ಸಾರಾಂಶ
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಶೀಘ್ರ ಕಾರ್ಯಾನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಮಂಗಳವಾರ ಕರೆ ನೀಡಿದ್ದ ಚಿತ್ರದುರ್ಗ ಬಂದ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ನೀರಾವರಿಗಾಗಿ ಕಳೆದ 10 ವರ್ಷಗಳ ನಂತರ ನಡೆದ ಬಂದ್ ಇದಾಗಿದ್ದು ವರ್ತಕರು, ನಾಗರಿಕರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡಿದ್ದರು.
ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಹುತೇಕ ಶಾಲೆ ಮತ್ತು ಕಾಲೇಜುಗಳು ವಿದ್ಯಾರ್ಥಿಗಳು ಬಾರದ ಹಿನ್ನಲೆ ಬಂದ್ ಬಿಸಿಗೆ ಒಳಗಾಗಿದ್ದರು. ಚಿತ್ರಮಂದಿರ, ಹೋಟೆಲ್‌ಗಳು ಮುಚ್ಚಿದ್ದವು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ಗಳು ಊರು ಪ್ರವೇಶಿಸದೆ ಹೆದ್ದಾರಿಯಲ್ಲಿ ಸಂಚರಿಸಿದವು. ಆಟೋಗಳ ಸಂಚಾರ ವಿರಳವಾಗಿತ್ತು. ಬಂದ್ ಹಿನ್ನಲೆ ಪ್ರಯಾಣಿಕರು, ನಾಗರಿಕರು ಪರದಾಡಿದರು. ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿತ್ತು. ಬಂದ್ ಹಿನ್ನಲೆ ಚಿತ್ರದುರ್ಗ ಪ್ರವೇಶಿಸುವ 7 ಮಾರ್ಗಗಳಲ್ಲಿ ಪ್ರತಿಭಟನಾಕಾರರು ರಸ್ತೆ ಮೇಲೆ ಕುಳಿತಿದ್ದರಿಂದ ವಾಹನಗಳು ನಗರ ಪ್ರವೇಶಿಸಲಿಲ್ಲ. ಬೆಳಗ್ಗೆ 6.30 ಆರಂಭವಾದ ಬಂದ್ ಸಂಜೆ 5ರವರೆಗೂ ನಡೆಯಿತು. ಇತ್ತೀಚೆಗಿನ ವರ್ಷಗಳಲ್ಲಿ ಇಷ್ಟೊಂದು ಸುದೀರ್ಘ ಬಂದ್‌ಗೆ ಚಿತ್ರದುರ್ಗ ಒಳಪಟ್ಟಿರಲಿಲ್ಲ.ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಕೆಪಿಸಿಸಿ ಕಾರ್ಯದರ್ಶಿ ನೇರಲಗುಂಟೆ ರಾಮಪ್ಪ, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಫೀರ್, ಮಹಿಳಾ ಘಟಕದ ಅಧ್ಯಕ್ಷ ಗೀತಾ ನಂದಿನಿಗೌಡ, ಜಾತ್ಯತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಪ್ರತಿಭಟನಾ ಸಭೆಗಳಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆವರೆಗೂ ಗಾಂಧಿ ವೃತ್ತದಲ್ಲಿ ಸಭೆ ನಡೆಸಿದ ಸಂಘಟನೆಗಳು ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಮುಗಿಸುವಂತೆ ಒತ್ತಾಯಿಸಿದವು. ನಂತರ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಮಾರ್ಗದ ಮಧ್ಯೆ ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ರಘುಮೂರ್ತಿ ಮುಂದಿನ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಹೆಚ್ಚಿನ ಅನುದಾನ ಕಾಯ್ದಿರಿಸಲು ಸಿಎಂ ಮೇಲೆ ಒತ್ತಡ ಹಾಕಲಾಗುವುದು. ಅಬ್ಬಿನಹೊಳಲು ಭೂ ಸ್ವಾಧೀನ ಸಮಸ್ಯೆಯ ಬಗೆ ಹರಿಸಿ 3 ತಿಂಗಳಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗುವುದೆಂದರು.ಕೇಂದ್ರ ಹಾಗೂ ರಾಜ್ಯದ ನಡೆಗೆ ಖಂಡನೆ:
