ನನ್ನ ಮಾತಿಂದ ನೋವಾಗಿದ್ದರೆ ವಿಷಾದಿಸುವೆ: ಶಾಸಕ ರಮೇಶ್‌ ಬಂಡಿಸಿದ್ದೇಗೌಡ

| Published : Apr 01 2024, 12:45 AM IST

ನನ್ನ ಮಾತಿಂದ ನೋವಾಗಿದ್ದರೆ ವಿಷಾದಿಸುವೆ: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ದೇವೇಗೌಡರ ಕುಟುಂಬದ ಬಗೆಯಾಗಲಿ, ಕುಮಾರಣ್ಣನ ಬಗೆಯಾಗಲಿ ರಾಜಕೀಯದಲ್ಲಾಗಲಿ ವೈಯಕ್ತಿಕವಾಗಿಯಾಗಲಿ ನಾನು ಮಾತಾಡಿಲ್ಲ. ಇಷ್ಟು ವರ್ಷ ರಾಜಕಾರಣ ಮಾಡಿ, ಅವರ ಜೊತೆಯಲ್ಲೇ ಇದ್ದುದ್ದರಿಂದ ನಾನು ಅವರ ಆರೋಗ್ಯದ ಬಗೆಗಿನ ಕಾಳಜಿಯಿಂದ ಮಾತಾಡಿದ್ದೀನಿ. ನಾನು ಅವರಿಗೆ ಆಪರೇಷನ್ ಆಗಿರೋದು ಅನುಮಾನ ಎಂದು ಹೇಳಿದ್ದೇನಾ ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಾನು ಯಾವುದೇ ದುರುದ್ದೇಶ ಅಥವಾ ದ್ವೇಷದಿಂದ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಮಾತನಾಡಿಲ್ಲ. ಅವರ ಆರೋಗ್ಯದ ಬಗೆಗಿನ ಕಾಳಜಿಯಿಂದ ಹಾಗೆ ಮಾತನಾಡಿದ್ದೇನೆ. ನನ್ನ ಮಾತಿನಿಂದ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ನಾನು‌ ಅವರಿಗಿಂತ ದೊಡ್ಡವನಲ್ಲ, ಅವರ ಆರೋಗ್ಯದ ಬಗೆಗಿನ ಕಾಳಜಿಯಿಂದ ಹಾಗೆ ಮಾತಾಡಿದ್ದೀನಿ. ದುರುದ್ದೇಶಪೂರಕವಾಗಿ ಮಾತಾಡಿಲ್ಲ. ಹಾಗಾಗಿ ನಾನು ವಿಷಾದಿಸುತ್ತೇನೆ. ಕ್ಷಮೆ ಕೇಳುವಂತಹ ಮಾತುಗಳನ್ನು ನಾನೇನೂ ಆಡಿಲ್ಲ. ಈ ವಿಚಾರ ಇಲ್ಲಿಗೇ ಮುಗಿಯಲಿ ಎನ್ನುವುದು ನನ್ನ ಅನಿಸಿಕೆ‌ ಎಂದು ಶ್ರೀರಂಗಪಟ್ಟಣ ತಾಲೂಕು ಅರಕೆರೆ ಗ್ರಾಮದಲಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ನಾನು ದೇವೇಗೌಡರ ಕುಟುಂಬದ ಬಗೆಯಾಗಲಿ, ಕುಮಾರಣ್ಣನ ಬಗೆಯಾಗಲಿ ರಾಜಕೀಯದಲ್ಲಾಗಲಿ ವೈಯಕ್ತಿಕವಾಗಿಯಾಗಲಿ ನಾನು ಮಾತಾಡಿಲ್ಲ. ಇಷ್ಟು ವರ್ಷ ರಾಜಕಾರಣ ಮಾಡಿ, ಅವರ ಜೊತೆಯಲ್ಲೇ ಇದ್ದುದ್ದರಿಂದ ನಾನು ಅವರ ಆರೋಗ್ಯದ ಬಗೆಗಿನ ಕಾಳಜಿಯಿಂದ ಮಾತಾಡಿದ್ದೀನಿ. ನಾನು ಅವರಿಗೆ ಆಪರೇಷನ್ ಆಗಿರೋದು ಅನುಮಾನ ಎಂದು ಹೇಳಿದ್ದೇನಾ ಎಂದು ಪ್ರಶ್ನಿಸಿದರು.

ಎಚ್ಡಿಕೆ ಆರೋಗ್ಯದ ಬಗ್ಗೆ ಲಘು ಹೇಳಿಕೆ ರಮೇಶ ಬಂಡಿಸಿದ್ದೇಗೌಡ ಮನಸ್ಥಿತಿ ತೋರಿತ್ತದೆ

ಶ್ರೀರಂಗಪಟ್ಟಣ:

ಕ್ಷೇತ್ರದಲ್ಲಿ ಒಂದೇ ಕುಟುಂಬಕ್ಕೆ 40 ವರ್ಷಗಳ ಅಧಿಕಾರ ನೀಡಿ ಆಸರೆಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಲಘುವಾಗಿ ಮಾತನಾಡಿ ಶಾಸಕ ರಮೇಶ ಬಂಡಿಸಿದ್ದೇಗೌಡ ತಮ್ಮ ಮನಸ್ಥಿತಿ ಏನೆಂಬುದನ್ನು ತೋರಿಸಿದ್ದಾರೆ ಎಂದು ಎಚ್.ಡಿ.ಕೆ. ಗ್ರೂಪ್ ಅಧ್ಯಕ್ಷ ಕಿರಂಗೂರು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರೋ ಒಬ್ಬರನ್ನು ಮೆಚ್ಚಿಸಲು ನಿಮ್ಮ ಕುಟುಂಬಕ್ಕೆ ರಾಜಕೀಯ ಅಧಿಕಾರ ನೀಡಿ ಭವಿಷ್ಯ ಉಜ್ವಲಗೊಳಿಸಿದವರ ಬಗ್ಗೆ ಈ ರೀತಿ ಮಾತನಾಡುವುದು ನಿಮಗೆ ಶೋಭೆಯಲ್ಲ ಎಂದು ಕಿಡಿಕಾರಿದರು.ಭೂಮಿ ಮೇಲೆ ಹುಟ್ಟಿದ್ದ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲಾ ಒಂದು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಆದರೆ, ಇದು ನಿಮಗೆ ತಿಳಿದಿದ್ದರೂ ರಾಜಕೀಯವಾಗಿ ಶಕ್ತಿ ತುಂಬಿದ ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಕುರಿತು ಮಾತನಾಡಿರುವುದು ಸರಿಯಲ್ಲ ಎಂದು ಶಾಸಕರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಕೂಡಲೇ ನಿಮ್ಮ ಹೇಳಿಕೆಗೆ ಮಾಜಿ ಸಿಎಂ ಎಚ್ಡಿಕೆ ಅವರಲ್ಲಿ ಬಹಿರಂಗವಾಗಿ ಕ್ಷಮೆ ಕೋರಬೇಕು. ಇಲ್ಲದಿದ್ದಲ್ಲಿ ಜಿಲ್ಲಾ ಹಾಗೂ ತಾಲೂಕು ಹಾಗೂ ರಾಜ್ಯಾದ್ಯಂತ ಹೆಚ್.ಡಿ.ಕೆ ಅಭಿಮಾನಿಗಳು ನಿಮ್ಮ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕುಮಾರ, ಗಂಜಾಂ ಯೋಗಣ್ಣ, ಜಗದೀಶ, ರಮೇಶ್ ಸೇರಿದಂತೆ ಇತರರು ಇದ್ದರು.