ಕನ್ನಡಿಗರು ನಿರಭಿಮಾನಿಗಳಾದರೆ ಕಾವೇರಿಯೂ ದೂರವಾಗಬಹುದು

| Published : Nov 11 2024, 01:07 AM IST / Updated: Nov 11 2024, 01:08 AM IST

ಸಾರಾಂಶ

ಸಿರಿಗೆರೆ: ಕನ್ನಡಿಗರು ನಾಡು ಮತ್ತು ನುಡಿಯ ಬಗ್ಗೆ ನಿರಭಿಮಾನಿಗಳಾದರೆ ಒಂದು ಕಾಲಕ್ಕೆ ಕಾವೇರಿಯನ್ನೂ ಕಳೆದುಕೊಳ್ಳಬೇಕಾಗಬಹುದು ಎಂದು ಖ್ಯಾತ ಅನುವಾದಕ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಎಚ್.ಎಸ್.‌ಹರಿಶಂಕರ್‌ ಹೇಳಿದರು.

ಸಿರಿಗೆರೆ: ಕನ್ನಡಿಗರು ನಾಡು ಮತ್ತು ನುಡಿಯ ಬಗ್ಗೆ ನಿರಭಿಮಾನಿಗಳಾದರೆ ಒಂದು ಕಾಲಕ್ಕೆ ಕಾವೇರಿಯನ್ನೂ ಕಳೆದುಕೊಳ್ಳಬೇಕಾಗಬಹುದು ಎಂದು ಖ್ಯಾತ ಅನುವಾದಕ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಎಚ್.ಎಸ್.‌ಹರಿಶಂಕರ್‌ ಹೇಳಿದರು.ತರಳಬಾಳು ಜಗದ್ಗುರು ಬೃಹನ್ಮಠ ಹಾಗೂ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ತರಳಬಾಳು ನುಡಿಹಬ್ಬದ ಸಮಾರೋಪದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.ಭಾಷೆಯ ಬಗೆಗಿನ ಆಚರಣೆ ನವೆಂಬರ್‌ಗೆ ಮಾತ್ರವೇ ಸೀಮಿತವಾಗಬಾರದು. ಭಾಷೆಯ ಬಗ್ಗೆ ಹಲವು ಬಿಕ್ಕಟ್ಟುಗಳು ನಮ್ಮ ಮುಂದಿವೆ. ವಿಶ್ವವಿದ್ಯಾನಿಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹಳೆಗನ್ನಡ ಓದುವುದರಿಂದ ದೂರವಾಗಿದ್ದಾರೆ. ೨೦ನೇ ಶತಮಾನದಲ್ಲಿ ಹಲವು ಪ್ರಮುಖ ಗ್ರಂಥಗಳು ಪ್ರಕಟಗೊಂಡಿದ್ದರೂ, ಅವು ಓದುಗರನ್ನು ತಲುಪಲು ಸಾಧ್ಯವಾಗಿಲ್ಲ. ಈಗಿನ ಲೇಖಕರು ಬೆಟ್ಟದಷ್ಟು ಬರೆದಿದ್ದಾರೆ. ಆದರೆ ಅದು ಓದುಗರಿಗೆ ಮುಟ್ಟುತ್ತಿಲ್ಲ ಎಂದು ವಿಷಾದಿಸಿದರು.ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ರಾಜಕಾರಣಿಗಳು, ಭಾಷಾಭಿಮಾನಿಗಳೂ, ಧರ್ಮಗುರುಗಳೂ ಸೇರಿದಂತೆ ಎಲ್ಲರೂ ಚರ್ಚೆ ಮಾಡಬೇಕಾದ ಅಗತ್ಯ ಇದೆ ಎಂದರು.ತರಳಬಾಳು ಶ್ರೀಗಳು ಏತನೀರಾವರಿ ಯೋಜನೆಗಳಿಗೆ ಶ್ರಮಿಸುತ್ತಿರುವುದನ್ನು ನಾಡಿನ ರೈತ ವರ್ಗ ಮುಕ್ತಕಂಠದಿಂದ ಪ್ರಶಂಸೆ ಮಾಡುತ್ತಿದೆ ಎಂದು ಶ್ಲಾಘಿಸಿದರು.ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ವಾಮದೇವಪ್ಪ ಹಾಗೂ ಕೆ.ಎಂ.ಶಿವಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್‌ ಪಾಂಡು ಮಾತನಾಡಿದರು.

ಇದೇ ವೇಳೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಕನ್ನಡ ವಿಷಯದಲ್ಲಿ ಶೇ.೧೦೦ ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ದಾವಣಗೆರೆ ವಿವಿ ಕುಲಪತಿ ಬಿ.ಡಿ.ಕುಂಬಾರ್‌, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.‌ಎರ್.‌ಸ್ವಾಮಿ, ಎಚ್‌.ಬಿ.ಓಬಳೇಶ್‌, ತರಳಬಾಳು ಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಜತ್ತಿ ಭಾಗವಹಿಸಿದ್ದರು.ನಾಡಗೀತೆಯ ನಂತರ ಎಸ್.‌ಆರ್.‌ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಉಪನ್ಯಾಸಕ ರಾಜಶೇಖರಯ್ಯ ಕಾರ್ಯಕ್ರಮ ನಿರೂಪಿಸಿದರು.