ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ಸಮಗ್ರ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ

ಮನವಿ ಮಾಡಿದ್ದೇವೆ. ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿಗಳಾಗಿರುವ ಕಾರಣ ಅನುದಾನ ಬಿಡುಗಡೆ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ನಗರದ 27ನೇ ವಾರ್ಡಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಎಲ್ಲಾ ವಾರ್ಡುಗಳಲ್ಲಿ ಮೂಲ ಸೌಕರ್ಯಗಳ ವೃದ್ದಿಯಾಗಬೇಕಾಗಿದೆ. ಇದಕ್ಕಾಗಿ ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ವಿವೇಕಾನಂದನಗರ ವಾರ್ಡ್ (27ನೇ ವಾರ್ಡ್) ದೊಡ್ಡ ಪ್ರದೇಶ. ಇಲ್ಲಿ ರಸ್ತೆ, ಯುಜಿಡಿ ಕಾಮಗಾರಿಗಳು ಇನ್ನು ಆಗಬೇಕಾಗಿದೆ. ಈ ವಾರ್ಡಿಗೆ 100 ಕೋಟಿ ಅನುದಾನವೂ ಸಾಕಾಗುವುದಿಲ್ಲ. ಆದರೆ ನಗರಸಭೆಯ ಹಣಕಾಸಿನ ಇತಿಮಿತಿಯಲ್ಲಿ ಆದ್ಯತೆ ಮೇರೆಗೆ ಕೆಲವು ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಭಾಗದಲ್ಲಿ ರಸ್ತೆ, ಯುಜಿಡಿ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ದಿಯಾಗಬೇಕು ಎಂದು 27ನೇ ವಾರ್ಡಿನ ಸದಸ್ಯೆ ಪವಿತ್ರ ಲಕ್ಷ್ಮೀಕಾಂತ್ ಪದೇ ಪದೇ ಗಮನ ಸೆಳೆದು ಒತ್ತಡ ಹೇರುತ್ತಿದ್ದರು. ವಿವಿಧ ಯೋಜನೆಗಳಡಿಯಲ್ಲಿ 3-4 ಕೋಟಿ ರೂಗಳ ಅಭಿವೃದ್ದಿ ಕಾಮಗಾರಿಗಳು ಜಾರಿಯಲ್ಲಿವೆಯಾದರು, ದೊಡ್ಡದಾಗಿರುವ ಈ ವಾರ್ಡಿಗೆ ಹೆಚ್ಚು ಅನುದಾನ ಬೇಕಾಗಿದೆ. ಹಣಕಾಸಿನ ಕೊರತೆಯಿಂದಾಗಿ ಇಲ್ಲಿ ಕಾಮಾರಿಗಳು ವಿಳಂಬವಾಗಿದೆ. ಹಂತ, ಹಂತವಾಗಿ ಆಧ್ಯತೆ ಮೇರೆಗೆ ಈ ವಾರ್ಡಿನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ನಗರಸಭೆ ಕಟಿ ಬದ್ದವಾಗಿದೆ ಎಂದರು.

ದುರಾದೃಷ್ಟವಶಾತ್ 27ನೇ ವಾರ್ಡಿನಲ್ಲಿ ಅಪ್ರೂವ್ಡ್ ಲೇಔಟ್ ಗಳ ಪ್ರಮಾಣ ಕೇವಲ ಶೇ 25 ಮಾತ್ರ. ಉಳಿದೆಡೆ ರಸ್ತೆ, ಒಳಚರಂಡಿ ವ್ಯವಸ್ಥೆ ಇಲ್ಲದಿದ್ದರೂ ಅನೇಕರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಹಿಂದೆ ಯಾರೋ ಮಾಡಿದ ತಪ್ಪಿಗೆ ಇಂದು ನಾಗರೀಕರನ್ನು ಸಮಸ್ಯೆಗೆ ದೂಡುವುದು ಸರಿಯಲ್ಲ. ನಗರಸಭೆಯ ಹಣಕಾಸಿನ ಪರಿಸ್ಥಿತಿಯನ್ನು ಆಧರಿಸಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ ಎಂದರು.


ಈ ವೇಳೆ ನಗರಸಭಾ ಸದಸ್ಯರಾದ ಪವಿತ್ರ, ಅಜ್ಮತ್ ಉಲ್ಲಾಖಾನ್ , ಆಯಿಷಾ ಬಾನು, ಪಾರ್ವತಮ್ಮ, ಸೋಮಶೇಖರ್, ಮುಖಂಡರಾದ ಗಂಗಾಧರ್ ಗೌಡ, ಪತಿ ಮತ್ತಿತರರು ಹಾಜರಿದ್ದರು.

11ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ 27ನೇ ವಾರ್ಡಿನಲ್ಲಿ ವಿವಿಧ ಕಾಮಗಾರಿಗಳಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಭೂಮಿಪೂಜೆ ನೆರವೇರಿಸಿದರು.