- ಸಂಘ ಯಾವುದೇ ಕುಟುಂಬಗಳ ಆಸ್ತಿಯಲ್ಲ, ಅಪಪ್ರಚಾರ ಸಹಿಸಲ್ಲ: ಎಲ್.ಎಂ.ಹನುಮಂತಪ್ಪ, ಬಿ.ಎಚ್.ವೀರಭದ್ರಪ್ಪ ಎಚ್ಚರಿಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘ ಯಾವುದೇ ಕುಟುಂಬಗಳಿಗೆ ಸೀಮಿತವಾಗಿರದೇ ಜಿಲ್ಲೆಯ ಮಾದಿಗ ಸಮುದಾಯ ಆಸ್ತಿಯಾಗಿದೆ. ಇಂತಹ ಸಂಸ್ಥೆಯ ತೇಜೋವಧೆಗೆ ಕೆಲವರು ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದು ಸಂಸ್ಥೆ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಚ್. ವೀರಭದ್ರಪ್ಪ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಸ್ವಯಂಘೋಷಿತ, ಸ್ವಹಿತಾಸಕ್ತಿಯುಳ್ಳ ಕೆಲ ಮುಖಂಡರು ಎನಿಸಿದವರು ಸಂಘದ ವಿರುದ್ಧ ಯಾವುದೇ ಆಧಾರಗಳಿಲ್ಲದೇ ಆರೋಪ, ಅಪಪ್ರಚಾರ ಮಾಡಿದ್ದು ಸರಿಯಲ್ಲ. ಹಸಿಹಸಿ ಸುಳ್ಳು ಹೇಳಿ ಸಮಾಜದ ಆಸ್ತಿಯಾದ ಸಂಘದ ತೇಜೋವಧೆಯೂ ಸಲ್ಲದು ಎಂದರು.

ಮಹಾತ್ಮ ಗಾಂಧೀಜಿ 1934ರಲ್ಲಿ ಪಾದಸ್ಪರ್ಶ ಮಾಡಿ, ಕೊಟ್ಟ ಜಾಗ ಇದು. ಇಲ್ಲಿ ಹರಿಜನ ಹಾಸ್ಟೆಲ್‌ಗೆ ಭದ್ರ ಬುನಾದಿ ಹಾಕಿದ ಅನೇಕ ಮಹನೀಯರು ಸಂಘ ಸ್ಥಾಪಿಸಿದರು. ಸಂಘದಡಿ ಶಾಲೆ- ಹಾಸ್ಟೆಲ್ ಸ್ಥಾಪಿಸಿ, ಶೈಕ್ಷಣಿಕ ಚಟುವಟಿಕೆ ನಡೆಸಿಕೊಂಡು ಬಂದಿದ್ದಾರೆ. ಸಂಘದಲ್ಲಿ 201 ಸಕ್ರಿಯ ಸದಸ್ಯರಿದ್ದು, ನಗರ, ಗ್ರಾಮೀಣ, ಪಟ್ಟಣ ಪ್ರದೇಶ ಸೇರಿದಂತೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 200ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಸಾರ್ವಜನಿಕವಾಗಿ, ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಮೂಲಕ ಸದಸ್ಯತ್ವ ನೀಡಿದ್ದೇವೆಯೇ ಹೊರತು, ಸಂಘವು ಯಾವುದೇ ಕುಟುಂಬಗಳಿಗೆ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿದರು.


