ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಈ ಅವ್ಯವಹಾರಗಳ ಬಗ್ಗೆ ವಾರದೊಳಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಿರಂಗ ಚರ್ಚೆಗೆ ಲಿಖಿತ ರೂಪದಲ್ಲಿ ಪ್ರಶ್ನೆಗೆ ಆಹ್ವಾನಿಸಿದ ಅಧ್ಯಕ್ಷರು ಯಾವುದೇ ಪ್ರಶ್ನೆ ಬಂದಿಲ್ಲ ಎಂದು ಬೇಜವಾಬ್ದಾರಿ ತನದಿಂದ ಚರ್ಚೆಯನ್ನು ಮುಟುಕುಗೊಳಿಸಿದ್ದಾರೆ. ಕೂಡಲೇ ಮೈಷುಗರ್ ಆಡಳಿತ ಮಂಡಳಿ ವ್ಯವಹಾರದ ಬಗೆಗಿನ ಶ್ಚೇತಪತ್ರ ಹೊರಡಿಸಬೇಕು. ಇಲ್ಲವಾದಲ್ಲಿ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಖಾನೆಯ 2ನೇ ಪ್ರಮುಖ ಭಾಗವಾದ ಬಿ ಮಿಲ್‌ನ ವಿಲೇವಾರಿಗೆ ಸರ್ಕಾರಿ ಸ್ವಾಧೀನ ಸಂಸ್ಥೆಯಿಂದ ದರದ ಅಂದಾಜು ಮಾಡಿಸದೇ ಖಾಸಗಿ ಸಂಸ್ಥೆಯಿಂದ ಅಂದಾಜಿಲಾಗಿದೆ. ಕಾರ್ಖಾನೆ ಸ್ಥಿರಾಸ್ತಿಯನ್ನು ಸರ್ಕಾರದ ಗಮನಕ್ಕೆ ತರದೇ, ಮ್ಯಾನ್ಯುವಲ್ ಟೆಂಡರ್ ಮೂಲಕ ವಿಲೇವಾರಿ ಮಾಡಲಾಗಿದೆ ಎಂದು ದೂರಿದರು.ಕಳೆದ ಬಾರಿ 1.20 ಲಕ್ಷ ಟನ್ ಕಬ್ಬು ಅರೆದಿದ್ದರೂ ಈ ಹಂಗಾಮಿನಲ್ಲಿ 5 ಲಕ್ಷ ಟನ್‌ಗೂ ಹೆಚ್ಚು ಕಬ್ಬನ್ನು ನುರಿಸುವ ಸಂಬಂಧ ಮಾನವ ಸಂಪನ್ಮೂಲ ಒದಗಿಸುವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿ ಸಂಸ್ಥೆಗೆ ನಷ್ಟ ಉಂಟು ಮಾಡುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.
ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿ, ಮೈಷುಗರ್ ಕಾರ್ಖಾನೆಯನ್ನು ಪಾರದರ್ಶಕವಾಗಿ ನಡೆಸುತ್ತಿರುವುದಾಗಿ ಅಧ್ಯಕ್ಷರು ಹೇಳಿದ್ದಾರೆ. ಆದರೆ, ಕಳೆದೆರಡು ಸಾಲಿನಲ್ಲಿ ನಷ್ಟದಲ್ಲಿ ನಡೆಯುತ್ತಿರುವುದರ ಬಗ್ಗೆ ಹಾಗೂ ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುವುದರ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಮೈಷುಗರ್ ಮಾಜಿ ಅಧ್ಯಕ್ಷ ನಾಗರಾಜಪ್ಪ ಅವರೊಂದಿಗೆ ಸಿ.ಡಿ.ಗಂಗಾಧರ್ ಹೊಂದಾಣಿಕ ಮಾಡಿಕೊಂಡಿದ್ದಾರೆ. ಆದ್ದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಅವರ ಪಕ್ಷದ ಸರ್ಕಾರವೇ ಅಧಿಕಾರದಲ್ಲಿದ್ದು, ಕಳೆದ 3 ವರ್ಷಗಳಿಂದ 127 ಕೋಟಿ ರು. ಹಗರಣ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದರು.
ಮೈಷುಗರ್‌ನ ಪ್ರಭಾರ ವ್ಯವಸ್ಥಾಪಕ ಮಂಗಲ್‌ದಾಸ್ ಅವರಿಗೆ ಕಾನೂನು ಹಾಗೂ ಕಾರ್ಖಾನೆಯ ತಾಂತ್ರಿಕ ವಿಭಾಗದ ಅನುಭವವಿಲ್ಲ. ಸರ್ಕಾರದ ಕಬ್ಬು ಅಭಿವೃದ್ಧಿ ಆಯುಕ್ತರ ಜ್ಞಾಪನ ಪತ್ರದ ಗಂಭೀರ ವಿಷಯಗಳಿಗೆ ಉತ್ತರ ನೀಡದೇ ಕರ್ತವ್ಯ ಲೋಪ ಎಸಗಿದ್ದಾರೆ. ಈ ಕೂಡಲೇ ಅವರನ್ನು ವಜಾಗೊಳಿಸಿ ಕಾರ್ಖಾನೆಗೆ ತಾಂತ್ರಿಕ ಜ್ಞಾನವುಳ್ಳ ಕಾಯಂ ಅಧಿಕಾರಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.ಜಿಲ್ಲಾಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿದ ವೇಳೆ ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಕಾರ್ಖಾನೆ ಸಹಾಯಕ ಭದ್ರತಾಧಿಕಾರಿ ಬಿ.ಎನ್.ವಿಜೇತ್‌ಕುಮಾರ್ ಅವರನ್ನು ಅಮಾನತು ಮಾಡಿರುವುದು ಸರಿಯಲ್ಲ. ಮೈಷುಗರ್ ಅಧ್ಯಕ್ಷರು ನನ್ನನ್ನು ಖಾಸಗಿ ಕಾರ್ಖಾನೆಯೊಂದಿಗೆ ಶಾಮೀಲಾಗಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ದಾಖಲೆ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರಸನ್ನಕುಮಾರ್, ತಾಲೂಕು ಅಧ್ಯಕ್ಷ ಭೀಮೇಶ್, ಅಂಕಪ್ಪ ಇದ್ದರು.