ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಕಾಳೇನಹಳ್ಳಿ ಹಾಗೂ ಮುಂಡುಗದೊರೆ ಗ್ರಾಮ ವ್ಯಾಪ್ತಿಯ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಸ್ಥಳೀಯರ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಟ್ರಂಚ್ ತೆಗೆದು ಗಣಿಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.ತಹಸೀಲ್ದಾರ್ ಪರುಶುರಾಮ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿರುವುದು ಕಂಡು ಬಂದಿದೆ.
ಸ್ಥಳೀಯ ನಿವಾಸಿಗಳು ಹಾಗೂ ರೈತ ಪರ ಸಂಘಟನೆಗಳು ಅರಣ್ಯಕ್ಕೆ ಸೇರಿದ ಜಾಗದಲ್ಲಿ ಮರ ಗಿಡಗಳನ್ನು ತೆಗೆದು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ತಾಲೂಕು ಆಡಳಿತಕ್ಕೆ ಮೂರು ಬಾರಿ ದೂರು ಸಲ್ಲಿಸಿದ್ದವು. ದೂರಿನ ಮೇರೆಗೆ ತಾಲೂಕು ಆಡಳಿತ ಕಾರ್ಯಾಚರಣೆ ನಡೆಸಿದ ವೇಳೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಪರಿಕರ ಸೇರಿ ಇತರೆ ಕುರುಹುಗಳು ಕಂಡು ಬಂದಿದೆ.ಆದರೆ, ಅಧಿಕಾರಿಗಳು ಸ್ಥಳಕ್ಕೆ ಬರುವ ಮಾಹಿತಿ ತಿಳಿದ ಅಕ್ರಮ ಗಣಿಗಾರಿಕೆ ನಡೆಸುವರು ಸ್ಥಳದಿಂದ ಪರಾರಿಯಾಗಿದ್ದಾರೆ. ಕಲ್ಲು ಗಣಿಗಾರಿಕೆ ನಡೆಸುವ ಸಲುವಾಗಿ ವಾಹನಗಳು ಓಡಾಡುವ ಸಲುವಾಗಿ ರಸ್ತೆ ಸಹ ಮಾಡಿಕೊಂಡಿದ್ದರು ಎನ್ನಲಾಗಿದೆ.
ತಹಸೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ಸ್ಥಳದಲ್ಲಿದ್ದ ಪರಿಕರಗಳ ವಶಕ್ಕೆ ಪಡೆದು, ಜೆಸಿಬಿ ಮೂಲಕ ಆ ರಸ್ತೆಯ ಮಧ್ಯ ಟ್ರಂಚ್ ತೆಗೆದು ಆ ರಸ್ತೆಯಲ್ಲಿ ಯಾವುದೇ ವಾಹನಗಳು ಓಡಾಡದ ರೀತಿ ತಡೆವೊಡ್ಡಿದ್ದಾರೆ ಎಂದು ತಿಳಿದು ಬಂದಿದೆ.ತಹಸೀಲ್ದಾರ್ ಪರುಶುರಾಮ್ ಮಾತನಾಡಿ, ಕಾಳೇನಹಳ್ಳಿ ಸರ್ವೇ ನಂಬರ್ 21ಕ್ಕೆ ಸೇರಿದ ಅರಣ್ಯ ಇಲಾಖೆ ಜಾಗದಲ್ಲಿ ಅಕ್ರಮಗಣಿ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಆ ಸ್ಥಳ ಪರಿಶೀಲಿಸಲಾಗಿದೆ. ಈ ಹಿಂದೆ ಕೂಡ ಇದೇ ಸ್ಥಳದಲ್ಲಿ ಅಕ್ರಮ ಗಣಿಗಾರಿಕೆ ಮಾಡದಂತೆ ರಸ್ತೆಗೆ ಟ್ರಂಚ್ ತೆಗೆದು ಹಳ್ಳ ಮಾಡಿದ್ದೆವು. ಇದೀಗ ಮತ್ತೆ ರಸ್ತೆ ಗುಂಡಿ ಮುಚ್ಚಿ ಅಕ್ರಮ ಗಣಿಗಾರಿ ಮಾಡುತ್ತಿದ್ದು, ಯಾರು ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಿಲ್ಲ ಎಂದರು.
ಅರಣ್ಯ ಇಲಾಖೆ ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದು ಅಕ್ರಮ ಗಣಿಗಾರಿಕೆ ನಡೆಸುವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿವರೆಗೆ ಈ ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಿ ಕಾವಲು ಹಾಕಲಾಗುತ್ತದೆ ಎಂದು ತಿಳಿಸಿದರು.ಈ ವೇಳೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸುಬ್ರಮಣ್ಯ, ಆರ್‌ಎಫ್‌ಒ ವಿನೋದ್ ಗೌಡ, ಸಿಪಿಐ ಆನಂದ್ ಕುಮಾರ್ ಸೇರಿದಂತೆ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಹಾಜರಿದ್ದರು. ಕನ್ನಡ ಪರ ಸಂಘಟನೆಗಳ ಮುಖಂಡರಾದ ಕಾಳೇನಹಳ್ಳಿ ಮಹೇಶ್, ಕೊಡಿಶೆಟ್ಟಿಪುರದ ತೇಜಸ್ ಸೇರಿದಂತೆ ಸ್ಥಳೀಯ ನಿವಾಸಿಗಳು ಇದ್ದರು.