ಶ್ರೀರಂಗಪಟ್ಟಣ ತಾಲೂಕು ಹುಲಿಕೆರೆ ಗ್ರಾಮದ ನರಸಮ್ಮ ಎಂಬುವರಿಗೆ ಸೇರಿದ ಸರ್ವೇ ನಂ. ೭೪/೧ರ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಗ್ರಾಮದ ಜಗದೀಶ್ ಎಂಬುವರಿಗೆ ಅವರ ಪೂರ್ವಜರ ಹೆಸರಿನಲ್ಲಿರುವ ಖಾತೆಗೆ ನಕಲಿಯಾಗಿ ಬೇರೆ ನರಸಮ್ಮನ ಹೆಸರಿಗೆ ಖಾತೆ ಸೃಷ್ಟಿಸಿ ಅಕ್ರಮವಾಗಿ ಖಾತೆ ಮಾಡುವ ಹುನ್ನಾರ ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಕಲಿ ದಾಖಲೆ ಸೃಷ್ಟಿಸಿ ಬಡ ರೈತರ ಜಮೀನನ್ನು ಭೂಗಳ್ಳರಿಗೆ ಅಕ್ರಮವಾಗಿ ಖಾತೆ ಮಾಡುತ್ತಿರುವ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶ್ರೀರಂಗಪಟ್ಟಣ ತಾಲೂಕು ಹುಲಿಕೆರೆ ಗ್ರಾಮಸ್ಥರು ನಗರದಲ್ಲಿ ಪ್ರತಿಭಟನೆ ನಡೆಸಿದರು.ಗ್ರಾಮದಿಂದ ವಾಹನಗಳಲ್ಲಿ ಆಗಮಿಸಿದ್ದ ರೈತರು, ಜಿಲ್ಲಾಧಿಕಾರಿ ಕಚೇರಿ ಬಳಿ ಸೇರೊ ಭ್ರಷ್ಟ ಅಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಡ ರೈತರ ಜಮೀನನ್ನು ಭೂಗಳ್ಳರಿಗೆ ಅಕ್ರಮವಾಗಿ ಗ್ರಾಮ ಲೆಕ್ಕಾಧಿಕಾರಿ ರಘು ಖಾತೆ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಶ್ರೀರಂಗಪಟ್ಟಣ ತಾಲೂಕು ಹುಲಿಕೆರೆ ಗ್ರಾಮದ ನರಸಮ್ಮ ಎಂಬುವರಿಗೆ ಸೇರಿದ ಸರ್ವೇ ನಂ. ೭೪/೧ರ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಗ್ರಾಮದ ಜಗದೀಶ್ ಎಂಬುವರಿಗೆ ಅವರ ಪೂರ್ವಜರ ಹೆಸರಿನಲ್ಲಿರುವ ಖಾತೆಗೆ ನಕಲಿಯಾಗಿ ಬೇರೆ ನರಸಮ್ಮನ ಹೆಸರಿಗೆ ಖಾತೆ ಸೃಷ್ಟಿಸಿ ಅಕ್ರಮವಾಗಿ ಖಾತೆ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು.ಗ್ರಾಮದ ಹಲವಾರು ಮಂದಿ ಬಡ ರೈತರ ಜಮೀನನ್ನು ಅಕ್ರಮವಾಗಿ ಬೇರೆ ಬೇರೆಯವರ ಹೆಸರಿಗೆ ಖಾತೆ ಮಾಡಿರುವ ಅಧಿಕಾರಿ ರಘು ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಈತನನ್ನು ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಗ್ರಾಮ ಲೆಕ್ಕಾಧಿಕಾರಿ ರಘು ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಆದರೂ ಸ್ಥಳ ಬಿಟ್ಟುಕೊಡದ ರಘು ಅದೇ ಹುದ್ದೆಯಲ್ಲಿ ಮುಂದುವರಿಯುವ ಮೂಲಕ ಮತ್ತಷ್ಟು ಅಕ್ರಮಗಳನ್ನು ಎಸಗುತ್ತಿದ್ದಾರೆ ಎಂದು ಆರೋಪಿಸಿ ಅಪರ ಜಿಲ್ಲಾಕಾರಿ ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅವರು ತಕ್ಷಣ ಉಪ ವಿಭಾಗಾಧಿಕಾರಿ, ತಹಸೀಲ್ದಾರ್, ಪಿಡಿಒಗೆ ದೂರವಾಣಿ ಕರೆ ಮಾಡಿ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಹುಲಿಕೆರೆ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಚಲುವರಾಜು, ಮುಖಂಡರಾದ ಜಗದೀಶ್, ಚೈತ್ರಾ ಸೇರಿದಂತೆ ಗ್ರಾಮದ ೫೦ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.