- ರಾಜಕೀಯದಲ್ಲಿ ಸಚಿವ ಸ್ಥಾನಕ್ಕೆ ಯಾವುದೇ ನಿರ್ದಿಷ್ಟ ಮಾನದಂಡ ಇಲ್ಲ ।

- ಹೆಬ್ಬೆಟ್ಟು ಒತ್ತುವವರೂ ಇಲ್ಲಿ ಮಂತ್ರಿಯಾಗಬಹುದು ಎಂದ ಶಾಸಕ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಚಿವ ಆಗಬೇಕೆಂಬ ಆಸೆ ನಮಗೂ ಇದ್ದೇ ಇದೆ. ಆದರೆ, ದುರಾಸೆಯಂತೂ ಇಲ್ಲ. ನಾನು ಸಚಿವ ಸ್ಥಾನವನ್ನು ಕೇಳಲು ಹೋಗಿಲ್ಲ, ಒಂದುವೇಳೆ ಕೊಟ್ಟರೆ ಖಂಡಿತ ಬಿಡುವುದಿಲ್ಲ ಎಂದು ಹೊನ್ನಾಳಿ ಕ್ಷೇತ್ರ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.


ನಗರದಲ್ಲಿ ಸೋಮವಾರ ಸಂಪುಟ ವಿಸ್ತರಣೆ ಮತ್ತು ಉಸ್ತುವಾರಿ ಸಚಿವರ ನೇಮಕದ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಳಿದ ತಕ್ಷಣ ಸಚಿವ ಸ್ಥಾನವನ್ನು ನೀಡಲು ಸಾಧ್ಯವಿಲ್ಲ. ಇದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷವಾಗಿದ್ದು, ಯಾವುದೇ ಒತ್ತಡಗಳಿಗೆ ಮನ್ನಣೆ ಸಿಗುವುದಲ್ಲ ಎಂದರು.

ರಾಜ್ಯದ 32 ಜಿಲ್ಲೆಗಳು, ಎಲ್ಲಾ ಕುಲ ಜಾತಿಗಳನ್ನೂ ಸಮಾನವಾಗಿ ಕಾಣುವುದೆಂದರೆ ಸುಲಭದ ಮಾತಲ್ಲ. ಸಾಮಾಜಿಕ ನ್ಯಾಯವೇನಾದರೂ ಉಳಿದಿದರೆ ಅದು ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಹಾಗಾಗಿ, ನನಗೂ ಸಚಿವನಾಗ ಆಸೆ ಇದೆ. ಆದರೆ, ದುರಾಸೆ ಇಲ್ಲ. ಅವಕಾಶ ಸಿಕ್ಕರೆ ಖಂಡಿತ ಬಿಡುವುದಿಲ್ಲ ಎಂದು ಅವರು ತಿಳಿಸಿದರು.

ಸದ್ಯ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ಜಿಲ್ಲೆಗಳನ್ನು ನೋಡಿಕೊಳ್ಳಲೆಂದು ಇರುವ 12 ಸಚಿವರಲ್ಲೇ ಉಸ್ತುವಾರಿಯನ್ನು ಹಂಚಿಕೆ ಮಾಡಲಾಗಿದೆ. ಯಾರಿಗೂ ಕೇಳದೆಯೇ ಉಸ್ತುವಾರಿಗಳನ್ನು ಮಾಡಿಲ್ಲ. ಇನ್ನು ರಾಜಕೀಯದಲ್ಲಿ ಸಚಿವ ಸ್ಥಾನಕ್ಕೆ ಯಾವುದೇ ನಿರ್ದಿಷ್ಟ ಮಾನದಂಡ ಇಲ್ಲ. ಹೆಬ್ಬೆಟ್ಟು ಒತ್ತುವವರೂ ಇಲ್ಲಿ ಮಂತ್ರಿಯಾಗಬಹುದು ಎಂದು ಅವರು ಹೇಳಿದರು.

ಸಚಿವ ಸಂಪುಟ ಪುನಃ ರಚಿಸುವಂತೆ ನಾವು 30 ಶಾಸಕರು ದೆಹಲಿಗೆ ಹೋಗಿದ್ದು ನಿಜ. ಆದರೆ, ಅಲ್ಲಿ ನಾವು ಪಕ್ಷದಲ್ಲಿನ ಗೊಂದಲ ಬಗೆಹರಿಸುವಂತೆ ಕೇಳಿದ್ದೇವೆಯೇ ಹೊರತು, ಮಂತ್ರಿ ಸ್ಥಾನವನ್ನು ಕೊಡುವಂತೆ ವರಿಷ್ಠರಿಗೆ ನಾವ್ಯಾರೂ ಕೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ದಾವಣಗೆರೆ ಜಿಲ್ಲೆಯ ನಾನೂ ಸೇರಿದಂತೆ ನಾಲ್ವರು ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು, ಶುಭ ಕೋರುವುದಕ್ಕೆ ಮಾತ್ರ. ಶೀಘ್ರವೇ ನಿಗಮ ಮಂಡಳಿಗಳಲ್ಲೂ ಬದಲಾವಣೆ ಮಾಡಲಿದ್ದಾರೆ. ನಾನು ಕೇಳದಿದ್ದರೂ ನನಗೆ ಸ್ಥಾನ ನೀಡುತ್ತಾರೆ ಎಂದು ಡಿ.ಜಿ.ಶಾಂತನಗೌಡ ವಿಶ್ವಾಸ ವ್ಯಕ್ತಪಡಿಸಿದರು.

- - -

(ಫೋಟೋ: ಡಿ.ಜಿ.ಶಾಂತನಗೌಡ)