ನೆಲ, ಜಲ ಕಾಪಾಡುವುದೇ ನಿಜವಾದ ಅಭಿವೃದ್ಧಿ: ರವೀಂದ್ರ ಭಟ್ಟ ಐನಕೈ

| Published : Jan 09 2025, 12:46 AM IST

ಸಾರಾಂಶ

ಜಿಲ್ಲೆಯಲ್ಲಿ ಶುದ್ಧವಾದ ಕನ್ನಡ ಇನ್ನೂ ಜೀವಂತವಾಗಿರುವುದರಿಂದ ಸಾಹಿತ್ಯ ಮತ್ತು ಮಾಧ್ಯಮ ರಂಗದಲ್ಲಿ ಉತ್ತರ ಕನ್ನಡದ ಜನರನ್ನು ಹೆಚ್ಚಾಗಿ ಕಾಣಲು ಸಾಧ್ಯ.

ಸಿದ್ದಾಪುರ: ನಾಡಿನ ಸಂಸ್ಕೃತಿ, ಪರಿಸರ, ನೆಲ, ಜಲ ಕಲುಷಿತಗೊಳ್ಳದಂತೆ ಕಾಪಾಡಿಕೊಳ್ಳುವುದು ನಿಜವಾದ ಅಭಿವೃದ್ಧಿ ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ತಿಳಿಸಿದರು.

ಬುಧವಾರ ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಹಮ್ಮಿಕೊಂಡ ತಾಲೂಕಿನ ೭ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶುದ್ಧವಾದ ಕನ್ನಡ ಇನ್ನೂ ಜೀವಂತವಾಗಿರುವುದರಿಂದ ಸಾಹಿತ್ಯ ಮತ್ತು ಮಾಧ್ಯಮ ರಂಗದಲ್ಲಿ ಉತ್ತರ ಕನ್ನಡದ ಜನರನ್ನು ಹೆಚ್ಚಾಗಿ ಕಾಣಲು ಸಾಧ್ಯ. ಕನ್ನಡ ಹಬ್ಬಕ್ಕೆ ಯಾವುದೇ ಸರ್ಕಾರದ ಅನುದಾನದ ಅವಶ್ಯಕತೆ ಇಲ್ಲ. ಕನ್ನಡಿಗರ ಹೃದಯ ಶ್ರೀಮಂತಿಕೆಯಿಂದ ಇಂತಹ ಹಬ್ಬಗಳು ಯಾವುದೇ ಅನುದಾನ ಇಲ್ಲದಿದ್ದರೂ ವಿಜೃಂಭಣೆಯಿಂದ ನಡೆಯುತ್ತವೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಹೊಸ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಸಾಹಿತಿಗಳ ಪರಿಕಲ್ಪನೆ ಕೇವಲ ಪುಸ್ತಕಗಳಿಗೆ ಸೀಮಿತವಾಗಿರದೇ ಅದು ಭವಿಷ್ಯಕ್ಕೂ ಸಹಕಾರಿ. ಸಾಹಿತ್ಯ ಸಮ್ಮೇಳನಗಳು ಯುವ ಸಾಹಿತಿಗಳ ಪ್ರತಿಭೆ ಅನಾವರಣಗೊಳ್ಳಲು ಉತ್ತಮ ವೇದಿಕೆಯಾಗಿದೆ. ನನ್ನ ಕ್ಷೇತ್ರದಲ್ಲಿರುವ ಗ್ರಾಪಂಗಳ ಗ್ರಂಥಾಲಯಗಳಲ್ಲಿ ಕ್ಷೇತ್ರದ ಸಾಹಿತಿಗಳ ಪುಸ್ತಕ ಇಡಲು ಶಾಸಕರ ನಿಧಿಯಿಂದ ವ್ಯವಸ್ಥೆ ಮಾಡುತ್ತೇನೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ದ್ವಾರಗಳನ್ನು ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಉಪನ್ಯಾಸಕ ಕೆ.ಎ. ಭಟ್‌ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಆರ್.ಕೆ. ಹೊನ್ನೆಗುಂಡಿ ಧ್ವಜ ಹಸ್ತಾಂತರಿಸಿದರು. ವೇದಿಕೆಯಲ್ಲಿ ಸ್ಥಳೀಯ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ, ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ, ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ, ಅಂಕಣಕಾರ ಸುರೇಂದ್ರ ದಫೇದಾರ, ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಸತೀಶ ಹೆಗಡೆ, ಶಿರಸಿ ತಾಲೂಕು ಕಸಾಪ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಇದ್ದರು.

ತಹಸೀಲ್ದಾರ್ ಮತ್ತು ಸ್ವಾಗತ ಸಮಿತಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ ಸ್ವಾಗತಿಸಿದರು. ಕಸಾಪ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳನ್ನಾಡಿದರು. ತಾಲೂಕು ಕಸಾಪ ಖಜಾಂಚಿ ಪಿ.ಬಿ. ಹೊಸೂರ ವಂದಿಸಿದರು.

