ಸಾರಾಂಶ
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣದ ಆರೋಪ ಎಷ್ಟು ಸತ್ಯ ಎಂಬುದು ಹೊರಬರಬೇಕಾದರೆ ಇದರ ಬಗ್ಗೆ ಉನ್ನತಮಟ್ಟದ ತನಿಖೆ ಅಗತ್ಯ. ಈ ಹಿನ್ನೆಲೆಯಲ್ಲಿ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ತಂಡ ರಚನೆ ಮಾಡಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರ ಎಸ್‌ಐಟಿ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ತನಿಖೆ ನ್ಯಾಯಸಮ್ಮತವಾಗಿ ನಡೆಯಬೇಕು ಎಂದು ವಕೀಲ ಕೆ.ಪಿ ಶ್ರೀಪಾಲ್ ಒತ್ತಾಯಿಸಿದರು.
ಶಿವಮೊಗ್ಗ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣದ ಆರೋಪ ಎಷ್ಟು ಸತ್ಯ ಎಂಬುದು ಹೊರಬರಬೇಕಾದರೆ ಇದರ ಬಗ್ಗೆ ಉನ್ನತಮಟ್ಟದ ತನಿಖೆ ಅಗತ್ಯ. ಈ ಹಿನ್ನೆಲೆಯಲ್ಲಿ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ತಂಡ ರಚನೆ ಮಾಡಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರ ಎಸ್‌ಐಟಿ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ತನಿಖೆ ನ್ಯಾಯಸಮ್ಮತವಾಗಿ ನಡೆಯಬೇಕು ಎಂದು ವಕೀಲ ಕೆ.ಪಿ ಶ್ರೀಪಾಲ್ ಒತ್ತಾಯಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1983ರಲ್ಲಿ ಬಂಗಾರಪ್ಪನವರು ಅವರು ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಅಸಹಜ ಸಾವುಗಳ ಬಗ್ಗೆ ಧ್ವನಿ ಎತ್ತಿದ್ದರು. ಆಗ ಲಂಕೇಶ್ ಪತ್ರಿಕೆ ಸೇರಿದಂತೆ ಇತರೆ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸಿದ್ದವು. ಅದಾದ ನಂತರ, ಪ್ರಭಾವಿ ವ್ಯಕ್ತಿಗಳು ಸುದ್ದಿ ಪ್ರಸಾರಕ್ಕೆ ತಡೆಯಾಜ್ಞೆ ತಂದಿದ್ದರು. ಇದರಿಂದಾಗಿ ಮಾಧ್ಯಮಗಳು ಸಹ ಸುದ್ದಿ ಪ್ರಸಾರ ಮಾಡಲು ಸಾಧ್ಯವಾಗಲಿಲ್ಲ. 2012ರಲ್ಲಿ ನಡೆದ ಸೌಜನ್ಯ ಹತ್ಯೆ ಪ್ರಕರಣ ಬಳಿಕ ಧರ್ಮಸ್ಥಳದ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ಈಗ ಧರ್ಮಸ್ಥಳದಲ್ಲಿ 2014ರವರೆಗೆ ಸ್ವಚ್ಛತಾ ಕಾರ್ಮಿಕನಾಗಿ ಕಾರ್ಯನಿರ್ವಹಿಸಿದ್ದ ವ್ಯಕ್ತಿಯೊಬ್ಬರು ನೂರಾರು ಶವಗಳನ್ನು ತಾನು ಮಣ್ಣು ಮಾಡಿದ್ದೇನೆ ಎಂದು ಹಿರಿಯ ವಕೀಲರ ಮುಂದೆ ಹೇಳಿಕೆ ನೀಡಿದ್ದಾರೆ. ಆ ಕಾರ್ಮಿಕನು ಹೂತಿಟ್ಟಿದ್ದ ಶವಗಳಲ್ಲಿ 12 ರಿಂದ 15 ವರ್ಷದ ಬಾಲಕಿಯರೇ ಹೆಚ್ಚು ಎಂದು ಆತ ತಿಳಿಸಿದ್ದಾನೆ. ಈಗಲೂ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂದರೆ ಕಾನೂನಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದರು.ಈ ಪ್ರಕರಣಗಳು ಯಾರಿಂದ ನಡೆದಿವೆ ಎಂದು ಇದುವರೆಗೆ ಯಾರಿಗೂ ಗೊತ್ತಾಗಿಲ್ಲ. ರಾಜ್ಯಾದ್ಯಂತ ಈ ಕುರಿತು ಚರ್ಚೆಗಳು ಹೆಚ್ಚಾದಾಗ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಎಸ್‌ಐಟಿ ಅಧಿಕಾರಿಗಳು ತುರ್ತಾಗಿ ಈ ಪ್ರಕರಣಗಳ ಬಗ್ಗೆ ತನಿಖೆ ಆರಂಭಿಸಬೇಕು. ವಿಳಂಬವಾದರೆ ಸಾಕ್ಷಿ ನಾಶವಾಗುವ ಸಾಧ್ಯತೆ ಇದೆ. ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳದಲ್ಲಿ 98 ಅಸಹಜ ಸಾವುಗಳು ಸಂಭವಿಸಿವೆ ಎನ್ನಲಾಗಿದ್ದು, ಈ ಪ್ರಕರಣದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಧರ್ಮಸ್ಥಳದ ಪ್ರಕರಣವು ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಪ್ರತಿಧ್ವನಿಸುತ್ತಿದೆ. ಕೇರಳ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡ ಒಂದು ತಿಂಗಳ ನಂತರ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದೆ. ಎಸ್‌ಐಟಿ ತನಿಖೆ ನಿಷ್ಪಕ್ಷಪಾತವಾಗಿ ನಡೆದರೆ ಅನನ್ಯಭಟ್ ನಾಪತ್ತೆ ಪ್ರಕರಣ ಹಾಗೂ ಸೌಜನ್ಯ ಸಾವಿಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು.ಡಿಎಸ್‌ಎಸ್ ಸಂಘಟನೆಯ ರಾಜ್ಯ ಸಂಚಾಲಕ ಡಿ.ಎಸ್.ಗುರುಮೂರ್ತಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಮಾಜವಾದಿ ಪುಟ್ಟಯ್ಯ, ಎಂ.ಗುರುಮೂರ್ತಿ, ಡಾ.ಕೆ.ಜಿ.ವೆಂಕಟೇಶ್, ಶಿವಬಸಪ್ಪ, ವಿಜಯ್ ಇತರರಿದ್ದರು.