ಸಾರಾಂಶ
ಮೊಳಕಾಲ್ಮುರಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ದಾಖಲಾತಿ ನಿರ್ವಹಣೆ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.
ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು
ರೈತರಿಗೆ ಕಳಪೆ ಗುಣಮಟ್ಟದ ಪರಿಕರಗಳನ್ನು ಮಾರಾಟ ಮಾಡಿದರೆ ಸೂಕ್ತ ಕ್ರಮಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ( ಜಾಗೃತ ದಳ) ಡಾ.ಸಂಕಾಳ ಮಲ್ಲನಗೌಡ ಹೇಳಿದರು.ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ದಾಖಲಾತಿ ನಿರ್ವಹಣೆ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಈ ಬಾರಿ ಉತ್ತಮ ಮುಂಗಾರು ಮಳೆ ಬರುವ ನಿರೀಕ್ಷೆ ಇದ್ದು, ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ, ಗೊಬ್ಬರ ವಿತರಣೆ ಮಾಡಬೇಕು. ಅಧಿಕೃತ ಡೀಲರ್‌ಗಳು ಪಿಒಎಸ್ ಮಿಷನ್ ಮುಖಾಂತರ ವಹಿವಾಟು ನಡೆಸುವ ಮೂಲಕ ಪ್ರತಿ ಪರಿಕರಕ್ಕೂ ಖಡ್ಡಾಯವಾಗಿ ರಶೀದಿ ನೀಡಬೇಕು. ನೋಂದಣಿಯಾಗದ ಕೀಟನಾಶಕಗಳ ಹೆಸರಿನಡಿಯ ಕೀಟನಾಶಕ ಮಿಶ್ರಣ ಮಾಡಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ಪ್ರತಿ ಮಾರಾಟಗಾರರು ವಾರಕ್ಕೊಮ್ಮೆ ದಾಸ್ತಾನು ವರದಿಯನ್ನು ಖಡ್ಡಾಯವಾಗಿ ಸಲ್ಲಿಸುವ ಜತೆಗೆ ರೈತರಿಗೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸಬೇಕು ಎಂದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ ಮಾತನಾಡಿ, ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು ಅಂಗಡಿ ಮಾಲೀಕರು ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ರೈತರಿಗೆ ಅಗತ್ಯ ಪರಿಕರಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಅಧಿಕೃತ ಲೈಸೆನ್ಸ್ ರೈತರಿಗೆ ಕಾಣುವಂತೆ ಹಾಕಬೇಕು. ಜಾಗೃತದಳದ ಅಧಿಕಾರಿಗಳು ಯಾವಾಗ ಬೇಕಾದರೂ ಭೇಟಿ ನೀಡಲಿದ್ದು, ಪ್ರತಿಯೊಬ್ಬ ಅಂಗಡಿಯ ಮಾಲೀಕರು ಸರ್ಕಾರದ ನಿಯಮಾನುಸಾರ ಪರಿಕರಗಳನ್ನು ಮಾರಾಟ ಮಾಡಬೇಕು ಎಂದರು. ಈ ವೇಳೆ ಜಾಗೃತ ದಳದ ಸಹಾಯಕ ನಿರ್ಧೇಶಕ ಡಾ.ಉಲ್ಲತ್ ಜೈಬಾ,ಪಟ್ಟಣ ಪಂಚಾಯಿತಿ ಸದಸ್ಯ ಟಿ.ಟಿ.ರವಿ ಕುಮಾರ್,ರಾಮಕೃಷ್ಣ,ಕೃಷಿ ಅಧಿಕಾರಿ ಎನ್.ಗಿರೀಶ,ಸಿಕಂದರ್ ಬಾಷ,ಹೆಚ್.ಪಿ.ನಿರಂಜನ ಮೂರ್ತಿ,ಆತ್ಮ ಯೋಜನೆಯ ಬಿ.ಶಿವಣ್ಣ ಇದ್ದರು.