ಜನರಿಗೆ ಅತ್ಯುತ್ತಮ ಸೇವೆ ಒದಗಿಸುವುದೇ ನಮ್ಮ ಗುರಿ: ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಸ್ವಾಮಿ

| Published : Jul 23 2025, 01:45 AM IST

ಜನರಿಗೆ ಅತ್ಯುತ್ತಮ ಸೇವೆ ಒದಗಿಸುವುದೇ ನಮ್ಮ ಗುರಿ: ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಸ್ಥಳೀಯ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ವ್ಯವಸ್ಥೆಯನ್ನು ಸಾರ್ವಜನಿಕ ಸ್ನೇಹಿಯನ್ನಾಗಿಸುವ ದಿಸೆಯಲ್ಲಿ ಮನೆ ಮನೆಗೆ ಪೊಲೀಸರು ಎಂಬ ವಿನೂತನ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಸ್ವಾಮಿ ಮಂಗಳವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಸ್ಥಳೀಯ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ವ್ಯವಸ್ಥೆಯನ್ನು ಸಾರ್ವಜನಿಕ ಸ್ನೇಹಿಯನ್ನಾಗಿಸುವ ದಿಸೆಯಲ್ಲಿ ಮನೆ ಮನೆಗೆ ಪೊಲೀಸರು ಎಂಬ ವಿನೂತನ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಸ್ವಾಮಿ ಮಂಗಳವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಪೊಲೀಸರನ್ನು ಸಮಾಜದ ಭದ್ರತಾ ಪ್ರತಿನಿಧಿಗಳೆಂದು, ನಾಗರೀಕರ ಮೂಲಭೂತ ಹಕ್ಕುಗಳ ರಕ್ಷಕರೆಂದು ಸಂಬೋಧಿಸಲಾಗುತ್ತದೆ. ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧಗಳ ತಡೆ ಹಾಗೂ ಪತ್ತೆ, ಸಮಾಜದಲ್ಲಿ ನಿರ್ಭಯ ವಾತಾವರಣವನ್ನು ಸೃಜಿಸುವ ಜೊತೆಗೆ ರಕ್ಷಣೆ ಮತ್ತು ಸುರಕ್ಷತೆ ಒದಗಿಸುವ ಕರ್ತವ್ಯ ಮತ್ತು ಗುರುತರ ಜವಾಬ್ದಾರಿಗಳು ಪೊಲೀಸ್ ಇಲಾಖೆಯ ಮೇಲಿವೆ ಎಂದರು.

ಪೊಲೀಸ್ ವ್ಯವಸ್ಥೆಯು ಸಮಾಜಸ್ನೇಹಿಯಾಗಿಸಿಕೊಳ್ಳುವುದರಿಂದ ಪೊಲೀಸ್ ಮೂಲಭೂತ ಕರ್ತವ್ಯದ ಪರಿಣಾಮಕತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಪೊಲೀಸ್ ಸೇವೆಗಳ ಪ್ರತಿಯೊಂದು ಸ್ಥರದಲ್ಲೂ, ಸಾರ್ವಜನಿಕರ ಬೆಂಬಲ ಮತ್ತು ಸಹಭಾಗಿತ್ವವನ್ನು ಸಾಧಿಸಿಕೊಳ್ಳುವುದರಿಂದ ಮಾತ್ರವೇ ಸಾರ್ವಜನಿಕರಿಗೆ ಉತ್ಕೃಷ್ಟ ಸೇವೆಯನ್ನು ಒದಗಿಸಲು ಸಾಧ್ಯ. ಪೊಲೀಸರು ಸಮಾಜದ ಸೇವಕರು ಎಂಬುದನ್ನು ಎಂದಿಗೂ ಮರೆಯಕೂಡದು. ಜನರಿಗೆ ಅತ್ಯುತ್ತಮ ಸೇವೆ ಒದಗಿಸುವುದೇ ನಮ್ಮ ಗುರಿ ಮತ್ತು ಮೂಲ ಧೈಯ ಎಂಬುದನ್ನು ಸದಾ ನೆನಪಿನಲ್ಲಿಡಬೇಕು ಎಂದರು.

