ಸಾರಾಂಶ
ವಿವಿಧ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರನ್ನು ಅಲೆದಾಡಿಸಬೇಡಿ. ಕೆಲ ಅಧಿಕಾರಿಗಳು ಆರ್‌ಟಿಐ ಅರ್ಜಿ ಮಾಹಿತಿ ಗೊತ್ತಿದ್ದರೂ ಸಹ ಕೊನೆ ದಿನಾಂಕದವರೆವಿಗೂ ಕಾಯ್ದು ಕುಳಿತುಕೊಳ್ಳದೆ ಆರ್.ಟಿ.ಐ ಅರ್ಜಿಗಳನ್ನು ವಿನಾಕಾರಣ ತಡ ಮಾಡಬೇಡಿ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರೈತರು ಹಾಗೂ ಸಾರ್ವಜನಿಕರನ್ನು ಕಚೇರಿಗೆ ಅಲೆಸದೆ ಅವರ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಲೋಕಾಯುಕ್ತ ಎಸ್ಪಿ ಎಸ್.ಸುರೇಶ್ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ವಿವಿಧ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರನ್ನು ಅಲೆದಾಡಿಸಬೇಡಿ. ಕೆಲ ಅಧಿಕಾರಿಗಳು ಆರ್‌ಟಿಐ ಅರ್ಜಿ ಮಾಹಿತಿ ಗೊತ್ತಿದ್ದರೂ ಸಹ ಕೊನೆ ದಿನಾಂಕದವರೆವಿಗೂ ಕಾಯ್ದು ಕುಳಿತುಕೊಳ್ಳದೆ ಆರ್.ಟಿ.ಐ ಅರ್ಜಿಗಳನ್ನು ವಿನಾಕಾರಣ ತಡ ಮಾಡಬೇಡಿ ಎಂದರು.
ತಮ್ಮ ಕಚೇರಿಗಳಲ್ಲಿ ಕೆಲಸವಾಗದಿದ್ದಲ್ಲಿ ಹಿಂಬರಹದೊಂದಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಕಚೇರಿಗೆ ನಿಗಧಿತ ಸಮಯಕ್ಕೆ ಆಗಮಿಸಿ ಸಾರ್ವಜನಿಕರ ಕೆಲಸಗಳನ್ನು ಪಾರದರ್ಶಕವಾಗಿ ನಿರ್ವಹಿಸುವಂತೆ ಹೇಳಿದರು.ಬಹುತೇಕ ಅಧಿಕಾರಿಗಳು ಹಾಜರಾತಿ ಪುಸ್ತಕವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕೆಲಸಕ್ಕೆ ಬರುವ ವೇಳೆ ಹಾಗೂ ಕೆಲಸ ನಿಮಿತ್ತ ಹೊರ ಹೋಗುವ ಮತ್ತು ಹಿಂದಿರುಗುವ ಸಮಯವನ್ನು ಹಾಜರಾತಿ ಪುಸ್ತಕದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದರು.
ಸಭೆಗೆ ಹಾಜರಾಗದ ಇಲಾಖಾವಾರು ಅಧಿಕಾರಿಗಳಿಗೆ ವಿಶೇಷ ನೋಟಿಸ್ ನೀಡುವಂತೆ ತಿಳಿಸಿದ ಅವರು ತಡವಾಗಿ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಇದೇ ವೇಳೆ ಸಾರ್ವಜನಿಕರಿಂದ ಪುರಸಭೆ ಇಲಾಖೆಗೆ 3, ತಹಸೀಲ್ದಾರ್ 16, ಎಡಿಎಲ್‌ಆರ್ 1, ಉಪವಿಭಾಗಾಧಿಕಾರಿ 1, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೇರಿದ 1 ಅರ್ಜಿ ಸೇರಿದಂತೆ ಖಾತೆ, ದುರಸ್ಥಿ, ಒತ್ತುವರಿ, ಪೌತಿಖಾತೆ, ಫೋರ್ಜರಿ, ವಿಳಂಬ ಒಟ್ಟು 22 ದೂರುಗಳು ವಿವಿಧ ಇಲಾಖೆಗಳ ವಿರುದ್ದ ದಾಖಲುಗೊಂಡವು.
ಸಭೆಯಲ್ಲಿ ಲೋಕಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್, ಪೊಲೀಸ್ ನಿರೀಕ್ಷಕರಾದ ಆರ್.ಎಂ.ಮೋಹನ್ ರೆಡ್ಡಿ, ಎಂ.ಜಯರತ್ನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.