ಹೂವಿನಹಡಗಲಿ: ತುಂಗಭದ್ರಾ ನದಿಯಲ್ಲಿ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ನದಿಯಲ್ಲಿನ ಮರಳು ನಿಕ್ಷೇಪ ಸಾಕಷ್ಟು ಕಡೆಗಳಲ್ಲಿ ಹರಡಿಕೊಂಡಿದೆ. ಈ ಮರಳು ಒಂದು ರೀತಿಯಲ್ಲಿ ತೆರೆದ ಖಜಾನೆ ರೀತಿಯಲ್ಲಿದೆ. ಯಾರು ಎಷ್ಟು ಬೇಕಾದರೂ ದೋಚಬಹುದಾಗಿದೆ.
ತಾಲೂಕಿನ ಹರವಿಯಿಂದ ಹಕ್ಕಂಡಿವರೆಗೂ ತುಂಗಭದ್ರಾ ನದಿ ವ್ಯಾಪ್ತಿ ಇದೆ. ಕೆಲ ಭಾಗಗಳಲ್ಲಿ ಮಾತ್ರ ಮರಳಿನ ನಿಕ್ಷೇಪಗಳು ಇಲ್ಲ. ಉಳಿದ ಕಡೆ ಮರಳನ್ನು ಸಿಕ್ಕ ಸಿಕ್ಕವರೂ ಲೂಟಿ ಹೊಡೆದರೂ ಪ್ರಶ್ನಿಸಿಬೇಕಿದ್ದ ಮರಳಿನ ಟಾಸ್ಕ್ ಫೋರ್ಸ್ ಸಮಿತಿ ಮಾತ್ರ ನನಗೆ, ಇದಕ್ಕೆ ಸಂಬಂಧವಿಲ್ಲ ಎಂಬರ್ಥದಲ್ಲಿ ವರ್ತಿಸುತ್ತಿದೆ.ಈಗಾಗಲೇ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ 6 ಮರಳಿನ ಬ್ಲಾಕ್, ಹರಪನಹಳ್ಳಿ ವ್ಯಾಪ್ತಿಯ 2 ಮರಳಿನ ಬ್ಲಾಕ್‌ಗಳನ್ನು ಗುರುತಿಸಿ ಅವುಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು 2 ತಿಂಗಳು ಕಳೆದಿವೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಗುತ್ತಿಗೆ ಪಡೆದಿರುವ ಟೆಂಡರ್‌ದಾರರಿಗೆ ಈವರೆಗೂ ಕಾಮಗಾರಿ ಆದೇಶ ನೀಡಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮರಳು ಅಕ್ರಮ ದಂಧೆಕೋರರು, ಹಗಲು ರಾತ್ರಿ ಮರಳು ಲೂಟಿಗೆ ನಿಂತಿದ್ದಾರೆ.
ಹೂವಿನಹಡಗಲಿ ತಾಲೂಕಿನ ಹರವಿ-2, ಹಿರೇಬನ್ನಿಮಟ್ಟಿ-1, ಕೊಂಬಳಿ-2, ಹಕ್ಕಂಡಿ-1 ಮರಳು ಬ್ಲಾಕ್‌ಗಳಿವೆ. ಹರಪನಹಳ್ಳಿ ತಾಲೂಕಿನಲ್ಲಿ ಕಡತಿ-1, ನಿಟ್ಟೂರು-1 ಮರಳಿನ ಬ್ಲಾಕ್‌ಗಳಿವೆ. ಸದ್ಯದ ಪರಿಸ್ಥಿತಿಯಲ್ಲಿ ನದಿಯಲ್ಲಿನ ಮರಳು ಎತ್ತಲು ಉತ್ತಮ ಅವಕಾಶವಿದೆ. ಆದರೆ ಹರಡಿಕೊಂಡಿರುವ ಮರಳನ್ನು ಲೂಟಿಗೆ ನಿಂತಿರುವ ಅಕ್ರಮ ದಂಧೆಕೋರರಿಗೆ ಕಡಿವಾಣ ಹಾಕುವವರಿಲ್ಲದಂತಾಗಿದೆ.ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಇದ್ದಾಗ ಮರಳು ಲೂಟಿ ಮಾಡಲು ಕಬ್ಬಿಣದ ತೆಪ್ಪಗಳನ್ನು ಬಳಕೆ ಮಾಡುತ್ತಿದ್ದರು. ಆದರೆ ಈಗ ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಮರಳು ಎತ್ತಲು ಹಿಂದೇಟು ಹಾಕುತ್ತಿದ್ದಾರೆ. ಇದರ ಬದಲಿಗೆ ಲಕ್ಷಾಂತರ ರು. ಬೆಲೆಬಾಳುವ ಎತ್ತುಗಳನ್ನು ಖರೀದಿಸಿ, ಬಂಡಿಯಲ್ಲಿ ಹಗಲು ಹೊತ್ತು ಸಾಗಾಣೆ ಮಾಡಿ ತಮ್ಮ ಕಣಗಳಲ್ಲಿ ಅಕ್ರಮವಾಗಿ ಸಂಗ್ರಹಿಸುತ್ತಾರೆ. ಆ ಮರಳನ್ನು ರಾತ್ರೋರಾತ್ರಿ ಲಾರಿಗಳಲ್ಲಿ ತುಂಬಿಸಿ ದೂರದ ನಗರ ಪ್ರದೇಶಗಳಿಗೆ ಸಾಗಾಣೆ ಮಾಡುತ್ತಾರೆ.
ರಾತ್ರಿ ವೇಳೆ ನದಿ ತೀರದ ಪ್ರದೇಶಗಳಲ್ಲಿ ವ್ಯಾಪ್ತಿಯ ಹರವಿ, ಬನ್ನಿಮಟ್ಟಿ, ಮೈಲಾರ, ಕುರುವತ್ತಿ, ಲಿಂಗನಾಯಕನಹಳ್ಳಿ, ಕೊಟ್ನಿಕಲ್ಲು, ಮದಲಗಟ್ಟಿ, ಕಂದಗಲ್ಲು, ಪುರ, ಸೋವೇನಹಳ್ಳಿ, ಹಕ್ಕಂಡಿ ಭಾಗಗಳಲ್ಲಿ ಮಧ್ಯ ರಾತ್ರಿ ಲಾರಿಗಳಲ್ಲಿ ಮರಳು ಸಾಗಾಣೆಯಾಗುತ್ತಿದೆ. ಎತ್ತಿನಬಂಡಿಗಳಿಗೆ ಯಾವುದೇ ದಂಡ ಹಾಕಲು ಅವಕಾಶ ಇಲ್ಲ ಎಂಬ ಕಾರಣಕ್ಕಾಗಿ ಮರಳು ಅಕ್ರಮ ಸಾಗಾಣೆಗೆ ಪರ್ಯಾಯ ದಾರಿ ಹುಡುಕಿಕೊಂಡಿದ್ದಾರೆಂಬ ದೂರುಗಳು ಕೇಳಿ ಬರುತ್ತಿವೆ.
ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ಸರ್ಕಾರ ರಚಿಸಿರುವ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಹತ್ತಾರು, ಇಲಾಖೆಗಳ ಅಧಿಕಾರಿಗಳಿದ್ದರೂ ತಡೆಗಟ್ಟಲು ಸಾಧ್ಯವಾಗಿಲ್ಲ.
ಹರವಿ ಸೇರಿದಂತೆ ನದಿ ತೀರದ ಪ್ರದೇಶಗಳಲ್ಲಿ ಮರಳು ಅಕ್ರಮ ತಡೆಯಲು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಯೋಗದಲ್ಲಿ ಜಂಟಿ ದಾಳಿ ಮಾಡುತ್ತೇವೆ. ನದಿ ತೀರದಲ್ಲಿ ಟ್ರಂಚ್ ಹೊಡೆದು ತಡೆಗಟ್ಟಲು ಪ್ರಯತ್ನಿಸುತ್ತೇವೆ ಎನ್ನುತ್ತಾರೆ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ.