಮ ಕೊಡೇಕಲ್, ಗವಿಸಿದ್ದಪ್ಪ ಹಲಿಗಿ, ಸುರೇಶ ಪೂಜಾರ, ಪ್ರಕಾಶ ಹೊಳೆಯಪ್ಪ ಮುಂತಾದವರು ನಡೆಸಿದರು.