ಭದ್ರಾ ಮೇಲ್ದಂಡೆ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉದಾಸೀನ ಮನೋಭಾವದಿಂದಾಗಿ ನೆನೆಗುದಿಗೆ ಬಿದ್ದಿದ್ದು, ಕಾಮಗಾರಿ ಆರಂಭವಾಗಿ 23 ವರ್ಷ ಕಳೆದಿದ್ದರೂ ಯೋಜನೆ ನಿಧಾನಗತಿಯಲ್ಲಿ ಸಾಗಿರುವುದು ರೈತಾಪಿ ಸಮುದಾಯದಲ್ಲಿ ಕಳವಳ ಮೂಡಿಸಿದೆ. ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಸಮುದಾಯ ಅಪಾರ ಪ್ರಮಾಣದಲ್ಲಿದೆ. ಪರಿಶಿಷ್ಟ ಸಮುದಾಯಕ್ಕೆ 2 ಮೀಸಲು ಕ್ಷೇತ್ರ, ಪರಿಶಿಷ್ಟ ಪಂಗಡಕ್ಕೆ 3 ಮೀಸಲು ಹಾಗೂ ಒಂದು ಲೋಕಸಭೆ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಶೋಷಿತರ ಭದ್ರ ನೆಲೆಯಾಗಿರುವ ಪ್ರದೇಶಕ್ಕೆ ನೀರಾವರಿ ಜಾರಿ ವಿಚಾರದಲ್ಲಿ ಸರ್ಕಾರ ತಳೆದಿರುವ ನಿಲುವುಗಳು ನಿಜಕ್ಕೂ ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಭದ್ರಾ ಮೇಲ್ದಂಡೆ ಹಳೇ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ಸರಿ ಸುಮಾರು 3 ಸಾವಿರ ಕೋಟಿ ರು. ಬಾಕಿ ಕೊಡಬೇಕಾಗಿದೆ. ಈ ಮೊತ್ತ ಪಾವತಿಸದ ಹೊರತು ಗುತ್ತಿಗೆದಾರರು ಕಾಲಮಿತಿಯೊಳಗೆ ಕಾಮಗಾರಿ ಮುಗಿಸುವುದು ಕಷ್ಟ. ಮುಖ್ಯಮಂತ್ರಿ ಸಿದ್ದರಾಮಯ್ಯ ಭದ್ರಾ ಮೇಲ್ದಂಡೆಗೆ 2700 ಕೋಟಿ ರು. ಅನುದಾನ ಈ ವರ್ಷ ಒದಗಿಸುವುದಾಗಿ ಹೇಳಿ ಕೇವಲ 1200 ಕೋಟಿ ರು. ನೀಡಿದ್ದಾರೆ. ಇನ್ನೂ 1500 ಕೋಟಿ ರು. ಪ್ರಸ್ತಾಪವಿಲ್ಲ.
ಭದ್ರಾ ಮೇಲ್ಡಂಡೆ ರಾಷ್ಟ್ರೀಯ ಯೋಜನೆ ಎಂದು ಶಿಫಾರಸು ಮಾಡಿ ಸುಮಾರು 5300 ಕೋಟಿ ರು. ಅನುದಾನವ ಕಳೆದ ಬಜೆಟ್‌ನಲ್ಲಿ ಮೀಸಲಿರಿಸಿದ್ದು, ಇದುವರೆಗೂ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಕೇಂದ್ರದ ಮೇಲೆ ರಾಜ್ಯ ಹಾಗೂ ರಾಜ್ಯದ ಮೇಲೆ ಕೇಂದ್ರ ಸರ್ಕಾರ ಆರೋಪಿಸುತ್ತ ಕಾಲ ಹರಣ ಮಾಡುತ್ತಿದೆ. ಇವರಿಬ್ಬರ ನಡುವೆ ಭದ್ರಾ ಮೇಲ್ದಂಡೆ ಸೊರಗಿದೆ. ಸರ್ಕಾರಗಳು ಜನಕಲ್ಯಾಣ ಮರೆತಿವೆ ಎಂದು ಆರೋಪಿಸಿದರು.ಕೇಂದ್ರದ ಅನುದಾನ ಕಾಯ್ದೆ ರಾಜ್ಯ ಸರ್ಕಾರ ಕಾಮಗಾರಿಗೆ ಚುರುಕಿನ ವೇಗ ನೀಡಬೇಕು. ಕೇಂದ್ರ ಎತ್ತಿರುವ ತಾಂತ್ರಿಕ ಸಮಸ್ಯೆಗಳ ತಕರಾರುಗಳ ರಾಜ್ಯ ಸರ್ಕಾರ ಸರಿಪಡಿಸಿಕೊಳ್ಳಬೇಕು. ಭದ್ರಾ ಮೇಲ್ದಂಡೆ ಚಿತ್ರದುರ್ಗ ಮುಖ್ಯ ಕಾಲುವೆ ಕಾಮಗಾರಿ ಶೇ.80ರಷ್ಟು ಮುಗಿದಿದ್ದು, ಬರಪೀಡಿತ ತಾಲೂಕುಗಳಾದ ಚಳ್ಳಕೆರೆ, ಹಿರಿಯೂರು ಮತ್ತು ಚಿತ್ರದುರ್ಗಕ್ಕೆ ಸಂಬಂಧಿಸಿದಂತೆ 69 ಸಾವಿರ ಹೆಕ್ಟೇರು ಪ್ರದೇಶದ ಹನಿ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿಯೂ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ತರಿಕೆರೆ ಭಾಗದಲ್ಲಿ ಈಗಾಗಲೇ ಹನಿ ನೀರಾವರಿ ಅಳವಡಿಕೆ ಕಾರ್ಯ ಪ್ರಾರಂಭಿಸಲಾಗಿದೆ. ಇದೇ ಮಾದರಿ ಈ ಮೂರು ತಾಲೂಕುಗಳಲ್ಲಿ ಕೈಗೆತ್ತಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಬಂದ್‌ನಲ್ಲಿ ಪಾಲ್ಗೊಂಡವರು: ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ,ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಸರ್ವೋದಯ ಕರ್ನಾಟಕದ ಮುಖಂಡ ಜೆ.