ಸರ್ಕಾರಿ ನೌಕರರು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಲಿ: ಡಾ. ರಂಗಪ್ಪ

| Published : Apr 01 2024, 12:45 AM IST

ಸಾರಾಂಶ

ತಮ್ಮ ಸೇವಾವಧಿಯಲ್ಲಿ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಮೂಲಕ ಯೋಜನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ನೌಕರರ ಆದ್ಯ ಕರ್ತವ್ಯ.

ಕನ್ನಡಪ್ರಭ ವಾರ್ತೆ ಶಿರಾ

ಸರ್ಕಾರಿ ಸೇವೆಗೆ ಸೇರಿದ ಮೇಲೆ ನಿವೃತ್ತಿ ಎಂಬುದು ಕಡ್ಡಾಯ, ಆದರೆ ನೌಕರರು ತಮ್ಮ ಸೇವಾವಧಿಯಲ್ಲಿ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಮೂಲಕ ಯೋಜನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ನೌಕರರ ಆದ್ಯ ಕರ್ತವ್ಯ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಟಿ ರಂಗಪ್ಪ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದು, ಶನಿವಾರ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಯು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಂಶುಪಾಲರಾಗಿ ನೇಮಕವಾದ ಮೇಲೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಉನ್ನತೀಕರಿಸಲು ಶ್ರಮಿಸಿದ್ದೇನೆ, ಇದಕ್ಕೆ ಕಾಲೇಜಿನ ಎಲ್ಲ ಬೋಧಕ , ಬೋಧಕೇತರ ಸಿಬ್ಬಂದಿ ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದರು.

ವಾಣಿಜ್ಯ, ಸ್ನಾತಕೋತ್ತರ ತರಗತಿಗಳನ್ನು ನಡೆಸುವುದು ಕಷ್ಟವಾದರೂ ಸಹ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ನನ್ನ ಅವಧಿಯಲ್ಲಿ ಕಾಲೇಜು ಎರಡು ಬಾರಿ ನ್ಯಾಕ್ ಪ್ರಕ್ರಿಯೆಗೆ ಒಳಗಾಗಿ ಉತ್ತಮ ಅಂಕಗಳನ್ನು ಪಡೆದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ವತಿಯಿಂದ ಸಿಗುವ ಸೌಲಭ್ಯಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದರು. ನಾಲ್ಕು ವರ್ಷಗಳ ಪ್ರಾಂಶುಪಾಲರ ಅವಧಿಯಲ್ಲಿ ಉತ್ತಮ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟ ಶಾಸಕರು ಮತ್ತು ಸಂಸದರಿಗೆ ಧನ್ಯವಾದ ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಆರ್.ಕೆ. ರಮೇಶ್ ಬಾಬು, ನಿವೃತ್ತ ಪ್ರಾಂಶುಪಾಲರು ಡಾ. ವೇಣುಗೋಪಾಲ್, ಪ್ರೊ. ಗಂಗಣ್ಣ, ತುರುವೇಕರೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಪ್ರೊ. ಎಂ.ಟಿ. ಈಶ್ವರಪ್ಪ, ಪತ್ರಾಂಕಿತ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ, ನರೇಂದ್ರಬಾಬು, ನಿಯೋಜಿತ ಪ್ರಾಂಶುಪಾಲ ಡಾ. ಬಿ.ಎನ್ ನಾಗಭೂಷಣಯ್ಯ, ಡಾ. ಗಿರೀಶ್ ಡಿ., ಮಂಜುಳಾ ಎಸ್ ಟಿ ರಂಗಪ್ಪ, ಗಂಗಾಧರ್, ತಿಮ್ಮರಾಜು ಯಾದವ್ ಸೇರಿ ಹಲವರು ಹಾಜರಿದ್ದರು.