ಸಾರ್ವಜನಿಕ ಹಿತರಕ್ಷಣೆಗೆ ಪೊಲೀಸ್ ಇಲಾಖೆಯು ತುಂಬಾ ನಿಗಾವಹಿಸುತ್ತಿದೆ ಎಂದು ತಿಳಿಸಿದ ಅವರು, ಜನರು ಒಂದು ಮೊಬೈಲ್ ಫೋನ್ ಸಲುವಾಗಿ ಎಷ್ಟೆಲ್ಲಾ ಹಣ ಖರ್ಚು ಮಾಡುತ್ತಾರೆ. ಆದರೆ, ತಮ್ಮ ಹಿತರಕ್ಷಣೆ ಮಾಡುವ ಹೆಲ್ಮೆಟ್ಗೋಸ್ಕರ ಯಾಕೆ ಹಣವನ್ನು ಖರ್ಚು ಮಾಡುವುದಿಲ್ಲ ಎಂದು ನೆರದಿದ್ದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರಶ್ನಿಸಿ ಹೆಲ್ಮೆಟ್‌ನ ಮಹತ್ವ ತಿಳಿಸಿದರು.

ಪೊಲೀಸ್ ವ್ಯವಸ್ಥೆಯನ್ನು ಸಾರ್ವಜನಿಕ ಸ್ನೇಹಿಯಾಗಿಸಬೇಕು ಎನ್ನುವ ಉದ್ದೇಶದೊಂದಿಗೆ ಮನೆ-ಮನೆಗೆ ಪೊಲೀಸ್ ಪರಿಕಲ್ಪನೆಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯು ಕರ್ತವ್ಯ ನಿರ್ವಹಿಸುವುದು ಅವಶ್ಯಕತೆ ಇರುತ್ತದೆ ಎಂದು ಹೇಳಿದರು.

ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆ, ನಿಯಂತ್ರಣ ಕೋಣೆ-112 ಸಂಖ್ಯೆ ಹಿರಿಯ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಹಂಚಿಕೊಳ್ಳುವುದು ಹಾಗೂ ಎಂತಹದ್ದೇ ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆಗೆ ಕರೆ ಮಾಡುವಂತೆ ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಡಿವೈಎಸ್ಪಿ ಶಾಂತವೀರ ಮಾತನಾಡಿದರು.

ಈ ಸಂದರ್ಭದಲ್ಲಿ ಸಿಪಿಐಗಳಾದ ನಾಗರಾಜ, ನಿಂಗಪ್ಪ, ಟ್ರಾಪಿಕ್ ಪೊಲೀಸ್ ಇಲಾಖೆಯ ಪಿಎಸ್ಐ ಸಣ್ಣ ಈರೇಶ್ ಸೇರಿ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳು ಹಾಗೂ ಆಟೋ ಚಾಲಕರು ಇದ್ದರು.

ವಿವಿಧ ಬಹುಮಾನ ವಿತರಣೆ

ಇದೇ ವೇಳೆ ವಿವಿಧ ಘಟನೆಗಳ ಕುರಿತು ಪೊಲೀಸ್ ಇಲಾಖೆಗೆ ಸಾರ್ವಜನಿಕರು ಮಾಹಿತಿ ನೀಡಿದಲ್ಲಿ ಅತ್ಯುತ್ತಮ ಪೊಲೀಸ್ ಇಲಾಖೆಯ ಸಲಹೆಗಾರ ಹಾಗೂ ಅತ್ಯುತ್ತಮ ಪೊಲೀಸ್ ಇಲಾಖೆಯ ಸ್ನೇಹಿತ ಎನ್ನುವ ಬಹುಮಾನಗಳನ್ನು ನೀಡುವುದಾಗಿ ಡಿವೈಎಸ್ಪಿ ಶಾಂತವೀರ ಪ್ರಕಟಿಸಿದರು.