ಸಾರಾಂಶ
ಬೆಳಗಾವಿ : ಜಾತ್ರೆಯಲ್ಲಿ ಪ್ರಸಾದ ಸೇವಿಸಿ 128 ಜನರು ಅಸ್ವಸ್ಥರಾಗಿದ್ದು, ಐವರ ಸ್ಥಿತಿ ಗಂಭೀರವಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದಲ್ಲಿ ಭೀರೇಶ್ವರ ಮತ್ತು ಕರೆಮ್ಮ ಜಾತ್ರೆ ನಡೆದಿತ್ತು. ಈ ಜಾತ್ರೆಯಲ್ಲಿ ಗ್ರಾಮದ ಜನ ಅನ್ನ ಪ್ರಸಾದ ಮತ್ತು ಮನೆಯಲ್ಲಿ ಮಾವಿನ ಹಣ್ಣಿನ ಶಿಖರಣಿ ಸೇವಿಸಿದ್ದರು. ಆದರೆ ಪ್ರಸಾದ ಸೇವಿಸಿದವರಲ್ಲಿ ಏಕಾಏಕಿ ವಾಂತಿ-ಭೇದಿ ಆರಂಭವಾಗಿದೆ. ಕೂಡಲೇ ಅಸ್ವಸ್ಥಗೊಂಡವರಿಗೆ ಸ್ಥಳೀಯ ಆಸ್ಪತ್ರೆ, ಸವದತ್ತಿ ಸಾರ್ವಜನಿಕ ಆಸ್ಪತ್ರೆ ಹಾಗೂ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಹೂಲಿಕಟ್ಟಿ ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರಾಥಮಿಕ ಕೇಂದ್ರ ಆರಂಭಿಸಲಾಗಿದ್ದು, ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡ ಜಿಲ್ಲಾಸ್ಪತ್ರೆ ಮತ್ತು ಕಿಮ್ಸ್‌ಆಸ್ಪತ್ರೆಗೆ 17 ಜನರನ್ನು ದಾಖಲಿಸಲಾಗಿದ್ದು, ಅದರಲ್ಲಿ ಐವರ ವಯೋವೃದ್ಧರ ಸ್ಥಿತಿ ಗಂಭೀರವಾಗಿದೆ. ಜಿಲ್ಲಾ ಆರೋಗ್ಯಇಲಾಖೆ ಅಧಿಕಾರಿ ಡಾ.ಮಹೇಶ ಕೋಣಿ ಗ್ರಾಮದಲ್ಲಿ ಮುಕ್ಕಾಂ ಹೂಡಿದ್ದಾರೆ.
ಸದ್ಯರೋಗಿಗಳನ್ನು ಪ್ರತಿ ಗಂಟೆಗೂ ನಿಗಾ ಇಡಲಾಗಿದೆ. ಅಲ್ಲದೇ, ಗ್ರಾಮಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತೀವ್ರ ಅಸ್ವಸ್ಥಗೊಂಡ ಐವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದಾರೆ. ಇನ್ನು ಅಹಿತಕರ ಘಟನೆ ಆಗದಂತೆ ತಾಲೂಕಾಧಿಕಾರಿಗಳು ಗ್ರಾಮದಲ್ಲಿ ಕ್ಯಾಂಪ್ ತೆರೆದು ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.
ಗ್ರಾಮಕ್ಕೆ ಶಾಸಕ ವೈದ್ಯ ಭೇಟಿ:
ಹೂಲಿಕಟ್ಟಿ ಗ್ರಾಮಕ್ಕೆ ಶಾಸಕ ವಿಶ್ವಾಸ ವೈದ್ಯ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಕರಿಯಮ್ಮನ ಜಾತ್ರೆ ಮಾಡದಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು.
ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕ ಜಾತ್ರೆ ಮಾಡೋಣ. ಗ್ರಾಮದಲ್ಲಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇಡೀ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲ ಕ್ರಮಕೈಗೊಂಡಿದೆ. ಅಸ್ವಸ್ಥಗೊಂಡಿರುವ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
-ವಿಶ್ವಾಸ ವೈದ್ಯ, ಶಾಸಕ.
ಈವರೆಗೂ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಸಾದ ಸೇವಿಸಿದವರಲ್ಲಿ ವಾಂತಿ-ಭೇದಿ ಕಂಡುಬಂದ ತಕ್ಷಣವೇ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗಿದೆ. ಪ್ರತಿಗಂಟೆಗೂ ರೋಗಿಗಳ ಮಾನಿಟರ್ ಮಾಡಲಾಗುತ್ತಿದೆ. ಯಾವುದೇ ರೀತಿಯ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜಿರೋ ಕೇಸ್ ಬರುವವರೆಗೂ ಚಿಕಿತ್ಸೆ ಮುಂದುವರೆಸಲಾಗುವುದು.
-ಡಾ.ಮಹೇಶ ಕೋಣಿ, ಜಿಲ್ಲಾ ಆರೋಗ್ಯಾಧಿಕಾರಿ.