ವೀರಶೈವ ಲಿಂಗಾಯತ ಸಮಾಜ ಒಡೆದರೆ ಉಳಿಗಾಲವಿಲ್ಲ: ರಂಭಾಪುರಿ ಶ್ರೀ

| Published : Jul 23 2025, 01:45 AM IST

ಸಾರಾಂಶ

ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯಾರು ಯಾರು ಪ್ರಯತ್ನಿಸಿದ್ದರೋ ಅಂತಹವರಿಗೆ ಉಳಿಗಾಲವಿಲ್ಲ. ಈ ಹಿಂದೆ ಅಂಥ ಕೆಲವರು ರಾಜಕೀಯದಲ್ಲಿ ಸೋತು ಸುಣ್ಣವಾಗಿದ್ದಾರೆ ಎಂದು ರಂಭಾಪುರಿ ಪೀಠದ ಶ್ರೀ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸೂಚ್ಯವಾಗಿ ಎಚ್ಚರಿಸಿದರು.

ದಾವಣಗೆರೆ: ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯಾರು ಯಾರು ಪ್ರಯತ್ನಿಸಿದ್ದರೋ ಅಂತಹವರಿಗೆ ಉಳಿಗಾಲವಿಲ್ಲ. ಈ ಹಿಂದೆ ಅಂಥ ಕೆಲವರು ರಾಜಕೀಯದಲ್ಲಿ ಸೋತು ಸುಣ್ಣವಾಗಿದ್ದಾರೆ ಎಂದು ರಂಭಾಪುರಿ ಪೀಠದ ಶ್ರೀ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸೂಚ್ಯವಾಗಿ ಎಚ್ಚರಿಸಿದರು.

ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಮಂಗಳವಾರ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ 2ನೇ ದಿನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಈ ಹಿಂದೆ ದೇವರಾಜ ಅರಸು ಕಾಲದಲ್ಲಿ ಹಾವನೂರು ಆಯೋಗವನ್ನು ರಚಿಸಿ, ಕೆಲವು ಒಳ ಜಾತಿಗಳನ್ನು ಸೇರಿಸಿ, ಸರ್ಕಾರದ ಸೌಲಭ್ಯ ನೀಡಿದರು. ತಮ್ಮ ರಾಜಕೀಯ ಲಾಭಕ್ಕಾಗಿ ಪ್ರತ್ಯೇಕ ಗುಂಪುಗಳಾಗಿ ಸಮಾಜ ಒಡೆಯುತ್ತಲೇ ಇದ್ದಾರೆ. ಬಿಜೆಪಿಯ ವೈಮನಸ್ಸಿನಿಂದಾಗಿ ರಾಜಕೀಯ ಹಿನ್ನಡೆಯಾಗಿ, ಕಾಂಗ್ರೆಸ್ ಜಯಭೇರಿ ಆಗಿದ್ದೂ ಗೊತ್ತಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ಯಾರೂ ಸಹ ಮಾಡಬಾರದು ಎಂದರು.

ವೀರಶೈವ ಲಿಂಗಾಯತ ಸಮಾಜ ಬಹಳ ದೊಡ್ಡ ಸಮಾಜ. ಮತ ಸಿದ್ಧಾಂತಕ್ಕಾಗಿ ಇದು ಸ್ಥಾಪನೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದರಲ್ಲೂ ರಾಜಕೀಯ ಪ್ರವೇಶ ಆಗುತ್ತಿದೆ. ರಾಜಕೀಯ ಕ್ಷೇತ್ರ ಕಲುಷಿತವಾಗಿದೆ. ಅದೇ ರೀತಿ ಧಾರ್ಮಿಕ ರಂಗವೂ ಕಲುಷಿತವಾಗುತ್ತಿದೆ. ರಾಜಕೀಯ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ನೂರಾರು ಒಳ ಪಂಗಡಗಳಲ್ಲಿ ಕೆಲವರಿಗೆ ಮಾತ್ರ ಅವಕಾಶ ಸಿಕ್ಕಿದೆ. ಉಳಿದವರಿಗೆ ಸೌಲಭ್ಯ ಸಿಗುತ್ತಿಲ್ಲಲ. ಅಂತಹವರು ಸೇರಿಕೊಂಡು ಹೋರಾಟ ಮಾಡಿದರೆ ಅವಕಾಶವೂ ಸಿಗುತ್ತದೆ ಎಂದು ಜಗದ್ಗುರು ತಿಳಿಸಿದರು.

