ಅಭಿವೃದ್ಧಿ ಪರವಿದ್ದರೆ ಜನಪ್ರಿಯತೆ ತಾನಾಗೇ ಬರುತ್ತೆ: ಡೀಸಿ ಡಾ. ರವಿ

| Published : Jan 09 2025, 12:46 AM IST

ಅಭಿವೃದ್ಧಿ ಪರವಿದ್ದರೆ ಜನಪ್ರಿಯತೆ ತಾನಾಗೇ ಬರುತ್ತೆ: ಡೀಸಿ ಡಾ. ರವಿ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಜನರ ಜೊತೆಯಲ್ಲಿರುವ ಅಧಿಕಾರಿ. ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಪತ್ರಕರ್ತರ ಮೇಲಿದೆ. ಪ್ರತಿ ಮಾಹೆ ಜನ ಸಂರ್ಪಕ ಸಭೆ ಅಥವಾ ಪೋನ್ ಇನ್ ಕಾರ್ಯಕ್ರಮ ಪ್ರಾರಂಭಿಸಲಾಗುವುದು, ಕಸಗಳ ವಿಂಗಡನೆ ಹಾಗೂ ಸಂಗ್ರಹಣೆ ಮನೆಗಳಿಂದ ಆರಂಭಿಸಬೇಕು. ಆಗ ಮಾತ್ರ ನಗರದಲ್ಲಿ ಸ್ವಚ್ಛತೆ ಕಾಣಲು ಸಾಧ್ಯ. ತ್ಯಾಜ್ಯ ಘಟಕ ತುರ್ತಾಗಿ ಆಗಬೇಕಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಪತ್ರಿಕಾ ವೃತ್ತಿ ಅಧಿಕಾರವಲ್ಲ, ಸಮಾಜಮುಖಿಯಾಗಿ ಸೇವೆ ಸಲ್ಲಿಸುವ ಹಾಗೂ ಸಮಾಜವನ್ನು ಜಾಗೃತಿಗೊಳಿಸುವ ಜವಾಬ್ದಾರಿಯ ವೃತ್ತಿಯಾಗಿದೆ. ಪತ್ರಿಕಾ ವೃತ್ತಿ ಎಂಬುದು ಜನಪರ ಧ್ವನಿಯಾಗಿ ಅಭಿವೃದ್ಧಿ ಪರ ಮತ್ತು ನ್ಯಾಯ ಸಮ್ಮತವಾಗಿರಬೇಕು ಎಂದು ನೂತನ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನೂತನ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿಯವರಿಗೆ ಏರ್ಪಡಿಸಿದ್ದ ಸ್ವಾಗತ ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲಾಧಿಕಾರಿಯಾಗಿ ಜಿಲ್ಲೆಯ ಅಭಿವೃದ್ಧಿಪರ, ಜನಪರ ಇದ್ದರೆ ಸಾಕು, ಜನಪ್ರಿಯತೆ ತಾನಾಗಿಯೇ ಬರುತ್ತದೆ, ನಾನು ಮಾತಿಗಿಂತ ಕೃತಿಯಲ್ಲಿ ವಿಶ್ವಾಸ ಹೊಂದಿದ್ದೇನೆ. ನಾನು ಸದಾ ಕಾಲ ಜನಸೇವೆಯಲ್ಲಿ ತೊಡಗಿಸಿಕೊಳ್ಳಲು ಸಿದ್ಧನಾಗಿದ್ದೇನೆ. ಯಾವುದೇ ಪೂರ್ವಗ್ರಹ ಪೀಡಿತ ಹವ್ಯಾಸಗಳ ಮನಸ್ಸೂ ನನ್ನದಲ್ಲ, ಕಾನೂನು ಮೀರಿ ಯಾವುದೇ ಒಂದು ಕೆಲಸವನ್ನು ಈ ಜಿಲ್ಲಾಧಿಕಾರಿಯಿಂದ ಮಾಡಿಸಲು ಸಾಧ್ಯವಿಲ್ಲ. ಯಾವುದೇ ಒತ್ತಡಗಳಿಗೂ ನಾನು ಮಣಿಯುವುದಿಲ್ಲ. ಇಂದಿನಿಂದ ಜಿಲ್ಲೆಯ ಆಡಳಿತದಲ್ಲಿ ಹೊಸ ಪರ್ವ ಆರಂಭವಾಗಲಿದೆ ಎಂದು ಭರವಸೆ ನೀಡಿದರು.

ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದನೆ:

ನಾನು ಜನರ ಜೊತೆಯಲ್ಲಿರುವ ಅಧಿಕಾರಿ. ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಪತ್ರಕರ್ತರ ಮೇಲಿದೆ. ಪ್ರತಿ ಮಾಹೆ ಜನ ಸಂರ್ಪಕ ಸಭೆ ಅಥವಾ ಪೋನ್ ಇನ್ ಕಾರ್ಯಕ್ರಮ ಪ್ರಾರಂಭಿಸಲಾಗುವುದು, ಕಸಗಳ ವಿಂಗಡನೆ ಹಾಗೂ ಸಂಗ್ರಹಣೆ ಮನೆಗಳಿಂದ ಆರಂಭಿಸಬೇಕು. ಆಗ ಮಾತ್ರ ನಗರದಲ್ಲಿ ಸ್ವಚ್ಛತೆ ಕಾಣಲು ಸಾಧ್ಯ. ತ್ಯಾಜ್ಯ ಘಟಕ ತುರ್ತಾಗಿ ಆಗಬೇಕಾಗಿದೆ. ಜನಸಂಖ್ಯೆ ಹೆಚ್ಚಳವಾಗಿದ್ದು ರಸ್ತೆಗಳ ವಿಸ್ತರಣೆ ಅಗತ್ಯವಿದ್ದು ಸಾರ್ವಜನಿಕರ ಸಹಕಾರವೂ ಅಗತ್ಯವಿದೆ. ಇದಕ್ಕೆ ಕಾಲಾವಕಾಶವೂ ಬೇಕಾಗಿದೆ. ವಿವಿಧ ಇಲಾಖೆಗಳಲ್ಲಿ ಇರುವ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ ಎಂದು ತಿಳಿಸಿದರು.

ನಗರದಲ್ಲಿ ವಾಹನಗಳ ಸಂಚಾರದ ದಟ್ಟಣೆ ನಿಯಂತ್ರಣಕ್ಕೆ ವರ್ತೂಲ ರಸ್ತೆ ಅವಶ್ಯಕತೆಯಿದ್ದು, ಇದಕ್ಕೆ ಸಂರ್ಪಕ ರಸ್ತೆಗಳು ಕೂಡ ಅಗತ್ಯವಿದೆ. ಜಿಲ್ಲಾ ಕೇಂದ್ರಕ್ಕೆ ಎಲ್ಲಾ ತಾಲೂಕುಗಳ ಸಂರ್ಪಕ ರಸ್ತೆಗಳು ದ್ವಿಪಥ ರಸ್ತೆಗಳ ರೂಪದಲ್ಲಿರಬೇಕಾಗಿದೆ. ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕಾಗಿದೆ. ಸರ್ಕಾರಿ ಕೆರೆ, ಕಾಲುವೆಗಳ ಒತ್ತುವರಿ ನಿಯಂತ್ರಿಸುವಂಥ ಬೆಳವಣಿಗೆ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಕಂದಾಯ ಇಲಾಖೆಯಲ್ಲಿ ಲೋಪದೋಷಗಳನ್ನು ಸರಿಪಡಿಸಿ ದಲ್ಲಾಳಿಗಳ ಹಾವಳಿಗಳನ್ನು ನಿಯಂತ್ರಿಸಲು ಕ್ರಮ ಜರುಗಿಸಲಾಗುವುದು, ಶೀಘ್ರದಲ್ಲೇ ಪೋಡಿ ಅದಾಲತ್ ನಡೆಸಲಾಗುವುದು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಗೈರು ಹಾಜರಾತಿ, ಖಾಸಗಿ ಕ್ಲಿನಿಕ್‌ಗೆ ಆಹ್ವಾನ, ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಲಾಗುವುದು. ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ರಸ್ತೆಗಳ ದುರಸ್ತಿ, ಸಂಚಾರ ವ್ಯವಸ್ಥೆ, ಪಾದಚಾರಿ ಒತ್ತುವರಿ ತೆರವು ಮಾಡಲು ಅಗತ್ಯ ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು. ಸಿ.ಎಸ್.ಆರ್. ಅನುದಾನದ ಸದ್ಬಳಿಕೆಗೆ ಶೀಘ್ರದಲ್ಲೇ ಸಭೆ ನಡೆಸಲಾಗುವುದು, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಸಂವಾದದಲ್ಲಿ ಪತ್ರಕರ್ತರಾದ ಪ್ರಾ.ಶ್ರೀ. ಅನಂತರಾಮ್, ಬಿ.ಸುರೇಶ್, ಓಂಕಾರ ಮೂರ್ತಿ, ಶ್ರೀನಿವಾಸಮೂರ್ತಿ, ಕೆ.ಎಸ್.ಚಂದ್ರಶೇಖರ್, ಕೆ.ಎಸ್.ಸುದರ್ಶನ್, ವಿ.ಮುನಿರಾಜು, ಸಿ.ವಿ.ನಾಗರಾಜ್, ಕೆ.ಬಿ.ಜಗದೀಶ್, ಸಿ.ಜಿ.ಮುರಳಿ, ವೆಂಕಟೇಶ್ ಮಾತನಾಡಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಾಸ್ತಾವಿಕ ನುಡಿಗಳಾಡಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್. ಗಣೇಶ್ ಸಮಗ್ರವಾಗಿ ಜಿಲ್ಲೆಯ ಸಮಸ್ಯೆಗಳನ್ನು ತಿಳಿಸಿದರೆ, ವಿ.ಮುನಿರಾಜು ಅವರು ಪತ್ರಕರ್ತರ ವಸತಿ ಸೌಲಭ್ಯಕ್ಕೆ ನಗರ ವ್ಯಾಪ್ತಿಯಲ್ಲಿ ೧೦ ಎಕರೆ ಭೂಮಿ ಮಂಜೂರು ಮಾಡಲು ಮನವಿ ಮಾಡಿದರು, ಚಂದ್ರಶೇಖರ್ ಸ್ವಾಗತ ಭಾಷಣದೊಂದಿಗೆ ಸುರೇಶ್ ನಿರೂಪಿಸಿದರು.