ಸಂಘದ ಸಾಮಾನ್ಯ ಸಭೆಯಲ್ಲಿ ಬೈಲಾ ಪ್ರಕಾರ ಸದಸ್ಯತ್ವ ಶುಲ್ಕ ವರ್ಷಕ್ಕೆ ₹1 ಸಾವಿರ, ಆಜೀವ ಸದಸ್ಯತ್ವಕ್ಕೆ ₹5 ಸಾವಿರಗಳನ್ನು ಪಡೆಯಲಾಗಿದೆ. ಸಂಸ್ಥೆಯ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗುವಂತೆ ಯಾವುದೇ ಕಟ್ಟಡ ನಿರ್ಮಿಸಿಲ್ಲ. ಶಾಲೆ ಕಟ್ಟಡ ನಿರ್ಮಿಸುವಾಗಲೇ ರಸ್ತೆ ಬದಿ 20 ಅಡಿ ಜಾಗ ಬಿಟ್ಟು, ಶಾಲಾ ಕಟ್ಟಡ ಕಾಮಗಾರಿ ಮಾಡಿದ್ದಾರೆ. ಆ ಉಳಿದ ಜಾಗದಲ್ಲಿ ಕಸ ಎಸೆಯುವುದು, ವಾಹನ ನಿಲುಗಡೆ, ಆಟೋ ನಿಲುಗಡೆಗೆ ಬಳಕೆಯಾಗುತ್ತಿತ್ತು. ಅಲ್ಲಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಿ, ಕೆಳಭಾಗದಲ್ಲಿ ಮಳಿಗೆ, ಮೇಲ್ಬಾಗದಲ್ಲಿ ಹಾಸ್ಟೆಲ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಬಿಲ್ಡಿಂಗ್ ಲೈಸೆನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನನ್ನು ಸಂಘ ಉಲ್ಲಂಘಿಸಿಲ್ಲ. 1974-75ರಲ್ಲಿ ಸಂಘ ಸ್ಥಾಪನೆ ಆದಾಗಿನಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಯಾವುದೇ ಅನುದಾನ ಬಂದಿಲ್ಲ. ಕಳೆದ ವರ್ಷ ದಿವಂಗತ ಶಾಮನೂರು ಶಿವಶಂಕರಪ್ಪ ನಮ್ಮ ಸಂಘದ ಮನವಿಗೆ ಸ್ಪಂದಿಸಿ, 5 ದಶಕಗಳ ನಂತರ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ₹1 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು. ಈ ಪೈಕಿ ₹25 ಲಕ್ಷದಂತೆ 2 ಕಂತಿನಲ್ಲಿ ಒಟ್ಟು ₹50 ಲಕ್ಷ ಬಂದಿದೆ. ಹಾಸ್ಟೆಲ್ ಕೊಠಡಿ, ಭೋಜನಾಲಯಕ್ಕೆ ಇನ್ನೂ ಬಾಕಿ ₹50 ಲಕ್ಷ ಬಾರದ್ದರಿಂದ ಕೆಲಸ ನಿಲ್ಲಬಾರದೆಂದು, ಎಸ್‌ಬಿಐ ಹಾಗೂ ಇತರೆ ಬ್ಯಾಂಕ್‌ಗಳಲ್ಲಿ ₹81 ಲಕ್ಷ ಸಾಲ ಪಡೆದಿದ್ದೇವೆ ಎಂದು ಹೇಳಿದರು.

ಜಿಪಂ ಎಂಜಿನಿಯರ್‌ಗಳೇ ಅಂದಾಜಿಸಿದಂತೆ ಹೆಚ್ಚು ಕಡಿಮೆ ₹2 ಕೋಟಿ ಕೆಲಸವಾಗಿದೆ. ಗಾಂಧೀಜಿ ಕಾಲಿಟ್ಟ ಜಾಗವೆಂಬ ಕಾರಣಕ್ಕೆ ತೆರಿಗೆ ವಿನಾಯಿತಿ ಇದೆ. ಸರ್ಕಾರಿ ಅನುದಾನ ಆಗಿದ್ದರಿಂದ ಹಳೆ ಕಟ್ಟಡದ ಜಾಗದಲ್ಲಿ ಹೆಚ್ಚುವರಿ ಕೊಠಡಿಗಳ ಕಾಮಗಾರಿ ಮಾಡಿದ್ದೇವೆ. ಉಳಿದಂತೆ ಪಾಲಿಕೆ ಆದೇಶಕ್ಕೆ ಸಂಘ ಬದ್ಧವಿದೆ. ಡಾ. ಬಿ.ಎಂ. ತಿಪ್ಪೇಸ್ವಾಮಿ ಪ್ರೌಢಶಾಲೆ, ಎಂಜಿಎಂಆರ್‌ ಪ್ರೈಮರಿ ಶಾಲೆಯಲ್ಲಿ ಒಟ್ಟು 199 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಒಟ್ಟು 4 ಕೋರ್ಸ್‌ಗೆ 89 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪಿಯುಸಿನಲ್ಲಿ 48 ವಿದ್ಯಾರ್ಥಿಗಳಿದ್ದಾರೆ. ಸಂಘದ ಕ್ಯಾಂಪಸ್‌ನಲ್ಲಿ ಒಟ್ಟು 336ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 2 ವರ್ಷದಿಂದ ಸಂಘದ ವಿರುದ್ಧದ ಅಪಪ್ರಚಾರದಿಂದ ದಾಖಲಾತಿ ಕುಸಿತವಾಗಿದೆ ಎಂದು ದೂರಿದರು.

ಹೈಕೋರ್ಟ್ ಆದೇಶದಂತೆ ಡಿಸ್ಟ್ರಿಕ್ಟ್‌ ರಿಜಿಸ್ಟರ್ ನೇತೃತ್ವದಲ್ಲಿ ಆಡಳಿತ ಮಂಡಳಿ ಚುನಾವಣೆ ನಡೆದಿದ್ದು, ತಮ್ಮ ಸಮಿತಿ ಬಂದಿದೆ. 2010 ರಿಂದ 2026 ರವರೆಗೆ ಎಷ್ಟು ಆದಾಯ, ಖರ್ಚು ಎಂಬ ಬಗ್ಗೆ ಆಡಿಟ್ ಆಗಿದೆ. ಇದನ್ನು ಡಿಆರ್ ಕಚೇರಿಗೂ ನೀಡಲಾಗಿದೆ. ಸಂಸ್ಥೆಯ ಶಿಕ್ಷಕರಿಗೆ ವೇತನ, ಹಾಸ್ಟೆಲ್ ಬಿಲ್ ಬಿಟ್ಟರೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಪಾಲಿಕೆಯಿಂದ ಬಂದಿರುವುದು ಸುಣ್ಣ-ಬಣ್ಣ, ಲೈಟ್ ದುರಸ್ತಿಗೆ ಕೋಟಿ ಕೋಟಿಗಟ್ಟಲೇ ಹೇಗೆ ಖರ್ಚಾಗುತ್ತದೆ ಎಂದು ಸಮಾಜದ ಆಲೂರು ನಿಂಗರಾಜ, ಎಂ.ಹಾಲೇಶ, ಚೇತನ್ ಕನ್ನಡಿಗ, ದುಗ್ಗಪ್ಪ, ಉದಯಕುಮಾರ ಇತರರ ಆರೋಪಕ್ಕೆ ಅವರು ಪ್ರಶ್ನಿಸಿದರು.