ಹಿಂದೆಲ್ಲಾ ಗುರು-ವಿರಕ್ತ ಪರಂಪರೆ ಒಂದೇ ಆಗಿತ್ತು. ಆದರೆ, ಇವತ್ತು ಜಾತಿಗೊಂದು ಮಠಗಳು ಹುಟ್ಟಿಕೊಂಡು, ವೀರಶೈವ ಮೂಲ ತತ್ವವನ್ನೇ ದೂರ ಮಾಡುತ್ತಿವೆ. ಆಧ್ಯಾತ್ಮಿಕ ಪ್ರಪಂಚದಲ್ಲಿ ಮೂಲ ಮಠಗಳು ದಾರಿ ತೋರುತ್ತಿವೆ. ವೀರಶೈವ ಧರ್ಮದ ಮೂಲ ತತ್ವ, ಸಿದ್ಧಾಂತಗಳು ಸ್ವಾರ್ಥ, ಸಂಕುಚಿತ ಮನೋಭಾವ ಹೊಂದಿಲ್ಲ. ಸಮುದಾಯಕ್ಕೆ ಸಂಸ್ಕಾರ ನೀಡಿ, ಸಂಸ್ಕೃತಿ ಬೆಳೆಸಿದ್ದು ವೀರಶೈವ ಧರ್ಮವಾಗಿದೆ ಎಂದು ಹೇಳಿದರು.

ಬೆಂಗಳೂರಲ್ಲಿ ಒಗ್ಗೂಡಿಸುತ್ತೇನೆ:

ನೂರಾರು ಒಳಪಂಗಡಗಳಲ್ಲಿ ಕೆಲವೇ ಒಳಪಂಗಡಗಳಿಗೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಹೀಗೆ ಸೌಲಭ್ಯ ಸಿಗದಿರುವ ಕೆಲ ಪಂಗಡಗಳ ಕೆಲ ಗುಂಪುಗಳು ಪ್ರತ್ಯೇಕವಾಗಿ ವಿಭಜನೆಗೊಂಡಿವೆ. ಪಂಚ ಪೀಠಾಧೀಶ್ವರರು ನಿರಾಶರಾಗದೇ ಧರ್ಮದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಡೀ ಸಮುದಾಯ ಒಗ್ಗೂಡಿಸಿ ಮುನ್ನಡೆಸುವ ಸಾಮರ್ಥ್ಯ, ಶಕ್ತಿ ಪಂಚಪೀಠಗಳಿಗೆ ಮಾತ್ರ ಇದೆ. ಇದಕ್ಕೆ ಅನುಮತಿ ಸಿಕ್ಕರೆ ಗಟ್ಟಿಯಾದ ಹೆಜ್ಜೆಗಳನ್ನು ಇಡುತ್ತೇವೆ. ಗುರು-ವಿರಕ್ತರು ಒಂದಾಗಬೇಕೆನ್ನುವ ವಿಚಾರ ದಲ್ಲಿ ನಾಲ್ಕು ಪೀಠಾಧೀಶರ ಸಹಮತ ಇದ್ದರೆ, ಬೆಂಗಳೂರಿನಲ್ಲಿ ಮಹಾಸಭಾದಿಂದ ವೀರಶೈವ ಲಿಂಗಾಯತ ಮಠಾಧೀಶರನ್ನು ಕರೆದು ಒಗ್ಗೂಡಿಸುವ ಕಾರ್ಯ ಮಾಡುತ್ತೇನೆ ಎಂದು ಜಗದ್ಗುರು ಘೋಷಿಸಿದರು.

ಕಾಶಿ ಪೀಠದ ಡಾ.ಚಂದ್ರಶೇಖರ ರಾಜದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ಕಾಪಾಡಿಕೊಂಡು ಬರುವುದು ಭಾರತೀಯ ಸಂಸ್ಕೃತಿಯಾಗಿದೆ. ವೀರಶೈವ ಲಿಂಗಾಯತ ಧರ್ಮ ಸರ್ವ ಸಮುದಾಯಕ್ಕೂ ಸದಾ ಕಾಲ ಒಳಿತನ್ನೇ ಬಯಸುತ್ತಾ ಬಂದಿವೆ. ಪಂಚಪೀಠಗಳು ಸ್ವಧರ್ಮ ನಿಷ್ಠೆಯ ಜೊತೆಗೆ ಪರಧರ್ಮ ಸಹಿಷ್ಣುತೆಯನ್ನೂ ಬೋಧಿಸುತ್ತ ಬಂದಿವೆ. ಪಂಚ ಪೀಠಾಧೀಶರು ಉಳಿದ ವಿರಕ್ತ ಮಠಗಳನ್ನೂ ಕೂಡಿಕೊಂಡು ಸಮನ್ವಯ ಸಂದೇಶ ನೀಡುವಂತೆ ಅನೇಕ ರಾಜಕಾರಣಿಗಳು ಅಪೇಕ್ಷೆ ಪಟ್ಟಿದ್ದಾರೆ. ಈಗಾಗಲೇ ರಂಭಾಪುರಿ ಶ್ರೀಗಳು ಮಾಡಿದ್ದಾರೆ. ಮತ್ತೆ ಅಂತಹ ಕಾರ್ಯಕ್ಕೆ ಉಳಿದ ಎಲ್ಲ ಸಮಾನ ಪೀಠಗಳು ತಮ್ಮ ಸಹಕಾರ ನೀಡಲಿವೆ ಎಂದರು.