ಕುಂದಾಪುರ: ಇಲ್ಲಿನ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (ಐಎಂಜೆಐಎಸ್‌ಸಿ)ನಲ್ಲಿ 2026-27ನೇ ಸಾಲಿನ ನೂತನ ವಿದ್ಯಾರ್ಥಿಗಳಿಗಾಗಿ ಉತ್ಸಾಹದ ‘ದೀಕ್ಷಾರಂಭ’ದೊಂದಿಗೆ ಶೈಕ್ಷಣಿಕ ವರ್ಷಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ನೂತನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲ ಡಾ. ಪ್ರತಿಭಾ ಎಂ. ಪಟೇಲ್‌, ಈ ದೀಕ್ಷಾರಂಭವು ಉನ್ನತ ಶಿಕ್ಷಣದ ಪ್ರಯಾಣದ ಮೊದಲ ಹೆಜ್ಜೆ ಎಂದು ಬಣ್ಣಿಸಿದರು. ರಾಷ್ಟ್ರೀಯ ಚೆಸ್ ದಿನದಿಂದ ಸ್ಫೂರ್ತಿ ಪಡೆದು ಮಾತನಾಡಿದ ಅವರು, ಜೀವನವು ಚೆಸ್ ಆಟದಂತಿದೆ. ಪ್ರತಿ ನಡೆಯಲ್ಲೂ ಯೋಜನೆ, ತಾಳ್ಮೆ, ತಂತ್ರ ಮತ್ತು ದೂರದೃಷ್ಟಿ ಇರಬೇಕು. ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ, ಶಿಸ್ತು ಮತ್ತು ಕಲಿಕೆಯ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ. ಬಿ.ಎಚ್.ವಿ. ಪೈ ಅವರು ಕೃತಕ ಬುದ್ಧಿಮತ್ತೆ ಶಿಕ್ಷಣ ಮತ್ತು ವೃತ್ತಿಜೀವನವನ್ನು ಹೇಗೆ ಬದಲಿಸುತ್ತಿದೆ ಎಂಬುದರ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ಅಪ್‌ಗ್ರೇಡ್ ಮಾಡಿಕೊಳ್ಳಬೇಕು ಎಂದು ಹೇಳಿದರು.

ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಎಸ್.ಎನ್. ಭಟ್ ಅಧ್ಯಕ್ಷತೆ ವಹಿಸಿ, ಸಂಸ್ಥೆ ನೀಡುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣ ಮತ್ತು ವ್ಯಕ್ತಿತ್ವದಲ್ಲಿ ಉತ್ಕೃಷ್ಟತೆ ಸಾಧಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗದ ಮುಖ್ಯಸ್ಥೆ ಪ್ರೊ. ಸ್ವರ್ಣರಾಣಿ ಯು.ಪಿ. ಸ್ವಾಗತಿಸಿದರು. ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಪ್ರೊ. ಶಿಲ್ಪಾಶ್ರೀ ವಂದಿಸಿದರು. ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕಿ ರಕ್ಷಾ ಕೆ.ಸಿ. ಅತಿಥಿಗಳನ್ನು ಪರಿಚಯಿಸಿದರು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಾಜೇಶ್ವರಿ ಆರ್. ಶೆಟ್ಟಿ ನಿರೂಪಿಸಿದರು.