ಮೋದಿ ಹೇಳಿದ್ದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ - ಸಿಎಂ ಸಿದ್ದರಾಮಯ್ಯ ನೇರ ಸವಾಲು

| Published : Nov 11 2024, 01:07 AM IST / Updated: Nov 11 2024, 12:39 PM IST

ಮೋದಿ ಹೇಳಿದ್ದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ - ಸಿಎಂ ಸಿದ್ದರಾಮಯ್ಯ ನೇರ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಅಬಕಾರಿ ಇಲಾಖೆಯಿಂದ ₹ 700 ಕೋಟಿ ತಂದು ಮಹಾರಾಷ್ಟ್ರದಲ್ಲಿ ಚುನಾವಣೆ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯವರು ನಮ್ಮ ಮೇಲೆ ಹೊಸ ಸುಳ್ಳಿನ ಆರೋಪ ಮಾಡಿದ್ದಾರೆ. ಮೋದಿ ಅವರು ಹೇಳಿದ್ದು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸ್ತೀನಿ - ಸಿಎಂ ಸಿದ್ದರಾಮಯ್ಯ ನೇರ ಸವಾಲು  

 ಹಾವೇರಿ (ಶಿಗ್ಗಾಂವಿ) : ಅಬಕಾರಿ ಇಲಾಖೆಯಿಂದ ₹ 700 ಕೋಟಿ ತಂದು ಮಹಾರಾಷ್ಟ್ರದಲ್ಲಿ ಚುನಾವಣೆ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯವರು ನಮ್ಮ ಮೇಲೆ ಹೊಸ ಸುಳ್ಳಿನ ಆರೋಪ ಮಾಡಿದ್ದಾರೆ. ಮೋದಿ ಅವರು ಹೇಳಿದ್ದು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸ್ತೀನಿ. ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸಿ ಎಂದು ಪ್ರಧಾನಿ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ನೇರ ಸವಾಲು ಹಾಕಿದರು.

ಶಿಗ್ಗಾಂವಿಯಲ್ಲಿ ಭಾನುವಾರ ಆಯೋಜಿಸಿದ್ದ ಜನ ಸಮಾವೇಶದಲ್ಲಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ಮೋದಿಯವರು ಕುಟುಂಬ ರಾಜಕಾರಣದ ಬಗ್ಗೆ ಭಯಾನಕ ಭಾಷಣ ಮಾಡ್ತಾರೆ. ಆದರೆ ಇಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಗನಿಗೆ ಟಿಕೆಟ್ ನೀಡಿದ್ದೀರಲ್ಲಾ ಇದು ಕುಟುಂಬ ರಾಜಕಾರಣ ಅಲ್ವಾ? ಮಾಜಿ ಪ್ರಧಾನಿ ದೇವೇಗೌಡರು, ಇವರ ಮಕ್ಕಳಾದ ಕುಮಾರಸ್ವಾಮಿ, ರೇವಣ್ಣ, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ ಅವರೆಲ್ಲಾ ಆಯ್ತು. ಈಗ ಕುಮಾರಸ್ವಾಮಿ ದಂಪತಿ ಪುತ್ರ ನಿಖಿಲ್ ಕುಮಾರಸ್ವಾಮಿ, ರೇವಣ್ಣ ದಂಪತಿ ಪುತ್ರರಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ...ಇವರೆಲ್ಲಾ ಏನು ಮೋದಿಯವರೇ? ಇವರೆಲ್ಲಾ ಕುಟುಂಬ ರಾಜಕಾರಣ ಮಾಡುತ್ತಿಲ್ಲವಾ ಎಂದು ಪ್ರಶ್ನಿಸಿದ ಅವರು, ಭಾಷಣ ಮಾಡೋದು ಸುಲಭ ಮೋದಿಯವರೇ. ನುಡಿದಂತೆ ನಡೆಯೋದು ನಿಮ್ಮಿಂದ ಆಗಲ್ಲ ಎಂದರು.

ಕೋವಿಡ್ ಸಂದರ್ಭದಲ್ಲೂ ಲೂಟಿ:  ಕೊರೋನಾ ಸಂದರ್ಭದಲ್ಲಿ ಇಡೀ ರಾಜ್ಯದ ಜನರ ಪರಿಸ್ಥಿತಿ ಹೇಗಿತ್ತು ಅಂತ ನಮಗೂ ಗೊತ್ತು, ನಿಮಗೂ ಗೊತ್ತು. ಇಂಥಾ ಸಂದರ್ಭದಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಶ್ರೀರಾಮುಲು, ಸುಧಾಕರ್ ಚೀನಾ ಜತೆಗೆ ವ್ಯವಹಾರ ಮಾಡಿ ದುಡ್ಡು ಲೂಟಿ ಮಾಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಮೃತದೇಹಗಳ, ಹೆಣಗಳ ಲೆಕ್ಕದಲ್ಲೂ ಹಣ ಲೂಟಿ ಮಾಡಿದ ಕೆಟ್ಟ ಸರ್ಕಾರ ಬಿಜೆಪಿಯದ್ದು. ಇಂಥಾ ಕೆಟ್ಟ ಸರ್ಕಾರ ಭಾರತದ ಚರಿತ್ರೆಯಲ್ಲೇ ಬಂದಿರಲಿಲ್ಲ ಎಂದು ಟೀಕಿಸಿದರು.

ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಅವರನ್ನು ಗೆಲ್ಲಿಸಿ. ಇವರು ನಿಮ್ಮ ಸೇವೆಗೆ ಸದಾ ನಿಮ್ಮ ಕೈಗೆ ಸಿಗ್ತಾರೆ. ಸರ್ಕಾರ ಪಠಾಣ್ ಅವರ ಜತೆಗೆ ಇರುತ್ತದೆ. ಶಿಗ್ಗಾಂವಿ ಜನರ ಪ್ರಗತಿಗೆ, ಕ್ಷೇತ್ರದ ಅಭಿವೃದ್ಧಿಗೆ ಪಠಾಣ್ ಜತೆ ನಾವೆಲ್ಲಾ ಸೇರಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್, ಬೈರತಿ ಸುರೇಶ್, ಅಜ್ಜಂಪೀರ್ ಖಾದ್ರಿ, ಸಲೀಮ್ ಅಹ್ಮದ್‌ ಇತರರು ಇದ್ದರು.

ದೇವೇಗೌಡರ ಕಣ್ಣೀರು ಆಗ ಎಲ್ಲಿತ್ತು?: ಮೋದಿಯವರ ಬಗ್ಗೆ ಏನು ಮಾತಾಡಿದ್ರು ಅನ್ನೋದು ಈಗ ದೇವೇಗೌಡರಿಗೆ ಮರೆತು ಹೋಗಿದೆ. ಮೋದಿ ಪ್ರಧಾನಿ ಆದ್ರೆ ದೇಶಬಿಟ್ಟು ಹೋಗ್ತೀನಿ ಅಂದಿದ್ರು. ಈಗ ಸಿದ್ದರಾಮಯ್ಯ ಅವರ ಸರ್ಕಾರ ತೆಗೆಯುವವರೆಗೂ ನಿದ್ದೆ ಮಾಡಲ್ಲ ಅಂತಿದ್ದಾರೆ. ಕಣ್ಣೀರು ಹಾಕುವುದೇ ನಿಮ್ಮ ಚರಿತ್ರೆ ಆಗಿದ್ದರೆ, ಹಾಸನದ ಹೆಣ್ಣು‌ಮಕ್ಕಳು ಕಣ್ಣೀರಲ್ಲಿ ಕೈ ತೊಳೆಯುವಾಗ ನಿಮ್ಮ ಕಣ್ಣಲ್ಲಿ ನೀರು ಬರಲಿಲ್ಲ ಏಕೆ? ಅಲ್ಲಿಗೆ ಹೋಗಿ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳ ಪರವಾಗಿ ಕಣ್ಣೀರು ಹಾಕಲಿಲ್ಲ ಏಕೆ ಎಂದು ಪ್ರಶ್ನಿಸಿದರು. 

ವಕ್ಫ್‌ ನೋಟಿಸ್‌ ವಾಪಸ್‌: ವಕ್ಫ್ ಆಸ್ತಿಗಳ ಒತ್ತುವರಿ ತೆರವುಗೊಳಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಿತ್ತು. ಬಿಜೆಪಿ ಸರ್ಕಾರವೇ ಒತ್ತುವರಿ ತೆರವುಗೊಳಿಸಿ ಎಂದು 216 ಮಂದಿಗೆ ನೋಟಿಸ್ ನೀಡಿತ್ತು. ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಾ ಪ್ರತಿಭಟನೆ ನಡೆಸುತ್ತಿದೆ. ಒಬ್ಬೇ ಒಬ್ಬ ರೈತರನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಘೋಷಿಸಿದ್ದು ನಮ್ಮ‌ ಸರ್ಕಾರ. ನೋಟಿಸ್ ವಾಪಸ್ ಪಡೆಯುವಂತೆ ನಮ್ಮ ಸರ್ಕಾರ ಅಧಿಕೃತ ಸುತ್ತೋಲೆ ಕೂಡ ಹೊರಡಿಸಿ ಆಗಿದೆ ಎಂದರು.