ದುಶ್ಚಟಗಳಿಂದ ದೂರವಿದ್ದರೆ ಕ್ಯಾನ್ಸರ್‌ ಸುಳಿಯದು: ಡಾ.ಸತ್ಯಪ್ರಕಾಶ್‌

| Published : Feb 10 2024, 01:49 AM IST / Updated: Feb 10 2024, 02:38 PM IST

ದುಶ್ಚಟಗಳಿಂದ ದೂರವಿದ್ದರೆ ಕ್ಯಾನ್ಸರ್‌ ಸುಳಿಯದು: ಡಾ.ಸತ್ಯಪ್ರಕಾಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು ನಗರಸಭೆಯಲ್ಲಿ ಶುಕ್ರವಾರ ಉಚಿತ ದಂತ ಆರೋಗ್ಯ ತಪಾಸಣೆ ಮತ್ತು ಬಾಯಿ ಕ್ಯಾನ್ಸರ್‌ ಜಾಗೃತಿ ಶಿಬಿರ ನಡೆಯಿತು. ಡಾ.ಸತ್ಯಪ್ರಕಾಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು 

ಕ್ಯಾನ್ಸರ್ ರೋಗದ ಬಗ್ಗೆ ಆರೋಗ್ಯ ಪರೀಕ್ಷಾ ಶಿಬಿರಗಳನ್ನು ಪರಿಣಾಮಕಾರಿಯಾಗಿ ಮಾಡುವ ಮೂಲಕ ಜನ ಜಾಗೃತಿ ಮೂಡಿಸುವಂತಾದಾಗ ಮಾತ್ರ ಕ್ಯಾನ್ಸರ್‌ ರೋಗವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯ ಎಂದು ಮೈಸೂರು ವಿಭಾಗೀಯ ನೋಡಲ್ ಅಧಿಕಾರಿ ಡಾ.ಸತ್ಯಪ್ರಕಾಶ್ ಅವರು ಹೇಳಿದರು.

ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ ಮತ್ತು ದಂತ ಭಾಗ್ಯ ಯೋಜನೆ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್.ಸಿ.ಡಿ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಜಿಲ್ಲಾಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರಸಭೆಯಲ್ಲಿ ಏರ್ಪಡಿಸಲಾಗಿದ್ದ ಸ್ವಚ್ಛತಾ ಪೌರ ಕಾರ್ಮಿಕ ಸಿಬಂದಿಗಳಿಗೆ, ನಗರಸಭಾ ಸದಸ್ಯರಿಗೆ ಮತ್ತು ನಾಗರಿಕರಿಗೆ ಉಚಿತ ದಂತ ಆರೋಗ್ಯ ತಪಾಸಣೆ ಮತ್ತು ಬಾಯಿ ಕ್ಯಾನ್ಸರ್‌ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆಂದಿಗಿಂತಲೂ ಇತ್ತೀಚೆಗೆ ಯುವಕರಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಯುವಕರು ತಮ್ಮ ದುಶ್ಚಟಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಾಗ ಕ್ಯಾನ್ಸರ್‌ ರೋಗ ತಡೆಗಟ್ಟಬಹುದು ಎಂದರಲ್ಲದೆ, ಕ್ಯಾನ್ಸರ್ ರೋಗಿಗಳನ್ನು ತಪಾಸಣೆಗೊಳಪಡಿಸಿ, ಕಾಯಿಲೆ ಪತ್ತೆಯಾದ ತಕ್ಷಣ ಸೂಕ್ತ ಚಿಕಿತ್ಸೆ ನೀಡಬೇಕೆಂಬುದು ಈ ಶಿಬಿರದ ಪ್ರಮುಖ ಉದ್ದೇಶ ಎಂದು ಹೇಳಿದರು. 

ಮುಖ್ಯ ದಂತ ಆರೋಗ್ಯಾಧಿಕಾರಿ ಡಾ. ಶರ್ಮಿಳಾ ಪ್ರಾಸ್ತಾವಿಕವಾಗಿ ಮಾತನಾಡಿ, ಸಮತೋಲನ ಆಹಾರ ಸೇವನೆ, ವ್ಯಾಯಾಮ ಮಾಡುವುದು, ತೂಕ ನಿಯಂತ್ರಣ ಮಾಡುವುದರೊಂದಿಗೆ, ಧೂಮಪಾನ ಮದ್ಯಪಾನ ಮುಂತಾದವುಗಳಿಂದ ದೂರ ಇರುವುದು ಕ್ಯಾನ್ಸರ್‌ ತಡೆಗೆ ಪ್ರಮುಖ ಅಂಶಗಳಾಗಿವೆ ಎಂದರು. 