ಸಂಸ್ಥೆ ಬೆಳವಣಿಗೆ, ಏಳಿಗೆ ಸಹಿಸದ ಕೆಲವರು ಕೋಟಿಗಟ್ಟಲೇ ದುರುಪಯೋಗ ಆಗಿದೆಯೆಂಬ ಆರೋಪ ಮಾಡುತ್ತಿದ್ದಾರೆ. ತಮ್ಮ ವೈಯಕ್ತಿತ ಹಿತಾಸಕ್ತಿಗಾಗಿ ಸಮಾಜವನ್ನು ವಿಭಜನೆ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಆಡಳಿತ ಮಂಡಳಿ ಬದಲಾಗುತ್ತಿರುತ್ತವೆ. ಆದರೆ, ಸಂಘ ಯಾವಾಗಲೂ ಶಾಶ್ವತ. ಸಂಘವನ್ನು ಮಾರಾಟ ಮಾಡಿಲ್ಲ. ಸಂಘದ ಹೆಸರಿನಲ್ಲಿ ಯಾವುದೇ ಮೋಸ, ವಂಚನೆ ಮಾಡಿಲ್ಲ. ಸಂಘದ ಅಭಿವೃದ್ಧಿ, ಏಳಿಗೆ ಸಹಿಸದೇ ಸಂಘಕ್ಕೆ ಕಪ್ಪುಮಸಿ ಬಳಿಯುವ ಪ್ರಯತ್ನ ನಡೆಸಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಲ್.ಎಂ. ಹನುಮಂತಪ್ಪ, ಬಿ.ಎಚ್.ವೀರಭದ್ರಪ್ಪ ಎಚ್ಚರಿಸಿದರು.

ಸಂಘದ ಜಂಟಿ ಕಾರ್ಯದರ್ಶಿ ಪೇಪರ್ ಕೆ.ಚಂದ್ರಣ್ಣ, ಉಪಾಧ್ಯಕ್ಷ ಬಿ.ಎಂ. ರಾಮಸ್ವಾಮಿ, ನಿರ್ದೇಶಕರಾದ ವಕೀಲ ಹಲಗೇರಿ ಮಂಜಪ್ಪ, ಆದಾಪುರ ನಾಗರಾಜ, ಮಲ್ಲೇಶ, ರಂಗನಾಥ ಸ್ವಾಮಿ, ಜಗಳೂರು ಶೇಖರಪ್ಪ, ಚನ್ನಗಿರಿ ಶೇಖರಪ್ಪ, ಮಂಜಪ್ಪ ಚನ್ನಗಿರಿ, ರುದ್ರಪ್ಪ, ಮಂಜಣ್ಣ ಹೊನ್ನಾಳಿ, ಹರಿಹರ ಶಿವರಾಂ, ದೇವೇಂದ್ರಪ್ಪ, ಸಂತೋಷ, ಎಲ್.ಎಂ.ಎಚ್. ಸಾಗರ್, ಜಿ.ರಾಕೇಶ ಗಾಂಧಿ ನಗರ, ಮಂಜುನಾಥ ಇತರರು ಇದ್ದರು.

- - -

(ಕೋಟ್‌) ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಜು.1ರಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ತೆರಳಿ, ಮನವಿ ಅರ್ಪಿಸಲಾಗುವುದು. ಸಂಘದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರನ್ನು ಗಡೀಪಾರು ಮಾಡುವಂತೆ ಒತ್ತಾಯಿಸಲಾಗುವುದು. - ಬಿ.ಎಚ್.ವೀರಭದ್ರಪ್ಪ, ಕಾರ್ಯದರ್ಶಿ, ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘ.

- - -

-29ಕೆಡಿವಿಜಿ1, 2: ಅಧ್ಯಕ್ಷ ಎಲ್.ಎಂ.ಹನುಮಂತಪ್ಪ, ಕಾರ್ಯದರ್ಶಿ ಬಿ.ಎಚ್.ವೀರಭದ್ರಪ್ಪ ಮಾತನಾಡಿದರು.