ಯಾದವರೆಡ್ಡಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್, ಜಿ.ಬಿ.ಶೇಖರ್, ರಜನಿ ಶಂಕರ್, ಸಿಪಿಐ ಕಾರ್ಯದರ್ಶಿ ಜಿ.ಸಿ.ಸುರೇಶ್ ಬಾಬು, ಹಮಾಲರ ಸಂಘದ ಅಧ್ಯಕ್ಷ ಬಸವರಾಜಪ್ಪ, ಕರುನಾಡ ವಿಜಯ ಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್, ವೀಣಾ ಗೌರಕ್ಕನವರ, ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಸಂಘದಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಜೆ. ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ವೈ ಕುಮಾರ್, ಉಪಾಧ್ಯಕ್ಷ ಕೆ ಗೌಸ್ ಫೀರ್, ಎಂಆರ್ ನರಸಿಂಹಸ್ವಾಮಿ, ನಾದಿ ಅಲಿ, ರಾಜ್ಯ ಖಜಾಂಚಿ ಈಶ್ವರಪ್ಪ, ರಾಜಪ್ಪ, ಈ ರಾಘವೇಂದ್ರ ,ತಿಮ್ಮಯ್ಯ, ಮದ್ದನ ಕುಂಟೆ ಕೃಷ್ಣ ,ಜಿಲ್ಲಾ ಟೈಲ್ಸ್ ಮತ್ತು ಗ್ರಾನೈಟ್ ಸಂಘದ ಅಧ್ಯಕ್ಷ ಚಂದ್ರಪ್ಪ,ಸಮೃದ್ಧಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎಲ್ ವೆಂಕಟೇಶಪ್ಪ, ಸಂಘಟನಾ ಕಾರ್ಯದರ್ಶಿ ಮಾಂತೇಶ್, ತಿಪ್ಪೇಸ್ವಾಮಿ, ಸಿಪಿಐನ ಉಮಾಪತಿ, ರೈತ ಸಂಘದ ಮುಖಂಡರುಗಳಾದ ಬಸ್ತಿಹಳ್ಳಿ ಸುರೇಶ್ ಬಾಬು,ಕೆ.ಸಿ.ಹೊರಕೇರಪ್ಪ, ಬೇಡರೆ್ಡ್ಡಿಹಳ್ಳಿ ಬಸವರೆಡ್ಡಿ, ಮಲ್ಲಾಪುರ ತಿಪ್ಪೇಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ, ಹುಣಿಸೆಕಟ್ಟೆ ಕಾಂತರಾಜ್, ಲಕ್ಷ್ಮಿಕಾಂತ್,ಈಚಗಟ್ಟದ ಸಿದ್ದವೀರಪ್ಪ, ಕಬ್ಬಿಗೆರೆ ನಾಗರಾಜ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ,ಕರ್ನಾಟಕ ರಕ್ಷಣಾ ವೇದಿಕೆಯ ರಮೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಎಐಡಿಎಸ್ ಓ ರವಿಕುಮಾರ್, ಮಹಿಳಾ ಸಾಂಸ್ಕೃತಿಕ ಸಂಘದ ಕುಮುದಾ,ಜನಶಕ್ತಿ ಸಂಘಟನೆಯ ಷಫಿ,ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯ ಗಣೇಶ್, ಶಾರದಾ ಬ್ರಾಸ್ ಬ್ಯಾಂಡ್ ಗುರುಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಹೆಚ್.ಸಿ.ನಿರಂಜನಮೂರ್ತಿ, ಡಿ.ಎನ್.ಮೈಲಾರಪ್ಪ, ಕಾಂಗ್ರೆಸ ಮುಖಂಡ ಎನ್.ಡಿ.ಕುಮಾರ್, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ರಘುರಾಮರೆಡ್ಡಿ, ಕಾಪಿಪುಡಿ ಪರಮೇಶ್, ತಕ್ಕಡಿ ಸುರೇಶ್, ಕಸಾಪ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಚಿತ್ರದುರ್ಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಎಂ.ಆರ್ ದಾಸೇಗೌಡ, ಕಲ್ಲಹಳ್ಳಿ ಲಕ್ಷ್ಣಣರೆಡ್ಡಿ