ಕ್ಯಾನ್ಸರ್‌ ಪ್ರತಿಯೊಬ್ಬರನ್ನೂ ಬೆಚ್ಚಿ ಬೀಳಿಸುವ ಕಾಯಿಲೆಯಾಗಿದ್ದು, ಇದು, ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗದೇ ಅವನ ಕುಟುಂಬವನ್ನು ಆವರಿಸುವ ಮಹಾಮಾರಿಯಾಗಿದ್ದು, ಆರೋಗ್ಯ ಕುಂದಿಸುವ ಕಾಯಿಲೆಯಾಗಿದೆ ಎಂದು ವಿಷಾದಿಸಿದರು. ಈ ನಿಟ್ಟಿನಲ್ಲಿ ವಿಶ್ವದಾದ್ಯಂತ ಕ್ಯಾನ್ಸರ್ ನಿಯಂತ್ರಣ ಸಂಸ್ಥೆಗಳು 1993ರಲ್ಲಿ ಜಿನೀವಾದಲ್ಲಿ ಕ್ಯಾನ್ಸರ್ ದಿನಾಚರಣೆ ಆಚರಿಸುವ ಮೂಲಕ ಜಾರಿಗೆ ತರಲಾಯಿತು. 

ಪ್ರತಿ ವರ್ಷ ಫೆ.4 ರಂದು ವಿಶ್ವ ಕ್ಯಾನ್ಸರ್‌ ಜಾಗೃತಿ ಶಿಬಿರವನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ವರ್ಷ ಆರೈಕೆ ಅಂತರಗೊಳ್ಳುವುದು ಎಂಬ ಘೋಷವಾಕ್ಯದೊಂದಿಗೆ ಜನಜಾಗೃತಿ ನಡೆಸಲಾಗುತ್ತಿದೆ. ವೈದ್ಯಕೀಯ ವ್ಯವಸ್ಥೆ ಇಂದು ವೈಜ್ಞಾನಿಕವಾಗಿ ಮುಂದುವರೆದಿರುವುದರಿಂದ ಈ ಭಯಾನಕ ಕ್ಯಾನ್ಸರ್‌ ರೋಗವನ್ನು ಗುಣಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. 

ಕ್ಯಾನ್ಸರ್‌ ರೋಗದಲ್ಲಿ ಮೂರು ಹಂತವಿದ್ದು, ರೋಗಿ ಮೊದಲ ಎರಡು ಹಂತದ ಒಳಗೆ ಇದ್ದರೆ ಸಂಪೂರ್ಣ ಗುಣಪಡಿಸಬಹುದಾಗಿದೆ. ಇದರಿಂದ ಭಯಪಡುವ ಅಗತ್ಯ ಇಲ್ಲ. ಜೊತೆಗೆ ಮುಂದೆ ಒಳ್ಳೆಯ ಆರೋಗ್ಯವಂತ ಜೀವನ ನಡೆಸಲು ಸಹಕಾರಿಯಾಗಿದ್ದು, ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು. 

ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಕ್ಯಾನ್ಸರ್ ಪೀಡಿತ ರೋಗಿಗಳು ವೈದ್ಯರು ಸೂಚಿಸುವ ಔಷಧಿಗಳನ್ನು ಸೂಕ್ತ ಸಮಯದಲ್ಲಿ ಬಳಸುವ ಮೂಲಕ ಆರೋಗ್ಯವಂತ ಜೀವನ ನಡೆಸಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಬಿಪಿ, ಸಕ್ಕರೆ ಕಾಯಿಲೆ ಕುರಿತು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಮಾರಣಾಂತಿಕ ಕಾಯಿಲೆಗಳನ್ನು ತಡೆಗಟ್ಟಲು ಪ್ರತಿ ಮೂರು ತಿಂಗಳಿಗೊಮ್ಮೆ ನಗರಸಭೆ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆಉಪಾಧ್ಯಕ್ಷ ಅಮೃತೇಶ್‌ ಚನ್ನಕೇಶವ, ನಗರಸಭೆ ಸದಸ್ಯರಾದ ಲಕ್ಷ್ಮಣ, ಗುರುಮಲ್ಲಪ್ಪ, ಜಾವಿದ್, ಪರಮೇಶ್ವರ್, ಹಿರಿಯ ದಂತ ಆರೋಗ್ಯಾಧಿಕಾರಿ ಹಾಗೂ ನೋಡಲ್‌ ಅಧಿಕಾರಿ ಡಾ. ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ. ಸೀಮಾ, ಡಾ. ಗಾನವಿ, ಡಾ. ರೀಟಾ ಜಾಸ್ಮಿನ್ ಮೆನಿಂಜಸ್, ಡಾ. ಭಾಗ್ಯಲಕ್ಷ್ಮಿ, ಡಾ. ಪ್ರಣೀತ, ಡಾ. ದೀಪಕ್‌ ಕಾಮತ್, ಪ್ರಸಾದ್ ಹಾಗೂ ಬಾಲಾಜಿ ಉಪಸ್ಥಿತರಿದ್ದರು. ಜಲಜಾಕ್ಷಿ ಸ್ವಾಗತಿಸಿ, ಲಲಿತ ನಿರೂಪಿಸಿ, ವೆಂಕಟೇಶ್ ವಂದಿಸಿದರು.