ನಾನು ಮೋದಿ ಎದುರು ಅಲ್ಲ, ಚೌಟ ಎದುರು ಸ್ಪರ್ಧೆ: ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌

| Published : Mar 23 2024, 01:01 AM IST

ನಾನು ಮೋದಿ ಎದುರು ಅಲ್ಲ, ಚೌಟ ಎದುರು ಸ್ಪರ್ಧೆ: ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ರಾಜಕೀಯ ಗುರುಗಳಾದ ಜನಾರ್ದನ ಪೂಜಾರಿಯವರ ಹಾದಿಯಲ್ಲಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಜಕಾರಣ ನಡೆಸುವುದಾಗಿ ಪದ್ಮರಾಜ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

‘ನಾನು ಮೋದಿಯ ಎದುರು ಚುನಾವಣೆಗೆ ನಿಲ್ಲುತ್ತಾ ಇಲ್ಲ, ನಾನು ಬ್ರಿಜೇಶ್ ಚೌಟ ಎದುರು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ, ನಾನು ಮೋದಿಯನ್ನ ಎದುರಿಸುತ್ತಿಲ್ಲ’

ದ.ಕ. ಜಿಲ್ಲೆಯಲ್ಲಿ ಮೋದಿ ಅಲೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಗರಂ ಆಗಿ ಉತ್ತರಿಸಿದ ವಿದ್ಯಮಾನ ಶುಕ್ರವಾರ ನಡೆದಿದೆ.

ಟಿಕೆಟ್‌ ಘೋಷಣೆ ಬಳಿಕ ದೆಹಲಿಯಿಂದ ಮಂಗಳೂರಿಗೆ ಆಗಮಿಸಿದ ಅವರನ್ನು ಸುದ್ದಿಗಾರರು ಮಾತನಾಡಿಸಿದರು. ಮೋದಿ ಅಲೆ ಎದುರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ವರ್ಕ್ ಔಟ್ ಆಗುತ್ತಾ ಎಂಬ ಪ್ರಶ್ನೆಗೆ ಪದ್ಮರಾಜ್‌ ಗರಂ ಆಗಿಯೇ ಉತ್ತರಿಸಿದರು.

ನಾವು ಇಂತಹ ಜಾತಿಯಲ್ಲೇ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿದ್ದಲ್ಲ. ನಮ್ಮ ಜಾತಿ ಧರ್ಮದೊಂದಿಗೆ ಇನ್ನೊಂದು ಧರ್ಮಕ್ಕೆ ಗೌರವ ನೀಡುವುದು ಅದು ಮಾನವ ಧರ್ಮ. ಇಲ್ಲಿ 40 ವರ್ಷಗಳಿಂದ ಸಾಕಷ್ಟು ಸಾಧನೆ ಮಾಡಿದ್ದಾರೆ. 1991 ರಿಂದ ಬಿಜೆಪಿ ಸಂಸದರು ಇದ್ದರೂ ಎದೆ ತಟ್ಟಿ ಹೇಳುವ ಯಾವುದೇ ಸಾಧನೆ ಮಾಡಿಲ್ಲ. ಪ್ರತಿ ಬಾರಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ಇದರಿಂದ ನಿಮ್ಮವರಿಂದ ಕೆಲಸ ಮಾಡಲು ಆಗುತ್ತಿಲ್ಲ ಎಂಬುದು ಗೊತ್ತಾಗುತ್ತದೆ. ಅಭ್ಯರ್ಥಿ ಬದಲಾವಣೆ ಮಾಡಿದರೆ ಸಾಲದು, ಅಭಿವೃದ್ಧಿ ಕೆಲಸ ಕೂಡ ಮಾಡಬೇಕು. ಬಿಜೆಪಿಯವರು ಭಾವನಾತ್ಮಕವಾಗಿ ಜನರನ್ನು ಯಾಮಾರಿಸುತ್ತಿದ್ದಾರೆ. ಅಭಿವೃದ್ಧಿ ವಿಚಾರಗಳನ್ನು ಇರಿಸಿಕೊಂಡು ರಾಜಕೀಯ ಮಾಡಬೇಕು ಎಂದರು.

ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಪದ್ಮರಾಜ್ ಅವರನ್ನು ವಿಮಾನ ನಿಲ್ದಾಣದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರು ಸಂಭ್ರಮದಿಂದ ಬರಮಾಡಿಕೊಂಡರು.

ಬಳಿಕ ಪದ್ಮರಾಜ್‌ ಅವರು ಆಧುನಿಕ ಮಂಗಳೂರು ಶಿಲ್ಪಿ ಉಳ್ಳಾಲ ಶ್ರೀನಿವಾಸ್ ಮಲ್ಯರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. ಕದ್ರಿಯ ವೀರ ಯೋಧರ ಸ್ಮಾರಕ್ಕೆ ತೆರಳಿ ದೇಶಕ್ಕಾಗಿ ಮಡಿದ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಬಳಿಕ ಎಂ.ಜಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರಾಷ್ಟ್ರಪಿತ, ಮಂಗಳೂರು ಪುರಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಗೌರವ, ಬಾವುಟಗುಡ್ಡೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ನಮನ ಸಲ್ಲಿಸಿ, ಟಾಗೋರ್ ಪಾರ್ಕ್‌ನಲ್ಲಿ ರವೀಂದ್ರನಾಥ ಟಾಗೋರ್ ಪ್ರತಿಮೆಗೆ ನಮನ ಸಲ್ಲಿಸಿದರು.ಪೂಜಾರಿ ಹಾದಿಯಲ್ಲಿ ಮುನ್ನಡೆಯುತ್ತೇನೆ:

ಈ ವೇಳೆ ಸುದ್ದಿಗಾರರಲ್ಲಿ ಮಾತನಾಡಿದ ಅವರು, ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಹೈಕಮಾಂಡ್ ನಾಯಕರಿಗೆ ಮತ್ತು ತನ್ನನ್ನು ಬೆಂಬಲಿಸಿದ ರಾಜ್ಯ ನಾಯಕರು ಮತ್ತು ಜಿಲ್ಲಾ ನಾಯಕರಿಗೆ ಧನ್ಯವಾದ ಸಲ್ಲಿಸಿದರು. ತನ್ನ ರಾಜಕೀಯ ಗುರುಗಳಾದ ಜನಾರ್ದನ ಪೂಜಾರಿಯವರ ಹಾದಿಯಲ್ಲಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಜಕಾರಣ ನಡೆಸುವುದಾಗಿ ತಿಳಿಸಿದರು. ತುಳುನಾಡಿನ ಸಮಗ್ರ ಅಭಿವೃದ್ಧಿ ಜತೆಗೆ ಸೌಹಾರ್ದ ಪರಂಪರೆಯನ್ನು ಮರಳಿ ಕಟ್ಟುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಗತವೈಭವ ಮರುಕಳಿಸುವಂತೆ ಮಾಡುವುದು ನನ್ನ ಉದ್ದೇಶ ಎಂದು ಅವರು ತಿಳಿಸಿದರು.ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ, ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ, ಮಾಜಿ ಸಚಿವ ಅಭಯಚಂದ್ರ ಜೈನ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಶ್ರೀ ನಾರಾಯಣ ಗುರು ಸಂಘ ಬೆಳ್ತಂಗಡಿ ಮಾಜಿ ಅಧ್ಯಕ್ಷ ಜಯರಾಮ ಬಂಗೇರ ಮತ್ತಿತರರಿದ್ದರು.