3045 ಎಕರೆ ಅರಣ್ಯ ಒತ್ತುವರಿ ಮಾಡಿದ್ದರೆ ಎಫ್‌ಐಆರ್‌ ದಾಖಲಿಸಿ

| Published : Jan 09 2025, 12:46 AM IST

3045 ಎಕರೆ ಅರಣ್ಯ ಒತ್ತುವರಿ ಮಾಡಿದ್ದರೆ ಎಫ್‌ಐಆರ್‌ ದಾಖಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆಯಲ್ಲಿ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು, ಓಂಕಾರ, ಗುಂಡ್ಲುಪೇಟೆ ಬಫರ್‌ ಜೋನ್‌ ವಲಯದಲ್ಲಿ ೩೦೪೫ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಒತ್ತುವರಿದಾರರ ಮೇಲೆ ಎಫ್‌ಐಆರ್‌ ದಾಖಲಿಸಿ, ಒತ್ತುವರಿ ತೆರವುಗೊಳಿಸಿ ಎಂದು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಅರಣ್ಯ ಒತ್ತುವರಿಯಾಗಿದೆ. ಕೆಲವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಉಳಿದವರ ಮೇಲೆ ಎಫ್‌ಐಆರ್‌ ಏಕೆ ಆಗಿಲ್ಲ ಎಂದು ಸಭೆಯಲ್ಲಿ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ೩೦೪೫ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದರೆ ಕೇಸು ದಾಖಲಿಸಿ ಎಂದರು.

ಓಂಕಾರ ವಲಯದಲ್ಲಿ ೨೬೦೫ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ೭೬೨ ಪ್ರಕರಣದಲ್ಲಿ ೧೦೯ ಎಫ್‌ಐಆರ್‌ ದಾಖಲಾಗಿದೆ. ಮದ್ದೂರು ವಲಯದಲ್ಲಿ ೩೨೧ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ೧೧೩ ಪ್ರಕರಣದಲ್ಲಿ ೪೦ ಎಫ್‌ಐಆರ್‌ ದಾಖಲಾಗಿದೆ. ಗುಂಡ್ಲುಪೇಟೆ ಬಫರ್‌ ಜೋನ್‌ ವಲಯದಲ್ಲಿ ೪೫ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ೨೩ ಪ್ರಕರಣದಲ್ಲಿ ೧೪ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇನ್ನೂಳಿದ ೩೦೪೫ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದರೆ ಕೂಡಲೇ ಎಫ್‌ಐಆರ್‌ ದಾಖಲಿಸಿ, ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ ಎಂದರು.

ರದ್ದು ಪಡಿಸಲು ಆಗ್ರಹ:

ತಾಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಸ್ಸಿ, ಎಸ್ಟಿಗೆ ಸದಸ್ಯತ್ವ ನೀಡದೇ ಚುನಾವಣೆ ನಡೆಸಿದ್ದಾರೆ. ಇದು ಸರಿಯಲ್ಲ, ಕೃಷಿಕ ಸಮಾಜ ಆಡಳಿತ ಮಂಡಳಿ ರದ್ದು ಪಡಿಸಿ ಎಂದು ದಲಿತ ಮುಖಂಡರು ಆಗ್ರಹಿಸಿದರು. ಕೃಷಿ ಸಹಾಯಕ ನಿರ್ದೇಶಕ ಶಶಿಧರ್‌ ಮಾತನಾಡಿ, ಕೃಷಿಕ ಸಮಾಜದ ಬೈಲಾದಲ್ಲಿ ಎಸ್ಸಿ, ಎಸ್ಟಿ ಸಮುದಾಯದವರಿಗೆ ಮೀಸಲಾತಿ ನಮೂದಿಸಿಲ್ಲ. ರದ್ದು ಪಡಿಸುವ ಆಯ್ಕೆ ನಮಗೆ ಬರುವುದಿಲ್ಲ ಎಂದರು.

ಭ್ರಚ್ಟಾಚಾರ:

ಹಂಗಳ ರೈತಸಂಪರ್ಕ ಕೇಂದ್ರದಲ್ಲಿ ಹೊರ ಗುತ್ತಿಗೆ ನೌಕರರು ನಕಲಿ ಬಿಲ್ಲು ನೀಡುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಸಭೆಯಲ್ಲಿದ್ದ ಮುಖಂಡರು ಆರೋಪಿಸಿದರು. ಅಂಬೇಡ್ಕರ್‌ ಪರಿ ನಿರ್ವಾಣದ ದಿನಾಚರಣೆಯಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ದಲಿತ ಮುಖಂಡರೊಬ್ಬರನ್ನು ಗದರಿದ ಪ್ರಕರಣ ಸಂಬಂಧ ಕೆಲ ಕಾಲ ವಾದ, ವಿವಾದ ಚರ್ಚೆ ನಡೆಯಿತು.

ಸಭೆಯಲ್ಲಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಷಣ್ಮುಖ, ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ, ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್.ಪರಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ್‌ ಕುಮಾರ್‌ ಸೇರಿದಂತೆ ದಲಿತ ಮುಖಂಡರು ಇದ್ದರು.