ಕನ್ನಡಪ್ರಭ ವಾರ್ತೆ ಹುಣಸೂರು

ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಮತ್ತು ಸಮುದಾಯದ ಸಹಭಾಗಿತ್ವವನ್ನು ಹೆಚ್ಚಿಸುವ ಉದ್ದೇಶದ ಸ್ವಾಸ್ಥ್ಯ ಸ್ವರಾಜ್- ನಮ್ಮ ಆರೋಗ್ಯ, ನಮ್ಮ ಕ್ರಿಯಾಯೋಜನೆ ಅಭಿಯಾನದ ವಿದ್ಯುನ್ಮಾನ ಮಾಹಿತಿ ಫಲಕ ಹಾಗೂ ನನ್ನ ಸ್ವಾಸ್ಥ್ಯ- ನನ್ನ ಆರೋಗ್ಯ ದಿನಚರಿ ಸಮರ್ಪಣಾ ಕಾರ್ಯಕ್ರಮವು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿ ಗ್ರಾಮ್ ಸಂಸ್ಥೆ, ಆರೋಗ್ಯ ಇಲಾಖೆ, ಪಂಚಾಯತ್ ರಾಜ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆಗಾಗಿ ಸುಮಾರು 22,000 ಆರೋಗ್ಯ ದಿನಚರಿಗಳನ್ನು ವಿತರಿಸುವ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

ಸಾರ್ವಜನಿಕರಲ್ಲಿ ಆರೋಗ್ಯ ಅರಿವು ಮೂಡಿಸಲು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಡಿಜಿಟಲ್ ಡಿಸ್‌ ಪ್ಲೇ ಮತ್ತು ಟೂಲ್‌ ಕಿಟ್‌ ಒದಗಿಸಲಾಯಿತು.

ಗ್ರಾಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಬಸವರಾಜ್ ಆರ್. ಶ್ರೇಷ್ಠ ಮಾತನಾಡಿ, ಆರೋಗ್ಯ ಇಲಾಖೆ ಚಿಕಿತ್ಸೆ ನೀಡಿದರೆ, ರೋಗ ತಡೆಗಟ್ಟುವಿಕೆ ಸಮುದಾಯದ ಜವಾಬ್ದಾರಿಯಾಗಿದೆ. ಹುಣಸೂರು ಮತ್ತು ಮಧ್ಯಪ್ರದೇಶದ ವಿದಿಶಾದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿರುವ ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದರು.


ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ್ ಅಸಾಂಕ್ರಾಮಿಕ ರೋಗಗಳ (ಮಧುಮೇಹ, ಕ್ಯಾನ್ಸರ್) ಅಪಾಯದ ಬಗ್ಗೆ ಎಚ್ಚರಿಸಿದರು. ಗ್ರಾಮ ಆರೋಗ್ಯ ಸಮಿತಿಗಳ ಬಲವರ್ಧನೆಯ ಅಗತ್ಯತೆ ಒತ್ತಿ ಹೇಳಿದರು. ಪಂಚಾಯತ್ ರಾಜ್ ಆಯುಕ್ತಾಲಯದ ಉಪ ನಿರ್ದೇಶಕ ಕೃಷ್ಣಕುಮಾರ್ ಅವರು ಇಲಾಖೆಗಳ ನಡುವಿನ ಸಮನ್ವಯವನ್ನು ಶ್ಲಾಘಿಸಿ, ಆರೋಗ್ಯ ಸೂಚ್ಯಂಕಗಳ ಸುಧಾರಣೆಗೆ ಇದು ಪೂರಕ ಎಂದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಹೊಂಗಯ್ಯ, ಟಿಎಚ್‌ಒ ಡಾ. ದರ್ಶನ್, ಸಿಡಿಪಿಒ ಹರೀಶ್ ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಇದ್ದರು.