ಸಾರಾಂಶ
ಅರಣ್ಯದಂಚಿನಲ್ಲಿರುವ ಈ ಕೆರೆ ಏನಾದರೂ ಖಾಲಿಯಾದರೆ ಪ್ರಾಣಿ ಪಕ್ಷಿಗಳಿಗೂ ಕೂಡ ಕುಡಿಯಲು ನೀರಿಲ್ಲಂತಾಗಿ ತೊಂದರೆ ಅನುಭವಿಸಬೇಕಾಗುತ್ತದೆ, ಹಾಗಾಗಿ ತಕ್ಷಣ ಈ ಬಗ್ಗೆ ಸಂಬಂಧಿಸಿ ಅಧಿಕಾರಿಗಳು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹ
ಮುಂಡಗೋಡ:
ತಾಲೂಕಿನ ಮಳಗಿ ಗ್ರಾಪಂ ವ್ಯಾಪ್ತಿಯ ಜನಗೇರಿ ಸರ್ವೇ ನಂ.೩೫ ರಲ್ಲಿರುವ ಶೆಟ್ಟರ ಕೆರೆಗೆ ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿ ತೋಟ, ಗದ್ದೆ ಹಾಗೂ ವಾಣಿಜ್ಯ ಉತ್ಪನ್ನಗಳಿಗೆ ನೀರು ಬಳಸಿಕೊಳ್ಳುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಗ್ರಾಪಂ ಸದಸ್ಯೆಯೊಬ್ಬರ ಪತಿಯೇ ಈ ರೀತಿ ಅಕ್ರಮವಾಗಿ ಪಂಪ್ ಸೆಟ್ ಮೂಲಕ ಕೆರೆಯ ನೀರು ಬಳಸಿಕೊಳ್ಳುತ್ತಿರುವುದು ಎನ್ನಲಾಗಿದ್ದು, ಜನಪ್ರತಿನಿಧಿಯಾಗಿ ಜವಾಬ್ದಾರಿ ಸ್ಥಾನದಲ್ಲಿರುವವರ ಕುಟುಂಬಸ್ಥರೇ ಇಂತಹ ಕೆಲಸ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಬಾರಿ ಮಳೆಯ ಕೊರತೆಯಿಂದ ಅಂತರ್ಜಲ ಕ್ಷೀಣಿಸಿದ್ದು, ಬೇಸಿಗೆ ಪ್ರಾರಂಭವಾಗುವ ಪೂರ್ವದಲ್ಲಿಯೇ ಕುಡಿವ ನೀರಿಗೆ ಆಹಾರ ಏರ್ಪಡುತ್ತಿದೆ. ಇಂತಹ ಸಂದರ್ಭದಲ್ಲಿ ಅರಣ್ಯದಂಚಿನಲ್ಲಿರುವ ಈ ಕೆರೆಗೆ ಪಂಪ್ ಸೆಟ್ ಅಳವಡಿಸಿ ನೀರು ಉಪಯೋಗಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಕೆರೆಯ ನೀರು ಅರ್ಧದಷ್ಟು ಖಾಲಿಯಾಗಿದ್ದು, ಇದೇ ರೀತಿ ನೀರು ಉಪಯೋಗಿಸಿಕೊಂಡರೆ ಕೆಲವೇ ದಿನಗಳಲ್ಲಿ ಕೆರೆ ಸಂಪೂರ್ಣ ಖಾಲಿಯಾಗುವ ಸಾಧ್ಯತೆ ಇದೆ.ಅರಣ್ಯದಂಚಿನಲ್ಲಿರುವ ಈ ಕೆರೆ ಏನಾದರೂ ಖಾಲಿಯಾದರೆ ಪ್ರಾಣಿ ಪಕ್ಷಿಗಳಿಗೂ ಕೂಡ ಕುಡಿಯಲು ನೀರಿಲ್ಲಂತಾಗಿ ತೊಂದರೆ ಅನುಭವಿಸಬೇಕಾಗುತ್ತದೆ, ಹಾಗಾಗಿ ತಕ್ಷಣ ಈ ಬಗ್ಗೆ ಸಂಬಂಧಿಸಿ ಅಧಿಕಾರಿಗಳು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸರ್ಕಾರಕ್ಕೆ ಸಂಬಂಧಿಸಿದ ಕೆರೆಗಳಲ್ಲಿ ಅಕ್ರಮವಾಗಿ ಪಂಪ್ ಅಳವಡಿಸಿ ನೀರು ಪಡೆಯಲು ಅವಕಾಶವಿಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು ಎಂದು ತಹಸೀಲ್ದಾರ್ ಶಂಕರ್ ಗೌಡಿ ಹೇಳಿದ್ದಾರೆ.