ಪತ್ರಕರ್ತರು ಸಮಾಜದ ಲೋಪಗಳನ್ನು ಎತ್ತಿಹಿಡಿಯಿರಿ:

ಪತ್ರಕರ್ತ ನಿಸ್ವಾರ್ಥವಾಗಿ ಸಮಾಜದ ಲೋಪದೋಷಗಳನ್ನು ಎತ್ತಿ ಹಿಡಿದು ವ್ಯವಸ್ಥೆ ಸರಿಪಡಿಸಲು ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಪತ್ರಕರ್ತರು ಮತ್ತು ಅಧಿಕಾರಿಗಳು ಸಮಾಜದ ವೈದ್ಯರಂತೆ ಕೆಲಸ ಮಾಡಬೇಕು. ಎಷ್ಟೇ ಅಡೆತಡೆಗಳ ನಡುವೆಯೂ ಅಸಾಧ್ಯವೆಂಬುವುದು ಇಲ್ಲದೆ ಸಾಧ್ಯತೆಯ ವಿಶ್ವಾಸ ಹೊಂದಿರಬೇಕು. ಆಧುನಿಕ ತಂತ್ರಜ್ಞಾನ ಯುಗದ ಸಂಪರ್ಕ ಸೇತುವೆಯಾಗಿ ಸದೃಢ ಸಂಕಲ್ಪದ ಇಚ್ಛಾಶಕ್ತಿ ಹೊಂದಿರಬೇಕೆಂದು ಕಿವಿಮಾತು ಹೇಳಿದರು.

‘ಜಿಲ್ಲಾ ಕೇಂದ್ರದಲ್ಲಿ ಖಾಸಗಿ ಬಡಾವಣೆಗಳು ಅಣಬೆಗಳಂತೆ ತಲೆ ಎತ್ತಿವೆ. ಸಾಮಾನ್ಯ ಬಡ ಜನತೆಗೆ ಸರ್ಕಾರಿ ಬಡಾವಣೆ ನಿರ್ಮಿಸಲು ಕೆಯುಡಿಎ ಆಶ್ರಯ ಇತರೆ ವಸತಿ ಯೋಜನೆಗಳು ಸಹಕಾರಿಯಾಗಬೇಕು. ಈ ಕುರಿತು ಚಿಂತನೆ ನಡೆಸಲಾಗುತ್ತಿದೆ. ಸರ್ಕಾರಿ ಜಮೀನುಗಳು, ನಿವೇಶನಗಳನ್ನು ಕಬಳಿಸುವವರಿಗೆ ಉಳಿಗಾಲವಿಲ್ಲ. ಸರ್ಕಾರದ ಸ್ವತ್ತುಗಳು ಖಾಸಗಿಯವರ ಪಾಲಾಗುತ್ತಿರುವ ದೂರಿನ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.’

ಡಾ.ಎಂ.ಆರ್.ರವಿ,ನೂತನ ಜಿಲ್ಲಾಧಿಕಾರಿ, ಕೋಲಾರ