ಎಂ.ಆರ್. ಭಟ್ಟ ಮತ್ತು ಉಷಾ ಪ್ರಶಾಂತ ನಾಯ್ಕ ನಿರೂಪಿಸಿದರು. ಇದಕ್ಕೂ ಮೊದಲು ಬೆಳಗ್ಗೆ ೮.೩೦ಕ್ಕೆ ಪಟ್ಟಣದ ಜೋಗ ವೃತ್ತದಿಂದ ಆರಂಭಗೊಂಡ ಸಾಂಸ್ಕೃತಿಕ ಮೆರವಣಿಗೆಗೆ ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಚಾಲನೆ ನೀಡಿದರು.

ಭವಿಷ್ಯ ರೂಪುಗೊಳ್ಳಲು ಇತಿಹಾಸ ಅಗತ್ಯ

ಸಮ್ಮೇಳನದ ಸರ್ವಾಧ್ಯಕ್ಷ ಜಿ.ಜಿ. ಹೆಗಡೆ ಮಾತನಾಡಿ, ನಮ್ಮ ತಾಲೂಕಿಗೆ ತನ್ನದೇ ಆದ ಇತಿಹಾಸವಿದೆ. ವರ್ತಮಾನ ಗಟ್ಟಿಗೊಳಿಸಲು, ಭವಿಷ್ಯ ರೂಪುಗೊಳ್ಳಲು ಇತಿಹಾಸ ಅಗತ್ಯ ಎಂದರು.

ಕಾವ್ಯ ಎಂಬುದು ಸಾಹಿತ್ಯದ ಮೊದಲ ಮೆಟ್ಟಿಲು. ಇದರಲ್ಲಿ ಅನುಭವ ಬೆರೆತಾಗ ಉತ್ತಮ ಕವಿತೆ ಹೊರಬರುತ್ತದೆ. ಸಾಧಕರು, ಮೇಧಾವಿಗಳು, ಪಂಡಿತರು ಪಾಂಡಿತ್ಯವನ್ನು ಹೊತ್ತುಕೊಂಡು ಹುಟ್ಟಿದವರಲ್ಲ. ಯಾವುದೇ ಕ್ಷೇತ್ರದಲ್ಲಿ ಸಾಧನೆಗೈಯಬೇಕಾದರೆ ನಿರಂತರ ಪರಿಶ್ರಮ ಅಗತ್ಯ ಎಂದರು.

ಜನಪದ ಕಾವ್ಯಗಳು ಶಿಷ್ಟ ಸಾಹಿತ್ಯದ ಉಗಮಕ್ಕೆ ಮೂಲ. ಎಲ್ಲ ಹಳ್ಳಿಗಳಲ್ಲಿ ನೆಲೆಸಿರುವ ಜಾನಪದ ಸಿರಿ ಶೋಧಿಸಿ, ಸಂಸ್ಕರಿಸಿ ಸಂಗ್ರಹಿಸುವ ಕೆಲಸ ಆಗಬೇಕು. ನಮ್ಮ ಸಾಹಿತ್ಯದ ಬೇರುಗಳು ಜನಪದ ಸಾಹಿತ್ಯದಲ್ಲಿವೆ. ತಾಲೂಕಿನ ಜನರ ನಡೆ- ನುಡಿ, ಆಚಾರ-ವಿಚಾರ ಇವೆಲ್ಲ ಜನಪದದ ಸತ್ವಗಳಾಗಿವೆ.

ಜನಪದ ಸಂಪತ್ತು ನಮ್ಮ ಶ್ರೀಮಂತಿಕೆಯನ್ನು, ವೈವಿಧ್ಯತೆಯನ್ನು ವಿವರಿಸುತ್ತದೆ. ಕನ್ನಡ ಸಾಹಿತ್ಯದಲ್ಲಿಯೂ ಸ್ಪಷ್ಟವಾಗಿ ಎರಡು ಮತಗಳು ಕಂಡುಬರುತ್ತವೆ. ಒಂದು ಶುದ್ಧಕಲೆಯ ಉಪಾಸಕರ ಗುಂಪು. ಕಲೆಗಾಗಿ ಕಲೆ ಎಂದು ಭಾವಿಸುವ ಇವರು ಕಲೆಗೂ ದೈನಂದಿನ ಸಮಸ್ಯೆಗಳಿಗೂ ಏನೂ ಸಂಬಂಧವಿಲ್ಲವೆಂದು ಭಾವಿಸುತ್ತಾರೆ. ಆದರ್ಶವಾದಗಳೇ ಕಲೆಯ ಉಸಿರು ಎಂಬ ಇನ್ನೊಂದು ಗುಂಪು ಸಹ ಇದೆ ಎಂದರು.